ಸ್ತ್ರೀಯರು ಮತ್ತು ಮಕ್ಕಳ ಮೇಲಿನ ಲೈಂಗಿಕ ಹಿಂಸಾಚಾರದ ಪ್ರಕರಣಗಳು ಮಾಧ್ಯಮಗಳಲ್ಲಿ ಹೆಚ್ಚುಹೆಚ್ಚು ವರದಿಯಾಗುತ್ತಾ ಬಂದಂತೆ ಶಾಲೆಗಳಲ್ಲಿ ಲೈಂಗಿಕ ಶಿಕ್ಷಣ ನೀಡುವ ಬಗೆಗೆ ಮತ್ತೆ ಬಿಸಿಬಿಸಿ ಚರ್ಚೆಗಳು ಶುರುವಾಗಿವೆ. ಕಾಮ ಮತ್ತು ಲೈಂಗಿಕತೆ ಎನ್ನುವ ಶಬ್ದಗಳನ್ನು ಸಾರ್ವಜನಿಕವಾಗಿ ಉಚ್ಛರಿಸುವುದೇ ದೊಡ್ಡ ಅಪರಾಧವೆಂಬಂತೆ ಬಿಂಬಿಸಲಾಗುತ್ತಿದ್ದ ನಮ್ಮ ಸಮಾಜದ ಒಳಪದರಗಳಲ್ಲಿ ಎಂತಹ ಅಜ್ಞಾನ ಮತ್ತು ಕ್ರೌರ್ಯಗಳೆಲ್ಲಾ ಅಡಗಿದೆ ಎಂಬುದರ ಸ್ವಲ್ಪ ಅರಿವು ಈಗ ನಮಗೆ ಆಗುತ್ತಿದೆ. ಈಗ ಹೊರ ಬರುತ್ತಿರುವುದೂ ಕೂಡ ಸಂಪೂರ್ಣ ವಾಸ್ತವಿಕತೆಯಲ್ಲ. ನಾಗರಿಕ ಸಮಾಜವನ್ನು ಬೆಚ್ಚಿ ಬೀಳಿಸುವ ಇನ್ನೂ ಸಾಕಷ್ಟು ವಿಚಾರಗಳಿಗೆ ನಾವು ಮುಖಾಮುಖಿಯಾಗಬೇಕಿದೆ.
ಹಾಗಿದ್ದರೂ ಸಮಸ್ಯೆಗಳನ್ನು ಚಾಪೆಯ ಕೆಳಗೆ ತೂರಿಸಿ ಎಲ್ಲವೂ ಸರಿಯಾಗಿದೆ ಎನ್ನುವ ಡಾಂಬಿಕ ಮನೋಭಾವ ತೋರಿಸುವ ಪ್ರಯತ್ನ ಎಲ್ಲಾ ಹಂತಗಳಲ್ಲೂ ಕಾಣುತ್ತಿದೆ. ವಸ್ತುಸ್ಥಿತಿಯನ್ನು ಒಪ್ಪಿಕೊಂಡು ಸಮಸ್ಯೆಗಳಿಗೆ ಎದೆಯೊಡ್ಡಿ ನಿಂತು ಎದುರಿಸುವ ಸ್ಥೈರ್ಯ ನಮ್ಮನ್ನಾಳುವವರಿಗಷ್ಟೇ ಅಲ್ಲ, ಒಟ್ಟಾರೆ ಸಮಾಜಕ್ಕೆ ಬರುವವರೆಗೆ ಮೂಲಭೂತ ಬದಲಾವಣೆಗಳನ್ನು ನಿರೀಕ್ಷಿಸುವುದು ಕಷ್ಟ.
