23.1 C
Sidlaghatta
Tuesday, July 23, 2024

ಗ್ಯಾಡ್ಗೆಟ್ (ಗ್ಯಾಜೆಟ್) ಬಳಸಿದರೂ ಅವುಗಳ ದಾಸರಾಗಬೇಡಿ

- Advertisement -
- Advertisement -

ಮೂವತ್ತು ವರ್ಷದ ಹಿಂದೆ
1. ಸಂಜೆ ಐದರ ನಂತರ ಯಾವುದೇ ಹಳ್ಳಿಯ ರಸ್ತೆಯಲ್ಲಿ ಒಮ್ಮೆ ಓಡಾಡಿದ್ದರೆ ಊರಿನ ಹೆಚ್ಚಿನ ಜನರನ್ನು ಭೇಟಿಯಾಗಿಬಿಡಬಹುದಿತ್ತು. ಊರ ಹೆಂಗಸರೆಲ್ಲಾ ಅವರವರ ಮನೆಯೆದುರಿನ ಕಟ್ಟೆಯ ಮೇಲೆ ಕುಳಿತು ಯಾವ್ಯಾವುದೋ ಗಾಸಿಪ್‍ಗಳನ್ನು ಸವಿಯುತ್ತಿದ್ದರು! ಊರ ಗಂಡಸರೂ ಅದರಲ್ಲಿ ಭಾಗವಹಿಸುತ್ತಿದ್ದರು ಅಥವಾ ಊರ ಮುಂದಿನ ದೊಡ್ಡ ಮರದಡಿಯಲ್ಲಿ, ಇಲ್ಲವೇ ದೇವಸ್ಥಾನಗಳ ಜಗಲಿಯ ಮೇಲೆ ಅವರ ವಿಶೇಷ ಸಭೆಗಳು ನಡೆಯುತ್ತಿದ್ದವು. ಯಾವುದೇ ಹಳ್ಳಿಗೆ ಹೋದರೂ ಸಂಜೆ ಊರಿನಲ್ಲಿ ಸುತ್ತಾಡಿದರೆ ಅಲ್ಲಿನ ಹೆಚ್ಚಿನ ಜನರ ಪರಿಚಯ ಮಾಡಿಕೊಳ್ಳುವುದು ಸಾಧ್ಯವಾಗುತ್ತಿತ್ತು.
2. ಎಪ್ಪತ್ತರ ದಶಕದಲ್ಲಿ ನಾನು ಶಿವಮೊಗ್ಗದಲ್ಲಿ ಕಾಲೇಜಿಗೆ ಹೋಗುತ್ತಿದ್ದಾಗ ಸಂಜೆ ಐದು ಗಂಟೆಯಾಗುವುದಕ್ಕಾಗಿಯೇ ಕಾಯುತ್ತಿದ್ದೆ. ಸ್ನೇಹಿತರೆಲ್ಲಾ ಸೇರಿ ಬಡಾವಣೆಯ ರಸ್ತೆಯಲ್ಲಿ ತಿರುಗಾಡುವುದೆಂದರೆ ನಮಗೆ ರೋಮಾಂಚಕಾರಿ ಅನುಭವ. ಯಾಕೇಂದ್ರೆ ಆಗ ಹುಡುಗಿಯರೆಲ್ಲಾ ಮನೆಯ ಕಾಂಪೌಂಡಿಗೋ, ಗೇಟಿಗೋ ಆತುಕೊಂಡು ಹರಟೆ ಕೊಚ್ಚುತ್ತಾ ಇರುತ್ತಿದ್ದರು. ನಡುನಡುವೆ ನಮ್ಮ ಕಡೆ ಒಮ್ಮೆ ಕುಡಿನೋಟ ಹರಿಸಿಬಿಟ್ಟರೆ ಅವತ್ತಿನ ಕೂಲಿ ಗಿಟ್ಟಿತು ಎಂಬ ಸಾರ್ಥಕತೆಯನ್ನು ಅನುಭವಿಸುತ್ತಿದ್ದೆವು!
