34.2 C
Sidlaghatta
Thursday, April 25, 2024

ದಾಂಪತ್ಯದಲ್ಲಿ ಪ್ರೇಮ ಮತ್ತು ಕಾಮ – ಭಾಗ 4

- Advertisement -
- Advertisement -

ಇದನ್ನೆಲ್ಲಾ ಸಾಧಿಸಲು ಸಾಧ್ಯವೇ?
ಇದು ನೂರಾರು ಕೋಟಿ ರೂಪಾಯಿಯ ಪ್ರಶ್ನೆ. ಮನಸ್ಸಿಗೆ ಸಂಬಂಧಿಸಿದ ವಿಷಯಗಳಲ್ಲಿ ಕಾರಣಗಳನ್ನು ಹೇಳಿದಷ್ಟು ಸುಲಭವಾಗಿ ಪರಿಹಾರಗಳನ್ನು ಹುಡುಕಲು ಸಾಧ್ಯವಿಲ್ಲ. ಅದೂ ಅಲ್ಲದೆ ಎಲ್ಲರಿಗೂ ಹೊಂದುವಂತೆ ಸರಳ ಪರಿಹಾರಗಳನ್ನು ನೇರವಾಗಿ, ನಿಖರವಾಗಿ ಕೊಡುವುದೂ ಸಾಧ್ಯವಿಲ್ಲ. ಮೂಲತತ್ವಗಳ ಆಧಾರದ ಮೇಲೆ ಅವರವರ ಮಾನಸಿಕ ಸ್ಥಿತಿಗೆ ಹೊಂದುವಂತಹ ಪರಿಹಾರಗಳನ್ನು ತಜ್ಞರು ಮಾತ್ರ ಸೂಚಿಸಬಲ್ಲರು. ಹಾಗಿದ್ದರೂ ಕೆಲವು ವಿಷಯಗಳನ್ನು ಹೀಗೆ ಸರಳೀಕರಿಸಬಹುದು.
1. ಪತಿಪತ್ನಿಯರಿಗೆ ತಮ್ಮ ಬೇಕು ಬೇಡಗಳ ಬಗೆಗೆ ಸ್ಪಷ್ಟತೆ ಇರಬೇಕು. ಅಷ್ಟೇ ಅಲ್ಲದೆ ತಮ್ಮ ಮನಸ್ಸಿನ ಭಯ, ಗೊಂದಲ, ಹಿಂಜರಿಕೆ ಅಭದ್ರತೆ ಮುಂತಾದ ಭಾವನೆಗಳ ಬಗೆಗೆ ಸರಿಯಾಗಿ ತಿಳಿದುಕೊಂಡಿರಬೇಕು. ಉದಾಹರಣೆಗೆ ಹೆಂಡತಿ ಹಣ ಕೇಳಿದಾಗ ಗಂಡನಿಗೆ ಕೋಪ ಬಂದು ಅವನು ಅವಳನ್ನು ಹಂಗಿಸಿ, ಹೆದರಿಸಿ, ಕೂಗಾಡಿ ಬಾಯಿ ಮುಚ್ಚಿಸಲು ನೋಡುತ್ತಾನೆ. ಹಣದ ತನ್ನ ಅಗತ್ಯವನ್ನು ಮುಂದಿಡುವುದು ಹೆಂಡತಿಯ ಸಮಸ್ಯೆಯಲ್ಲ. ಪತಿಯ ಕೋಪದ ಹಿಂದೆ ಅವನಲ್ಲಿ ಹಣದ ಕೊರತೆಯ ಅಥವಾ ಇರುವ ಹಣವನ್ನು ದುಂದು ಮಾಡುವ ಅವನ ದೌರ್ಬಲ್ಯಗಳಿರಬಹುದು. ಇದನ್ನು ಅವನು ಗುರುತಿಸಿಕೊಳ್ಳದೆ/ಒಪ್ಪಿಕೊಳ್ಳದೆ ತನ್ನ ಕೋಪ ಶಮನಕ್ಕಾಗಿ ಪ್ರಯತ್ನ ಪಟ್ಟರೆ ಅವನು ಯಶಸ್ವಿಯಾಗುವ ಸಾಧ್ಯತೆಗಳು ಕಡಿಮೆ. ಹೆಂಡತಿ ಲೈಂಗಿಕವಾಗಿ ಸಹಕರಿಸುತ್ತಿಲ್ಲವೆಂದರೆ ಅದರಲ್ಲಿ ಅವಳಿಗೆ ಆಸಕ್ತಿಯಿಲ್ಲ ಎಂದಾಗಬೇಕಿಲ್ಲ. ಗಂಡನ ಎಲ್ಲಾ ಅಗತ್ಯಗಳನ್ನು ಪೂರೈಸಿದರೆ ಅವನು ತನ್ನನ್ನು ಕಡೆಗಣಿಸಬಹುದು ಎನ್ನುವ ಭಯ, ಅಭದ್ರತೆ ಅವಳನ್ನು ಕಾಡುತ್ತಿರಬಹುದು. ಹಾಗಾಗಿ ಮೂರು ಬಾರಿ ಬೇಡಿಕೆ ಬಂದಾಗ ಒಂದು ಬಾರಿ ಪೂರೈಸುವ ಸಮೀಕರಣವನ್ನು ಅವಳು ರೂಪಿಸಿಕೊಂಡಿರುತ್ತಾಳೆ!! ಇದರಿಂದ ಪತಿಯನ್ನು ಕಪಿಮುಷ್ಟಿಯಲ್ಲಿಡುವ ಯೋಜನೆ ಅವಳದ್ದು. ಹಾಗಾಗಿ ಅವಳ ಅಭದ್ರತೆಯ ಭಾವನೆಗಳನ್ನು ಪರಿಹರಿಸದೆ ಅವಳಲ್ಲಿ ಲೈಂಗಿಕ ಆಸಕ್ತಿ ಮೂಡಿಸುವುದು ಸಾಧ್ಯವಿಲ್ಲ.
2. ದಂಪತಿಗಳಿಬ್ಬರೂ ತಮ್ಮ ಮಾನಸಿಕ ಒತ್ತಡ, ಆತಂಕಗಳಿಗೆ ಇನ್ನೊಬ್ಬರನ್ನು ಹೊಣೆ ಮಾಡದೆ ಅದನ್ನು ತಮ್ಮೊಳಗೆ ಪರಿಹರಿಸಿಕೊಳ್ಳುವ ಮಾರ್ಗ ಕಂಡುಕೊಳ್ಳಬೇಕು. ಅಂದರೆ ಇಬ್ಬರೂ ತಮ್ಮ ವ್ಯಕ್ತಿತ್ವದ ಪ್ರಬುದ್ಧತೆಯನ್ನು (ಸಾಲಿಡ್ ಸೆನ್ಸ್ ಆಫ್ ಸೆಲ್ಫ್) ಹೆಚ್ಚು ಮಾಡಿಕೊಳ್ಳುತ್ತಾ ಹೋಗಬೇಕು.
3. ಲೈಂಗಿಕ ವಿಷಯಗಳನ್ನೂ ಒಳಗೊಂಡು ಎಲ್ಲಾ ವಿಚಾರಗಳಲ್ಲಿ ತಮ್ಮ ನಡುವೆ ಭಿನ್ನತೆ ಇರುವುದು ಸಹಜ ಎಂದು ಒಪ್ಪಿಕೊಳ್ಳಬೇಕು. ಇಬ್ಬರೂ ಪರಸ್ಪರರ ಅಭಿಪ್ರಾಯ, ಅಭಿರುಚಿಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಸಾಧ್ಯವಾಗಬೇಕು. ಅದನ್ನು ಒಪ್ಪಿಕೊಳ್ಳುವುದು ಕಡ್ಡಾಯವೇನಲ್ಲ, ಆದರೆ ಇನ್ನೊಬ್ಬರನ್ನು ಕೀಳುಗೈಯಬಾರದು. ದಾಂಪತ್ಯವನ್ನು ಒಡೆಯುವ ವಿಚಾರಗಳಲ್ಲದಿದ್ದರೆ ಇಬ್ಬರಿಗೂ ಆಯ್ಕೆಯ ಸ್ವಾತಂತ್ರವಿರಬೇಕು.
4. ಎಂತಹ ಸುಂದರ ದಾಂಪತ್ಯದಲ್ಲೂ ಭಿನ್ನಾಭಿಪ್ರಾಯಗಳು ಮತ್ತು ನೀರಸ ದಿನಗಳು ಸಹಜ. ಅಂತಹ ಸಂದರ್ಭದಲ್ಲಿ ತಾತ್ಕಾಲಿಕವಾಗಿ ಆತಂಕ ಪರಿಹಾರ ಮಾಡಿಕೊಳ್ಳುವತ್ತ ಎಲ್ಲರೂ ಹೊರಳುವುದನ್ನು ಸಾಮಾನ್ಯವಾಗಿ ನೋಡುತ್ತೇವೆ. ತಾತ್ಕಾಲಿಕ ಆತಂಕ, ಕಿರಿಕಿರಿಗಳನ್ನು ಇಬ್ಬರೂ ತಮ್ಮೊಳಗೇ ನಿಭಾಯಿಸಿಕೊಂಡು ಖಾಯಂ ಆದ ಪರಿಹಾರಗಳನ್ನು ಹುಡುಕಿಕೊಳ್ಳಬೇಕು.
5. ಇನ್ನೊಬ್ಬರು ತಮ್ಮ ಭಾಗದ ಜವಾಬ್ದಾರಿಯನ್ನು ನಿರ್ವಹಿಸುತ್ತಿಲ್ಲ ಅಥವಾ ಬದಲಾಗುತ್ತಿಲ್ಲ ಎಂದು ಯಾರೊಬ್ಬರೂ ದೂರಬಾರದು. * ಡಿಫರೆನ್ಷಿಯೇಶನ್‍ನ ಮೂಲ ತತ್ವ ಇನ್ನೊಬ್ಬರನ್ನು ಬದಲಾಯಿಸುವುದಲ್ಲ. ನಮ್ಮನ್ನು ನಾವು ಬದಲಾಯಿಸಿಕೊಳ್ಳುವುದು ಮತ್ತು ಆ ಪ್ರಯತ್ನದಲ್ಲಿ ಇನ್ನೊಬ್ಬರ ಸಹಾಯ ಸಹಕಾರ ನಿರೀಕ್ಷಿಸದೇ ಇರುವುದು. ಇದು ಮೇಲುನೋಟಕ್ಕೆ ಸ್ವಾರ್ಥ ಎನ್ನಿಸಬಹುದು. ಆದರೆ ಮಹಾಪುರುಷರುಗಳು ಸವೆಸಿದ ಹಾದಿ ಎನ್ನುವುದನ್ನು ಮರೆಯಬಾರದು. ಗಾಂಧೀಜಿಯ ಹಟ ಮತ್ತು ಶಿಸ್ತು ಎಷ್ಟೋ ಜನರಿಗೆ ಸ್ವಾರ್ಥ ಅನ್ನಿಸಿದ್ದರೆ ಆಶ್ಚರ್ಯವಿಲ್ಲ.
6. ದಂಪತಿಗಳಲ್ಲೊಬ್ಬರು ತಮ್ಮನ್ನು ಬದಲಾಯಿಸಿಕೊಳ್ಳುತ್ತಾ ಹೋದಾಗ ಇನ್ನೊಬ್ಬರಿಗೆ ಬದಲಾಗುವುದು ಅನಿವಾರ್ಯವಾಗುತ್ತದೆ. ಇಲ್ಲಿ ಇರಬೇಕಾದ ಎಚ್ಚರವೆಂದರೆ ಈ ಹಂತದಲ್ಲಿ ಇಬ್ಬರೂ ಮಾನಸಿಕ ಸ್ಥಿಮಿತವನ್ನು ಕಾಯ್ದುಕೊಳ್ಳಬೇಕಾಗುತ್ತದೆ.