3. ನಮ್ಮ ಮನೆಯಲ್ಲಿ ರಾತ್ರಿ ಊಟವಾದ ಮೇಲೆ ಒಂದು ಗಂಟೆ ನಾವು ಐದು ಮಕ್ಕಳು ಮತ್ತು ನಮ್ಮಪ್ಪ ಅಮ್ಮ ಎಲ್ಲಾ ಸೇರಿ ಹರಟೆ ಹೊಡೆಯುತ್ತಿದ್ದೆವು. ಸರಸ ಮಾತುಗಾರನಾದ ನಮ್ಮಣ್ಣ ಇದ್ದರಂತೂ ಸಮಯ ಕಳೆಯುವುದು ತಿಳಿಯುತ್ತಲೇ ಇರಲಿಲ್ಲ. ನಮ್ಮ ಮನೆಗೆ ಬರುವ ನೆಂಟರೂ ಇದರಲ್ಲಿ ಮುಕ್ತವಾಗಿ ಭಾಗವಹಿಸುತ್ತಿದ್ದರು. ಎಷ್ಟೋ ನೆಂಟರುಗಳು ಇದಕ್ಕಾಗಿಯೇ ನಮ್ಮ ಮನೆಯಲ್ಲಿ ರಾತ್ರಿ ಉಳಿಯಲೂ ಬರುತ್ತಿದ್ದರು.
4. ಜನ ಬಸ್ ನಿಲ್ದಾಣದಲ್ಲಿ ಅಥವಾ ಇನ್ನಿತರ ಸಾರ್ವಜನಿಕ ಸ್ಥಳಗಳಲ್ಲಿ ಸಮಯ ಕಳೆಯಲು ಪಕ್ಕದವರೊಡನೆ ಮಾತು ಬೆಳೆಸುತ್ತಿದ್ದರು. ಇದರಿಂದ ಉತ್ತಮ ಸ್ನೇಹಿತರು ಸಿಗುವ ಸಾಧ್ಯತೆಗಳಿತ್ತು. ಹಲವಾರು ಬಾರಿ ಹೆಣ್ಣು ಗಂಡಿನ ವ್ಯವಹಾರಗಳು ಕೂಡ ಇಂತಹ ಕಡೆಗಳಲ್ಲಿ ಕುದುರಿ ಕೆಲವರಿಗೆ ಕಂಕಣ ಬಲ ಕೂಡಿ ಬರುತ್ತಿತ್ತು! ಆಸ್ತಿ ಖರೀದಿ ಅಥವಾ ಮಾರಾಟಗಳು ಕಮೀಷನ್ ರಹಿತವಾಗಿ ನಡೆಯುತ್ತಿತ್ತು.
5. ಹಳ್ಳಿಗಳಲ್ಲಿ ಮದುವೆ ಮತ್ತಿತರ ಸಮಾರಂಭಗಳಿಗೆ ನೆಂಟರಿಷ್ಟರು ಒಂದೆರೆಡು ದಿನ ಮೊದಲೇ ಬಂದು, ಕಾರ್ಯಕ್ರಮದ ಒಂದೆರೆಡು ದಿನ ನಂತರ ಹೋಗುತ್ತಿದ್ದರು. ಪಟ್ಟಣಗಳಲ್ಲಿ ಆ ದಿನ ಬೆಳಗ್ಗೆಯಿಂದ ಸಂಜೆಯವರೆಗಾದರೂ ಒಟ್ಟಿಗಿದ್ದು ಒಬ್ಬರಿಗೊಬ್ಬರು ನೆರವನ್ನು ನೀಡುತ್ತಿದ್ದರು ಮತ್ತು ಸರಸವಾಗಿ ಸಮಯವನ್ನು ಕಳೆಯುತ್ತಿದ್ದರು. ಒಂದು ಮದುವೆ ಅಥವಾ ಸಮಾರಂಭ ಇತರ ಹತ್ತಾರು ಮದುವೆಗಳಿಗೆ ನಾಂದಿಯಾಗುತ್ತಿತ್ತು.
ಆದರೆ ಈಗ?
1. ಸಂಜೆಯಾದೊಡನೆ ಹಳ್ಳಿಯ ಜನರೆಲ್ಲಾ ತಮ್ಮ ನೆಚ್ಚಿನ ಮೆಗಾಧಾರವಾಹಿಗಳಿಗಾಗಿ ಟೀವಿಯ ಮುಂದೆ ಸ್ಥಾಪಿತಗೊಂಡಿರುತ್ತಾರೆ. ರಸ್ತೆಯೆಲ್ಲಾ ಭಣಭಣ, ಮುಚ್ಚಿದ ಬಾಗಿಲುಗಳಿಂದ ಟೀವಿಯ ಸದ್ದು ಮಾತ್ರ ಕೇಳುತ್ತದೆ.
2. ಪೇಟೆಯ ಹುಡುಗರು ಮತ್ತು ಹುಡುಗಿಯರು ಮೊಬೈಲ್‍ನ ಮಾಯಾಜಾಲಕ್ಕೆ ಸಿಕ್ಕು “ಲೈನು” ಹೊಡೆಯುವುದನ್ನೇ ಮರೆತಂತಿದೆ. ದೊಡ್ಡ ಪಟ್ಟಣಗಳಲ್ಲಿ ಬಿಡಿ ಈ ಡೇಟಿಂಗ್ ಅನ್ನುವುದು ಇರಬೇಕಾದರೆ ಲೈನು ಹೊಡೆಯುವುದಕ್ಕೆ ಅರ್ಥವೇ ಇಲ್ಲ! ಸಣ್ಣ ಊರುಗಳಲ್ಲಿಯೂ ಅದರ ಪ್ರಾದೇಶಿಕ ರೂಪಾಂತರಗಳಿವೆ!
3. ನಮ್ಮ ಮನೆಯಲ್ಲಿ ಮಕ್ಕಳೆಲ್ಲಾ ಚದುರಿ ಹೋಗಿದ್ದೇವೆ. ನೆಂಟರೂ ಬರುವುದೂ ಕಡಿಮೆಯಾಗಿದೆ. ಬಂದವರೂ ನಮ್ಮ ಜೊತೆ ಕುಳಿತು ಟೀವಿ ನೋಡುವ ತವಕದಲ್ಲಿರುತ್ತಾರೆಯೇ ಹೊರತು, ಮೊದಲಿನಂತೆ ಮಾತನಾಡಲು ಆಸಕ್ತಿ ತೋರುವುದಿಲ್ಲ. ‘ಮುಕ್ತ’ ಮಾತುಕತೆಗಳಿಗಿಂತ ‘ಮುಕ್ತ ಮುಕ್ತ’ ಹೆಚ್ಚು ಆಕರ್ಷಣೀಯವಾಗಿದೆ!
4. ಬಸ್‍ಗಳಲ್ಲಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಜನ ಮೊಬೈಲ್‍ನಲ್ಲಿ ಮಾತನಾಡುವುದರಲ್ಲಿಯೋ ಅಥವಾ ಎಫ್ ಎಮ್ ರೇಡಿಯೋ ಕೇಳುವುದರಲ್ಲಿಯೋ ಮುಳುಗಿರುತ್ತಾರೆ. ಅಕ್ಕಪಕ್ಕದವರೊಡನೆ ನಾವಾಗಿಯೇ ಮಾತು ಬೆಳೆಸುವುದು ಸೌಜನ್ಯತೆಯಲ್ಲ ಎನ್ನುವ ಪಾಶ್ಚಿಮಾತ್ಯರ ತಪ್ಪು ತಿಳುವಳಿಕೆಯು ನಮ್ಮಲ್ಲೂ ಬೇರೂರುತ್ತಿದೆ.
5. ಮದುವೆ ಮತ್ತಿತರ ಸಮಾರಂಭಗಳಿಗೆ ಆಹ್ವಾನಿತರು ಊಟಕ್ಕೆ ಅರ್ಧ ತಾಸು ಮೊದಲು ಬಂದು, ಗುದ್ದಾಡಿ ಜಾಗ ಮಾಡಿಕೊಂಡು ಉಂಡ ಮರುಕ್ಷಣವೇ ವಾಹನವನ್ನೇರುತ್ತಾರೆ. ಅಲ್ಲಿರುವ ಸಮಯದ ಹೆಚ್ಚಿನ ಪಾಲನ್ನು ಕೂಡ ಮೊಬೈಲು ತಿಂದಿರುತ್ತದೆ.