7. ಗಂಡುಹೆಣ್ಣಿನ ನಡುವಿನ ದೀರ್ಘಕಾಲದ ಮದುವೆಯ ಸಂಬಂಧ ವಿಶಿಷ್ಟವಾದದ್ದು. ಆದರೆ ಈ ವಿವಾಹ ಸಂಬಂಧವನ್ನು ವೈಭವೀಕರಿಸದೆ ವಾಸ್ತವದ ನೆಲೆಯಲ್ಲಿ ಹೆಚ್ಚುಹೆಚ್ಚು ಆತ್ಮೀಯತೆಯನ್ನು ನಿಧಾನವಾಗಿ ಸೃಷ್ಟಿಸಿಕೊಳ್ಳುತ್ತಾ ಹೋಗಬೇಕು. ಇದನ್ನು ಮಾಡದೆ ದಂಪತಿಗಳಿಬ್ಬರೂ ಒಬ್ಬರಲ್ಲೊಬ್ಬರು ಭಾವನಾತ್ಮಕವಾಗಿ ವಿಲೀನವಾಗುತ್ತಾ ಹೋದರೆ ತಾತ್ಕಲಿಕ ಪರಿಹಾರಗಳು ಮಾತ್ರ ಸಾಧ್ಯ.
8. ಸಾಕಷ್ಟು ದಂಪತಿಗಳು ಒಬ್ಬರ ದೌರ್ಬಲ್ಯಗಳನ್ನು ಇನ್ನೊಬ್ಬರು ಬೆಂಬಲಿಸಿಕೊಂಡು ಬದುಕುತ್ತಿರುತ್ತಾರೆ. ದಾಂಪತ್ಯದ ಬಂಧ ಪತಿಪತ್ನಿಯರ ದೌರ್ಬಲ್ಯಗಳ ಮೇಲೆ ನಿಲ್ಲಬಾರದು. ಇಬ್ಬರ ವ್ಯಕ್ತಿತ್ವದ ಗಟ್ಟಿತನಗಳು ವಿವಾಹವನ್ನು ಕಳಚದಂತೆ ಬಿಗಿಹಿಡಿಯುವ ಕೊಂಡಿಯಾಗಬೇಕು.
ಇದೆಲ್ಲಾ ಸ್ವಲ್ಪ ಕಷ್ಟದ ಕೆಲಸ ನಿಜ, ಆದರೆ ಇದರಿಂದ ಮುಂದೆ ದೀರ್ಘಕಾಲದ ಸುಖ ದಾಂಪತ್ಯ ಸಾಧ್ಯವಿದೆ. ಅಗತ್ಯವಿದ್ದಾಗ ತಜ್ಞರ ನೆರವನ್ನು ಪಡೆಯಲು ಹಿಂಜರಿದರೆ ನಾವಿನ್ನೂ ಸಮಸ್ಯೆಗಳನ್ನು ಒಪ್ಪಿಕೊಳ್ಳದೆ ಅಲ್ಲಗಳೆಯುವ ಮನಸ್ಥಿತಿಯಲ್ಲಿದ್ದೇವೆ ಎಂದು ತಿಳಿಯಬೇಕು. ಇರುವ ಸಮಸ್ಯೆಗಳನ್ನು ಒಪ್ಪಿಕೊಂಡಾಗ ಮಾತ್ರ ಪ್ರಾಮಾಣಿಕವಾಗಿ ಪರಿಹಾರ ಹುಡುಕುವುದು ಸಾಧ್ಯ.
ಕೊನೆಯ ಮಾತು
ಲೈಂಗಿಕ ತೃಪ್ತಿ ದಂಪತಿಗಳ ಭಾವನಾತ್ಮಕ ಬಂಧವನ್ನು ಗಟ್ಟಿಗೊಳಿಸಬೇಕು, ಇದು ಸಾಧ್ಯವಾದಾಗ ಮಾತ್ರ ಮಾನವನ ಲೈಂಗಿಕತೆಗೆ ಅರ್ಥ ಬರುತ್ತದೆ. ಹಾಗೆ ಗಟ್ಟಿಯಾದ ಬಂಧ ಇನ್ನೂ ಹೆಚ್ಚಿನ ಲೈಂಗಿಕ ಆನಂದಕ್ಕೆ ದಾರಿಮಾಡಿಕೊಡಬೇಕು. ಭಾವನಾತ್ಮಕ ಬಂಧ ಮತ್ತು ಲೈಂಗಿಕ ತೃಪ್ತಿ ಸ್ಪರ್ಧೆಗೆ ಬಿದ್ದು ಒಂದಕ್ಕಿಂತ ಒಂದು ಹೆಚ್ಚಾಗುತ್ತಾ ಹೋದಂತೆ ಜೀವನ ಒಂದು ಅನನ್ಯ ಆಧ್ಯಾತ್ಮಿಕ ಅನುಭವವಾಗುತ್ತದೆ. ಇದಕ್ಕೆ ಕೊನೆ ಇದೆಯೇ ಎನ್ನುವುದು ಯಾರಿಗೂ ತಿಳಿದಿರಲಾರದು. ಆದರೆ ನಾವು ಈ ಬೆಳವಣಿಗೆಯ ಹಾದಿಯಲ್ಲಿ ಇರುವವರೆಗೆ ಜೀವನ ಬೇಸರವಾಗುವುದೇ ಇಲ್ಲ.
ಕ್ರೂಸಿಬಲ್ ಥೆರಪಿ
* ನನ್ನ ಲೇಖನಕ್ಕೆ ಮೂಲ ಪ್ರೇರಣೆ ಕ್ರೂಸಿಬಲ್ ಥೆರಪಿಯ ತತ್ವಗಳು. ಡಾ. ಡೇವಿಡ್ ಶ್ನಾರ್ಕ್ ಎನ್ನವವರು ಅಮೇರಿಕಾದ ಪ್ರಖ್ಯಾತ ಲೈಂಗಿಕ ಮತ್ತು ದಾಂಪತ್ಯ ಮನೋಚಿಕಿತ್ಸಕರಲ್ಲಿ ಒಬ್ಬರು. ಮರ್ರೆ ಬೋವೆನ್ ಎನ್ನುವ ಮನಶಾಸ್ತ್ರಜ್ಞರೊಬ್ಬರು ತಮ್ಮ ಫ್ಯಾಮಿಲಿ ಥಿಯರಿಯಲ್ಲಿ ಪ್ರಸ್ತುತ ಪಡಿಸಿದ “ಡಿಫರೆನ್ಷಿಯೇಶನ್” ಎನ್ನವು ತತ್ವದ ಆಧಾರದ ಮೇಲೆ ಡಾ. ಶ್ನಾರ್ಕ್ ತಮ್ಮದೇ ಆದ ಚಿಕಿತ್ಸಾ ಪದ್ದತಿಯನ್ನು ರೂಪಿಸಿದರು. ಡಿಫರೆನ್ಷಿಯೇಶನ್ ಎನ್ನವು ಶಬ್ದವನ್ನು ಕನ್ನಡದಲ್ಲಿ ವ್ಯಕ್ತಿತ್ವವನ್ನು ಪ್ರಬುದ್ಧಗೊಳಿಸಿಕೊಳ್ಳುವುದು ಎಂದು ರೂಪಾಂತರ ಮಾಡಬಹುದು.
ತಮ್ಮ ಚಿಕಿತ್ಸಾಪದ್ದತಿಯನ್ನು ಡಾ. ಶ್ನಾರ್ಕ್ “ಕ್ರೂಸಿಬಲ್ ಥೆರಪಿ” ಎಂದು ಕರೆದರು. ಕ್ರೂಸಿಬಲ್ ಎಂದರೆ ಲೋಹವನ್ನು ಕರಗಿಸಲು ಉಪಯೋಗಿಸುವ ಮಣ್ಣಿನ ಪಾತ್ರೆ. ಇದು ಅತಿ ಹೆಚ್ಚಿನ ಶಾಖವನ್ನು ತಡೆದುಕೊಳ್ಳುವುದಲ್ಲದೆ ರಾಸಾಯನಿಕ ಕ್ರಿಯೆಗೆ ಒಳಗಾಗುವುದಿಲ್ಲ. ಕ್ರೂಸಿಬಲ್ ಎಂದರೆ ಅಗ್ನಿಪರೀಕ್ಷೆ ಎನ್ನವು ಅರ್ಥವೂ ಇದೆ. ವೈವಾಹಿಕ ಸಂಬಂಧ ಮತ್ತು ದಂಪತಿಗಳ ಪೂರ್ಣ ವ್ಯಕ್ತಿತ್ವ ಇಂತಹ ಮಣ್ಣಿನ ಪಾತ್ರೆಯಲ್ಲಿ ಕುದಿದು ಹದಕ್ಕೆ ಬರಬೇಕು. ಹಾಗೆ ಕುದಿಯುವ ಹಂತ ತೀರಾ ಕಷ್ಟಕರವಾದದ್ದು. ಸಂಬಂಧಗಳು ಒಮ್ಮೆ ಇಂತಹ ಅಗ್ನಿಪರೀಕ್ಷೆಗೆ ಒಳಪಟ್ಟು ಯಶಸ್ವಿಯಾದ ಮೇಲೆ ಅವು ಗಟ್ಟಿಯಾಗಿ ಬಹಳ ಕಾಲ ಬಾಳಬಲ್ಲವು ಎನ್ನವುದು ಈ ಥೆರಪಿಯ ಮೂಲತತ್ವ. ಹೆಚ್ಚಿನ ಶಾಖದಲ್ಲಿ ಕುದಿಯುವ ಕಷ್ಟವನ್ನು ತಡೆದುಕೊಳ್ಳದಿದ್ದರೆ ನಮ್ಮ ವ್ಯಕ್ತಿತ್ವ ಮತ್ತು ಸಂಬಂಧಗಳು ಬದಲಾಗುವುದೇ ಇಲ್ಲ.
ಲೈಂಗಿಕ ಸಮಸ್ಯೆಗಳನ್ನು ಮೂಲವಸ್ತುವಾಗಿಟ್ಟುಕೊಂಡರೂ ಈ ಚಿಕಿತ್ಸಾ ಪದ್ದತಿಯಲ್ಲಿ ದಂಪತಿಗಳು ತಮ್ಮ ವ್ಯಕ್ತಿತ್ವವನ್ನು ಆಮೂಲಾಗ್ರವಾಗಿ ಬದಲಾಯಿಸಿಕೊಂಡು ಅದರ ಮೂಲಕ ಅವರ ಸಂಬಂಧದಲ್ಲಿ ಆತ್ಮೀಯತೆಯನ್ನು ಹೆಚ್ಚಿಸಿಕೊಳ್ಳುತ್ತಾ ಲೈಂಗಿಕ ತೃಪ್ತಿಯನ್ನು ಪಡೆಯುವ ಬಗೆಗೆ ತರಬೇತಿ ನೀಡಲಾಗುತ್ತದೆ. ಲೈಂಗಿಕತೆಯನ್ನು ಕೀಳು ಎಂದುಕೊಳ್ಳದೆ ಅದನ್ನು ದಾಂಪತ್ಯದ ಅತ್ಯಂತ ಪ್ರಮುಖ ಭಾಗವಾಗಿ ಬಳಸಿಕೊಂಡು ನಿರಂತರವಾಗಿ ಆನಂದ ಪಡೆಯುವುದು ಹೇಗೆ ಎನ್ನವುದನ್ನು ಈ ಥೆರಪಿಯಲ್ಲಿ ಕಲಿಸಿಕೊಡಲಾಗುತ್ತದೆ. 1990ರ ದಶಕದಿಂದ ಅಮೇರಿಕಾದಲ್ಲಿ ಚಾಲ್ತಿಯಲ್ಲಿರುವ ಈ ಚಿಕಿತ್ಸಾ ಪದ್ದತಿಯಲ್ಲಿ ತರಬೇತಿ ಪಡೆದವರು ಭಾರತದಲ್ಲಿ ಹೆಚ್ಚೇನಿಲ್ಲ.
ಆಸಕ್ತರು www.Passinatemarriage.com ಮತ್ತು www.Crucibletherapy.com ಜಾಲತಾಣವನ್ನು ನೋಡಬಹುದು. ಜೊತೆಗೆ ಡಾ. ಶ್ನಾರ್ಕ್ ಅವರ ಪ್ರಮುಖ ಪುಸ್ತಕಗಳಾದ “ಪ್ಯಾಶನೇಟ್ ಮ್ಯಾರೇಜ್”, “ಇಂಟಿಮೆಸಿ ಅಂಡ್ ಡಿಸೈರ್” ಮತ್ತು “ರಿಸರೆಕ್ಟಿಂಟ್ ಸೆಕ್ಸ್” ಎನ್ನುವ ಪುಸ್ತಕಗಳನ್ನು ಓದಬಹುದು.