ಹಾಗಿದ್ದರೆ ಯಾವುದು ಸರಿ?
ಇಷ್ಟೆಲ್ಲಾ ಬರೆದಿರುವುದು ಹಳೆಯದೆಲ್ಲಾ ಸರಿ ಮತ್ತು ಹೊಸದೆಲ್ಲಾ ತಪ್ಪು ಎಂದು ಸೂಚಿಸುವುದಕ್ಕಾಗಿ ಅಂತ ತೀರ್ಮಾನಿಸಬೇಕಿಲ್ಲ. ಹಾಗೆ ನೋಡಿದರೆ ಹಳೆಯದೆಲ್ಲಾ ಅತ್ಯುತ್ತಮವೇನೂ ಆಗಿರಲಿಲ್ಲ. ಆದರೆ ಅದನ್ನು ಸುಧಾರಿಸುವುದು ಅಂದರೆ ಹೊಸ ಸಮಸ್ಯೆಗಳಿಗೆ ಸಿಲುಕಿಕೊಳ್ಳುವುದು ಅಂತೇನೂ ಆಗಬೇಕಿಲ್ಲವಲ್ಲ. ಈ “ಅಭಿವೃದ್ಧಿ ಹೊಂದುವುದು” ಅಥವಾ “ಮುಂದುವರೆಯುವುದು” ಎನ್ನುವುದರ ಪರಿಣಾಮ ಮನುಷ್ಯ ಮನುಷ್ಯರ ನಡುವಿನ ಸಂಪರ್ಕವನ್ನೇ ಕಡಿದು ಹಾಕುವುದು ಎಂದಾಗಿದೆಯೆಲ್ಲಾ, ಇದೆಷ್ಟು ಆರೋಗ್ಯಕರ ಎನ್ನುವುದಷ್ಟೇ ಇಲ್ಲಿನ ಪ್ರಶ್ನೆ.
ಹಿಂದೆಲ್ಲಾ ಜನರು ಒಟ್ಟಾಗಿ ಸೇರಿದಾಗ ಹೆಚ್ಚಿನ ಸಮಯದಲ್ಲಿ ಅನಗತ್ಯ ಗಾಸಿಪ್‍ಗಳು, ಯಾರನ್ನಾದರೂ ಹಣಿಯುವ ಕುತಂತ್ರಗಳು, ಬರೀ ಒಣ ರಾಜಕೀಯ ಚರ್ಚೆ, ಬೇಡದ ಊರ ಉಸಾಪರಿ-ಇಂತಹವುಗಳೇ ನಡೆಯುತ್ತಿದ್ದವು ಎಂದುಕೊಳ್ಳೋಣ. ಆದರೆ ಅಲ್ಲಿ ವ್ಯಕ್ತಿ ವ್ಯಕ್ತಿಗಳ ನಡುವೆ ಸಂಪರ್ಕ ಮತ್ತು ಸಂವಹನವೇರ್ಪಡುತ್ತಿತ್ತು. ಆಗ ನಮ್ಮೊಳಗಿನ ಭಾವನೆಗಳು ಹೊರಬಂದು ಮನಸ್ಸು ನಿರಾಳವಾಗುತ್ತಿತ್ತು. ಇದರಿಂದ ಜಗಳ, ಹೊಡೆದಾಟಗಳಾಗುವ ಸಾಧ್ಯತೆಗಳು ಇದ್ದರೂ, ಸಂವಹನವೇ ಇಲ್ಲದ ಸ್ಥಿತಿಗಿಂತ ಇಂತಹ ಋಣಾತ್ಮಕ ಸಂವಹನೆಯಾದರೂ ಇರುವುದು ಉತ್ತಮ ಎಂದು ಮನಶ್ಯಾಸ್ತ್ರಜ್ಞರು ಮತ್ತು ಸಾಮಾಜಿಕ ವಿಜ್ಞಾನಿಗಳೆಲ್ಲರೂ ಒಪ್ಪುತ್ತಾರೆ. ಸಂಘಜೀವಿಯಾದ ಮನುಷ್ಯನ ಭಾವನಾತ್ಮಕ ಅಗತ್ಯಗಳು ಇಂತಹ ಕೌಟುಂಬಿಕ ಮತ್ತು ಸಾಮಾಜಿಕ ವ್ಯವಸ್ಥೆಯಲ್ಲಿ ಪೂರ್ಣಗೊಳ್ಳುತ್ತಿದುದರಿಂದ ಆತ ಮಾನಸಿಕವಾಗಿ ಸಮಸ್ಥಿತಿಯಲ್ಲಿರುವ ಸಾಧ್ಯತೆಗಳೂ ಹೆಚ್ಚಾಗಿದ್ದವು.