ಮೇಲಿನ ಪುಸ್ತಕಗಳು ಕೇವಲ ಲೈಂಗಿಕ ಸುಖವನ್ನು ಹೆಚ್ಚಿಸಿಕೊಳ್ಳುವ ತಂತ್ರಗಳ ಬಗೆಗೆ ಹೆಚ್ಚು ಒತ್ತು ನೀಡಿಲ್ಲ. ಬದಲಾಗಿ ದಂಪತಿಗಳು ತಮ್ಮ ಮನೋಭಾವ ಮತ್ತು ವ್ಯಕ್ತಿತ್ವಗಳನ್ನು ಅಮೂಲಾಗ್ರವಾಗಿ ಬದಲಾಯಿಸಿಕೊಳ್ಳುವ ಬಗೆಗೆ ಮಹತ್ವ ನೀಡಿದೆ.
ಅವಲಂಬನೆ ಮತ್ತು ಸ್ವಾತಂತ್ರ
ಮಗು ಜನಿಸಿದಾಗ ತಾಯಿಯ ಮೇಲೆ ತನ್ನ ದೈಹಿಕ (ಹಸಿವು, ಶುಚಿತ್ವ) ಮತ್ತು ಮಾನಸಿಕ (ಪ್ರೀತಿ, ಬೆಂಬಲ) ಅಗತ್ಯಗಳಿಗಾಗಿ ಅವಲಂಬಿತವಾಗಿರುತ್ತದೆ. ಬೆಳೆಯುತ್ತಾ ಬಂದಂತೆ ಅದು ಸ್ವತಂತ್ರವಾಗುತ್ತಾ ಬರುತ್ತದೆ. ಈ ಸ್ವಾತಂತ್ರ ಸಂಪೂರ್ಣವೇನಲ್ಲ. ಪೋಷಕರು, ಗುರುಹಿರಯರು, ಸ್ನೇಹಿತರು ಹೀಗೆ ಎಲ್ಲರ ಮೇಲೂ ಒಂದಲ್ಲಾ ಒಂದು ರೀತಿ ಬೇರೆ ರೀತಿಯ ಅವಲಂಬನೆ ಇರುತ್ತದೆ. ಇದು ತಾಯಿಯ ಮೇಲಿನ ಅವಲಂಬನೆಯಂತಲ್ಲದೆ ಒಂದು ರೀತಿಯ ಪರಸ್ಪರ ಅವಲಂಬನೆಯಾಗಿರುತ್ತದೆ. ಮದುವೆಯಾದ ಮೇಲೆ ಪತಿಪತ್ನಿಯರಲ್ಲೂ ಕೂಡ ಪರಸ್ಪರ ಅವಲಂಬನೆ ಇರಲೇಬೇಕು. ಆದರೆ ದುರಾದೃಷ್ಟವೆಂದರೆ ಸಾಂಪ್ರದಾಯಿಕ ಚಿಂತನೆಗಳಾದ ಪ್ರೀತಿ, ತ್ಯಾಗ, ಹೊಂದಾಣಿಕೆಯ ಹೆಸರಿನಲ್ಲಿ ಹೆಚ್ಚಿನ ದಂಪತಿಗಳ ಮಧ್ಯೆ ಕೇವಲ ಅವಲಂಬನೆ ಇರುತ್ತದೆ. ಪರಸ್ಪರ ಅವಲಂಬನೆ ಮತ್ತು ಬರಿಯ ಅವಲಂಬನೆ ಹೊರನೋಟಕ್ಕೆ ಒಂದೇ ರೀತಿ ಅನ್ನಿಸಿದರೂ ಅದರ ವ್ಯತ್ಯಾಸ ಅನುಭವಿಸುವವರಿಗೆ ಗೊತ್ತಿರುತ್ತದೆ. ಪತಿಪತ್ನಿಯರು ಕೇವಲ ಅವಲಂಬಿತರಾದಾಗ ಒಬ್ಬರು ಇನ್ನೊಬ್ಬರ ಒತ್ತಡ ಆತಂಕಗಳನ್ನು ಆ ಕ್ಷಣಕ್ಕೆ ಕಡಿಮೆ ಮಾಡಿ ಸಂಬಂಧವನ್ನು ತಾತ್ಕಲಿಕವಾಗಿ ಸರಿತೂಗಿಸಿಕೊಂಡು ಹೋಗುವುದನ್ನು ಮಾತ್ರ ಯೋಚಿಸುತ್ತಾರೆ. ಉದಾಹರಣೆಗೆ ಗಂಡನ ಕೋಪವನ್ನು ಕಡಿಮೆ ಮಾಡಿ ಅವನನ್ನು ಖುಷಿಯಾಗಿಡುವ ಪ್ರಯತ್ನವನ್ನು ಹೆಂಡತಿ ಮತ್ತು ಹೆಂಡತಿಯ ಬೇಸರವನ್ನು ಅಥವಾ ಹೆದರಿಕೆಯನ್ನು ಕಡಿಮೆ ಮಾಡಿ ಅವಳಿಗೆ ಸಾಂತ್ವನ ನೀಡುವ ಕೆಲಸವನ್ನು ಗಂಡ ಮಾಡುತ್ತಿರಬಹುದು. ಇದರಿಂದ ಇಬ್ಬರಲ್ಲಿಯೂ ಮತ್ತೊಬ್ಬರ ಬಗೆಗೆ ಎಚ್ಚರದಲ್ಲಿರಬೇಕಾದ ನಿರಂತರ ಮಾನಸಿಕ ಒತ್ತಡ, ಆತಂಕಗಳು ಸೃಷ್ಟಿಯಾಗುತ್ತವೆ. ಆದ್ದರಿಂದ ಸಂಬಂಧಗಳು ನಿಧಾನವಾಗಿ ಹದಗೆಡುತ್ತವೆ.
ಇದನ್ನು ತಪ್ಪಿಸಲು ಇಬ್ಬರೂ ತಮ್ಮ ವೈಯುಕ್ತಿಕ ಮಾನಸಿಕ ಸಮಸ್ಯೆಗಳನ್ನು ಸರಿಪಡಿಸಿಕಳ್ಳುವುದಕ್ಕೆ ಇತರರಿಂದ ಸಹಕಾರ ನಿರೀಕ್ಷಿಸಬಾರದು. ಕೋಪವನ್ನು ನಿಭಾಯಿಸುವುದು ಗಂಡನ ಜವಾಬ್ದಾರಿ, ಮತ್ತು ಭಯವನ್ನು ನಿಭಾಯಿಸುವುದು ಹೆಂಡತಿಯ ಜವಾಬ್ದಾರಿ ಅಂದುಕೊಂಡಾಗ ಇಬ್ಬರಲ್ಲಿಯೂ ತಮ್ಮ ಜವಾಬ್ದಾರಿಗಳ ಅರಿವು ಮೂಡುತ್ತದೆ. ಒಬ್ಬರು ಮತ್ತೊಬ್ಬರ ದೌರ್ಬಲ್ಯವನ್ನು ಬೆಂಬಲಿಸದಿದ್ದಾಗ ಇಬ್ಬರೂ ಬದಲಾಗಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ದಾಂಪತ್ಯದ ಸಂಬಂಧ ಇಬ್ಬರ ದೌರ್ಬಲ್ಯಗಳ ಬೆಸುಗೆ ಅಲ್ಲ. ಇಬ್ಬರ ಅತ್ಯುತ್ತಮ ಗುಣಗಳ ಜೋಡಣೆಯಾಗಬೇಕು
ಹೀಗೆ ಎರಡು ಪ್ರಬುದ್ಧ ವ್ಯಕ್ತಿಗಳ ನಡುವೆ ಅನನ್ಯವಾದ ಆತ್ಮೀಯತೆ ಮೂಡಿದಾಗ ಅದು ನಿರಂತರವಾಗಿರುತ್ತದೆ ಮತ್ತು ದೀರ್ಘ ಕಾಲದ ಅದ್ಭುತ ಲೈಂಗಿಕ ಸುಖಕ್ಕೆ ನಾಂದಿಯಾಗುತ್ತದೆ.
ಮುಗಿಯಿತು.
ವಸಂತ್ ನಡಹಳ್ಳಿ.

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!