ಇವತ್ತಿನ ಸ್ಥಿತಿಯ ಬಗೆಗೆ ಮೇಲೆ ಹೇಳಿರುವ ಕೆಲವು ಪ್ರಾತಿನಿಧಿಕ ಸಂದರ್ಭಗಳನ್ನು ಗಮನಿಸಿದರೆ, ಎಲೆಕ್ಟ್ರಾನಿಕ್ ಗ್ಯಾಡ್ಗೆಟ್‍ಗಳ ಆಕರ್ಷಣೆ, ಮಾನವೀಯ ಸಂಬಂಧಗಳ ಕರುಳಬಳ್ಳಿಯನ್ನು ಕತ್ತರಿಸುತ್ತಿದೆ ಎನ್ನುವುದು ಅರಿವಾಗುತ್ತದೆ. ಹೀಗೆ ಮನುಷ್ಯರ ನಡುವಿನ ಸಂವಹನ ಕಡಿಮೆಯಾಗುತ್ತಾ ಬಂದಂತೆ ನಮ್ಮ ಭಾವನಾತ್ಮಕ ಅಸ್ಥಿರತೆಗಳು ಹೆಚ್ಚುತ್ತವೆ. ಹದಗೆಡುತ್ತಿರುವ ಸಾಮಾಜಿಕ ವ್ಯವಸ್ಥೆ, ಹಾಳಾಗುತ್ತಿರುವ ಕೌಟುಂಬಿಕ ಸಂಬಂಧಗಳು, ಹೆಚ್ಚುತ್ತಿರುವ ವಿಚ್ಛೇದನಗಳು, ಏರುತ್ತಿರುವ ಮಧುಮೇಹ ಮತ್ತಿತರ “ಲೈಫ್ ಸ್ಟೈಲ್ ಕಾಯಿಲೆಗಳು” -ಇವೆಲ್ಲವುಗಳಿಗೆ ಸಾಕಷ್ಟು ಕಾಣಿಕೆ ನೀಡುತ್ತಿರುವುದು ನಮ್ಮಲ್ಲಿ ವ್ಯಕ್ತಪಡಿಸದೇ ಉಳಿದಿರುವ ಭಾವನೆಗಳ ಒತ್ತಡ ಎಂದು ಇತ್ತೀಚೆಗೆ ಎಚ್ಚರಿಸಲಾಗುತ್ತಿದೆ.
ಎಲ್ಲಾ ಗ್ಯಾಡ್ಗೆಟ್‍ಗಳೂ ಹಾನಿಕರವೇ?
ಕಳೆದ ಐದಾರು ವರ್ಷಗಳಲ್ಲಿ ಗ್ಯಾಡ್ಗೆಟ್‍ಗಳ ಮಹಾಪೂರದಲ್ಲಿ ಮಾರುಕಟ್ಟೆಗಳು ಕೊಚ್ಚಿಕೊಂಡು ಹೋಗಿವೆ. ಇವುಗಳಲ್ಲಿ ಹಲವಂತೂ ನಮಗೆ ಗಾಳಿ, ನೀರುಗಳಷ್ಟೇ ಅನಿವಾರ್ಯ ಎನ್ನುವ ಮನಸ್ಥಿತಿಯನ್ನು ನಾವು ತಲುಪಿದ್ದೇವೆ. ಹಾಗಾಗಿ ಇವುಗಳನ್ನು ತೊರೆಯುವುದಂತೂ ಆಸಾಧ್ಯ. ಹೆಚ್ಚೆಂದರೆ ಇವುಗಳ ಬಳಕೆಯನ್ನು ನಿಯಂತ್ರಿಸಿಕೊಳ್ಳುವುದರ ಬಗೆಗೆ ಯೋಚಿಸಬಹುದೇನೋ.
ಮನುಷ್ಯ ಸಂಬಂಧಗಳಿಗೆ ಹೆಚ್ಚಿನ ಆತಂಕಗಳನ್ನೊಡ್ಡಿರುವುದು ದೂರಸಂಪರ್ಕ ಸಾಧನಗಳು, ಅದರಲ್ಲೂ ಪ್ರಮುಖವಾಗಿ ಟೀವಿ, ಮೊಬೈಲ್, ಕಂಪ್ಯೂಟರ್ ಹಾಗೂ ಅಂತರ್ಜಾಲ. ವಿಪರ್ಯಾಸವನ್ನು ನೋಡಿ. ಈ ದೂರಸಂಪರ್ಕ ಸಾಧನಗಳು ನಮ್ಮನ್ನು ಕ್ಷಣಮಾತ್ರದಲ್ಲಿ ಪ್ರಪಂಚದೆಲ್ಲಡೆ ಕರೆದೊಯ್ಯುತ್ತವೆ, ಆದರೆ ಪಕ್ಕದಲ್ಲೇ ಇರುವವರಿಂದ ನಮ್ಮನ್ನು ದೂರಮಾಡಿದೆ! ಇವುಗಳು ಭೌತಿಕ ಪ್ರಪಂಚವನ್ನು ಚಿಕ್ಕದಾಗಿಸಿದೆ, ಆದರ ಜೊತೆಗೆ ವಿಶ್ವಕ್ಕಿಂತ ವಿಶಾಲವಾಗಿದ್ದ ನಮ್ಮ ಮನೋಪ್ರಪಂಚವನ್ನೂ ಅನುಭವಕ್ಕೇ ಬರದಷ್ಟು ಚಿಕ್ಕದಾಗಿಸಿದೆ!
ನಾವೆಲ್ಲಾ ನೆನಪಿಡಬೇಕಾದದ್ದು ಪಾಶ್ಚಿಮಾತ್ಯರ ಭೌತಿಕ ಸಾಧನಗಳಷ್ಟೇ ನಮಗೆ ಬೇಕು, ಆದರೆ ಅವರ ಜೀವನ ಶೈಲಿ ಮಾತ್ರ ಬೇಡ ಎಂದರೆ ಅದು ಸಾಧ್ಯವಿಲ್ಲದ ಕನಸು. ಗ್ಯಾಡ್ಗೆಟ್‍ಗಳ ಜೊತೆಗೆ ಅಲ್ಲಿನ ಸಾಮಾಜಿಕ ಪಿಡುಗುಗಳಾದ ಮುಕ್ತ ವಿಚ್ಛೇದನಗಳು, ಸಡಿಲಗೊಂಡ ಕೌಟುಂಬಿಕ/ಸಾಮಾಜಿಕ ಸಂಬಂಧಗಳು, ಹೆಚ್ಚುತ್ತಿರುವ ಭಾವನಾತ್ಮಕ ಮತ್ತು ಆರೋಗ್ಯದ ಸಮಸ್ಯೆಗಳು-ಎಲ್ಲವನ್ನೂ ನಾವು ಒಪ್ಪಿಕೊಳ್ಳಬೇಕು. ಈ ಸಮಸ್ಯೆಗಳಿಗೆ ಗ್ಯಾಡ್ಗೆಟ್‍ಗಳು ಮಾತ್ರ ಕಾರಣವೆಂದೇನಲ್ಲ. ಆದರೆ ಇವುಗಳ ಕಾಣಿಕೆ ಸಾಕಷ್ಟಿದೆ. ಕುಟುಂಬದ ಸದಸ್ಯರ ಮಧ್ಯದ ಸಂವಹನೆಯೂ ಕೂಡ ಈ ಗ್ಯಾಡ್ಗೆಟ್‍ಗಳ ಆಗಮನದ ನಂತರ ಗಣನೀಯವಾಗಿ ಕಡಿಮೆಯಾಗಿದೆ ಎನ್ನುವುದಕ್ಕೆ ನಮ್ಮೆಲ್ಲರ ಮನೆಗಳಲ್ಲೇ ಉದಾಹರಣೆಗಳಿವೆ. ಮಾತು ಕಡಿಮೆಯಾಗುತ್ತಾ ಬಂದಂತೆ ಭಾಷೆ, ಸಾಹಿತ್ಯ, ಕಲೆ ಇವೆಲ್ಲವೂ ದುರ್ಬಲವಾಗುತ್ತಾ ಬರುತ್ತವೆ. ಇವತ್ತಿನ ಮಕ್ಕಳಿಗೆ ಯಾವುದಾದರೂ ನಮಗೆ ಗೊತ್ತಿಲ್ಲದೇ ಇರುವ ವಿಷಯದಲ್ಲಿ ಅಥವಾ ಕೊನೆಗೆ ವಿಷಯವೇ ಇಲ್ಲದೆ ಹರಟೆಹೊಡೆಯಲು ಸಾಧ್ಯ ಎಂದರೆ ಆಶ್ಚರ್ಯಪಡುತ್ತಾರೆ. ಅಷ್ಟೇ ಅಲ್ಲ ಅದು ಸಮಯವನ್ನು ವ್ಯರ್ಥವಾಗಿ ಕಳೆಯುವ ಮಾರ್ಗ ಎಂದುಕೊಂಡಿದ್ದಾರೆ. ಇಂತಹ ಹರಟೆಗೂ ಕೂಡ ಮಾನವನ ಸಂಸ್ಕøತಿಯ ಬೆಳವಣಿಗೆಯಲ್ಲಿ ಪ್ರಮುಖ ಸ್ಥಾನವಿತ್ತು ಎನ್ನುವುದನ್ನು ಮಕ್ಕಳಿಗೆ ತಿಳಿಸಬೇಕಾಗಿದೆ.
ಹಾಗಾಗಿ ತಕ್ಷಣ ಗ್ಯಾಡ್ಗೆಟ್‍ಗಳ ಬಳಕೆಯನ್ನು ನಿಯಂತ್ರಿಸಬೇಕು. ಈ ನಿಯಂತ್ರಣದ ಪ್ರಾರಂಭ ಈ ತಲೆಮಾರಿನಿಂದಲೇ ಆರಂಭವಾಗಬೇಕು. ಏಕೆಂದರೆ ಮುಂದಿನ ತಲೆಮಾರುಗಳು ಹುಟ್ಟಿನಿಂದಲೇ ಗ್ಯಾಡ್ಗೆಟ್‍ಗಳ ಬಳಕೆ ಪ್ರಾರಂಭಿಸಿರುವುದರಿಂದ ನಿಯಂತ್ರಣ ಮಾತೇ ಅವರ ಕಲ್ಪನೆಯನ್ನು ಮೀರಿರುತ್ತದೆ. ನಮ್ಮ ನಡುವೆ ಮುಖಾಮುಖಿಯಾದ ಸಂಪರ್ಕವನ್ನು (ಮೆಸೇಜು, ಈಮೈಲ್ ಫೇಸ್ ಬುಕ್ ಸಂಪರ್ಕಗಳಲ್ಲ!) ಮತ್ತೆ ಸ್ಥಾಪಿಸಿಕೊಳ್ಳುವ ಬಗೆಗೆ ನಾವೆಲ್ಲಾ ಕ್ರಿಯಾಶೀಲರಾಗಬೇಕಿದೆ. ಮಕ್ಕಳಿಗೆ ಗ್ಯಾಡ್ಗೆಟ್‍ಗಳ ಹೊರತಾದ ಪ್ರಪಂಚವಿರುವುದರ ಅರಿವು ಮೂಡಿಸಬೇಕು.
ವಸಂತ್ ನಡಹಳ್ಳಿ

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!