ಮನುಷ್ಯನ ಲೈಂಗಿಕ ಕ್ರಿಯೆ ಖಾಸಗಿಯಾಗಿರಬೇಕು ನಿಜ. ಆದರೆ ಲೈಂಗಿಕತೆಗೆ ಸಂಬಧಿಸಿದ ಎಲ್ಲಾ ವಿಚಾರಗಳೂ ಗೌಪ್ಯವಾಗಿರಬೇಕು ಎನ್ನುವ ಮನೋಭಾವ ಸಾಕಷ್ಟು ತೊಂದರೆಗಳಿಗೆ ಕಾರಣವಾಗುತ್ತದೆ. ಇವತ್ತಿನ ಯಾವುದೇ ಪತ್ರಿಕೆಯನ್ನು ನೀವು ನೋಡಿದರೆ ನಿಮಗೆ ಡಾಳವಾಗಿ ಬಣ್ಣಬಣ್ಣದಲ್ಲಿ ಕಾಣಿಸುವುದು ಕಾಮವರ್ಧಕಗಳ ಜಾಹಿರಾತುಗಳು. ಲೈಂಗಿಕ ಶಿಕ್ಷಣ ನೀಡುವ ಬಗೆಗೆ ಗಹನವಾದ ಚರ್ಚೆಯನ್ನು ಮಾಡುವ ತಜ್ಞರು ಮತ್ತು ಸರ್ಕಾರ ಔಷಧಗಳ ಹೆಸರಿನಲ್ಲಿ ಮಾರಲಾಗುವ ಇಂತಹ ನಕಲಿ ವಸ್ತುಗಳಿಂದಾಗುವ ಅಪಾಯಗಳ ಬಗೆಗೆ ಏಕೆ ಎಚ್ಚತ್ತುಕೊಂಡಿಲ್ಲ ಎನ್ನುವುದು ನಿಗೂಢ. ನಮ್ಮ ವೈದ್ಯವೃಂದ ಮತ್ತು ಐ.ಎಮ್.ಎ. ನಂತಹ ಸಂಘಟನೆಗಳೂ ಕೂಡ ಇವುಗಳ ಬಗೆಗೆ ಪೂರ್ಣ ನಿರ್ಲಕ್ಷ ತೋರಿಸುತ್ತಿವೆ. ಮನೆಯಲ್ಲಿ ಮಕ್ಕಳ ಎದುರು ಲೈಂಗಿಕತೆಯ ಎಲ್ಲಾ ವಿಚಾರಗಳನ್ನು ಸಂಪೂರ್ಣ ಮರೆಮಾಚುವ ಪೋಷಕರು ಕಣ್ಣಿಗೆ ರಾಚುವ ಇಂತಹ ಜಾಹಿರಾತುಗಳ ಬಗೆಗೆ ಮಕ್ಕಳು ಕುತೂಹಲ ತೋರಿಸಿದಾಗ ಅಥವಾ ಪ್ರಶ್ನಿಸಿದಾಗ ಮುಜುಗರವನ್ನು ತೋರಿಸುವುದನ್ನು ಬಿಟ್ಟರೆ ಇನ್ನೇನು ಮಾಡಲು ಪೋಷಕರಿಗೆ ಗೊತ್ತಿರುವುದಿಲ್ಲ.
ಕಾಮಕ್ರಿಯೆಯ ಆಸಕ್ತಿಯನ್ನು ಹೆಚ್ಚಿಸುವ, ದೀರ್ಘಕಾಲ ಸಂಭೋಗ ನಡೆಸುವ ಶಕ್ತಿ ಕೊಡುವಂತಹ, ಪುರುಷರ ಶಿಶ್ನದ ಗಾತ್ರ ಮತ್ತು ಸ್ತ್ರೀಯರ ಸ್ತನದ ಗಾತ್ರವನ್ನು ಹೆಚ್ಚಿಸುವ-ಹೀಗೆ ವಿಧವಿಧ ವಸ್ತುಗಳ ಜಾಹಿರಾತುಗಳು ಇವತ್ತು ಎಲ್ಲಾ ಪತ್ರಿಕೆಯ ಮುಖಪುಟದಲ್ಲಿ ರಾರಾಜಿಸುತ್ತಿವೆ. ಜಾಹಿರಾತುಗಳ ಸಹಾಯವಿಲ್ಲದೆ ಊರೂರುಗಳಲ್ಲಿ ಗುಡಾರ ಕಟ್ಟಿ ಹಿಮಾಲಯದಿಂದ ತಂದಿರುವುದು ಎಂದು ಹೇಳುತ್ತಾ ನಕಲಿ ಲೈಂಗಿಕ ಶಕ್ತಿವರ್ಧಕ ಗಿಡಮೂಲಿಕೆಗಳನ್ನು ಮಾರುವವರಿದ್ದಾರೆ. ಇನ್ನೂ ಕೆಲವರು ವೈದ್ಯರೆಂದು ಹೇಳಿಕೊಳ್ಳುತ್ತಾ ಬೇರೆಬೇರೆ ಊರುಗಳ ಲಾಡ್ಜ್‍ಗಳಲ್ಲಿ ಕ್ಯಾಂಪ್‍ಗಳನ್ನು ಪ್ರಕಟಿಸಿ ಇಂತಹ ನಕಲಿ ಔಷಧಿಗಳನ್ನು ಮಾರುತ್ತಾರೆ. ಅಲೋಪತಿ ವೈದ್ಯ ವಿಜ್ಞಾನದ ಪ್ರಕಾರ ಪುರುಷರಿಗೆ ಸ್ವಲ್ಪ ಮಟ್ಟಿನ ಲೈಂಗಿಕ ಶಕ್ತಿಯನ್ನು (ನೆನಪಿಡಿ ಲೈಂಗಿಕ ಆಸಕ್ತಿಯನ್ನಲ್ಲ) ಕೊಡುವ ಔಷಧಿ ಇರುವುದು ಒಂದೇ. (ಇದರ ಹೆಸರು ಮತ್ತು ಇತರ ವಿವರಗಳನ್ನು ಇಲ್ಲಿ ಚರ್ಚೆ ಮಾಡುವುದು ಕಾನೂನುಬದ್ಧವಲ್ಲ.) ಕಾಮವರ್ಧಕಗಳ ಹೆಸರಿನಲ್ಲಿ ಮಾರಾಟವಾಗುವ ಉಳಿದೆಲ್ಲಾ ವಸ್ತುಗಳೂ ಸಂಪೂರ್ಣ ನಿರುಪಯುಕ್ತ ಎನ್ನವುದು ಲೈಂಗಿಕ ತಜ್ಞರ ಒಮ್ಮತದ ಅಭೀಪ್ರಾಯ. ನನ್ನ ಹತ್ತಿರ ಲೈಂಗಿಕ ಸಮಸೈಗಳ ಪರಿಹಾರ ಹುಡುಕಿಕೊಂಡು ಆಪ್ತಸಲಹೆಗೆ ಬರುವವರಲ್ಲಿ ಸುಮಾರಾಗಿ ಎಲ್ಲರೂ ಜಾಹಿರಾತುಗಳಲ್ಲಿ ಬರುವ ಇಂತಹ ವಸ್ತುಗಳನ್ನು ಪ್ರಯೋಗಿಸಿ ನಿರಾಸೆ ಹೊಂದಿದವರಾಗಿರುತ್ತಾರೆ. ಕೆಲವರಂತೂ ಹತ್ತಾರು ಬಗೆಯ ನಕಲಿ ಔಷಧಿಗಳನ್ನು ಉಪಯೋಗಿಸಿ ವಿಫಲರಾಗಿದ್ದರೂ ಹೊಸ ಹೊಸ ಜಾಹಿರಾತುಗಳಿಗೆ ನಿರಂತರವಾಗಿ ಆಕರ್ಷಿತರಾಗುತ್ತಾರೆ. ಎಲ್ಲೋ ಕೆಲವರಿಗೆ ತಾತ್ಕಾಲಿಕ ಪರಿಹಾರ ಸಿಕ್ಕಿದ್ದರೂ ಅದು ಆ ವಸ್ತುಗಳಲ್ಲಿರುವ ಔಷಧೀಯ ಗುಣಗಳಿಂದಲ್ಲ. ಅವುಗಳನ್ನು ಔಷಧವೆಂದು ನಂಬಿ ಸ್ವೀಕರಿಸಿದ ಇವರ ಮಾನಸಿಕ ಸ್ಥಿತಿಯಿಂದ ಮಾತ್ರ (ಪ್ಲಾಸಿಬೋ ಎಫೆಕ್ಟ್).
ದುರಂತವೆಂದರೆ ಈ ಎಲ್ಲಾ ಔಷಧಗಳೂ ಆಯುರ್ವೇದದ ಹೆಸರಿನಲ್ಲಿ ಮಾರಾಟವಾಗುತ್ತಿವೆ. ಅಲೋಪತಿ ಔಷಧಗಳಂತೆ ಸಾರ್ವಜನಿಕವಾಗಿ ಪ್ರಚಾರ ಮಾಡಬಾರದೆಂಬ ಯಾವ ನಿಯಮವೂ ಇವುಗಳಿಗೆ ಲಾಗೂ ಆಗುವುದಿಲ್ಲ. ಈ ಕಾಮವರ್ಧಕಗಳಲ್ಲಿ ಇರಬಹುದಾದ ಅಂಶಗಳೇನು, ಅವುಗಳು ಹೇಗೆ ಕೆಲಸ ಮಾಡುತ್ತವೆ, ಅವುಗಳ ಅಡ್ಡಪರಿಣಾಮಗಳೇನು ಮುಂತಾದವುಗಳ ಬಗೆಗೆ ಯಾವುದೇ ವಿವರಗಳಿರುವುದಿಲ್ಲ. ಆಯುರ್ವೇದದ ಹಣೆಪಟ್ಟಿ ಹಚ್ಚಿಕೊಂಡ ತಕ್ಷಣ ಇವು ಎಲ್ಲಾ ಪಾಪಗಳಿಂದ ಮುಕ್ತಿ ಹೊಂದಿದ ಕಾಮ ಸಂಜೀವಿನಿಗಳಾಗಿ ಬಿಡುತ್ತವೆ! ಸಮಸ್ಯೆಯ ಪರಿಹಾರದ ಬಗೆಗೆ ಯಾವುದೇ ಖಾತ್ರಿಯಲ್ಲದ ಇಂತಹ ವಸ್ತುಗಳಲ್ಲಿ ಅಪಾಯಕಾರಿಯಾದ ರಾಸಾಯನಿಕಗಳಿಲ್ಲ ಎಂದು ಹೇಗೆ ನಂಬುವುದು ಅನ್ನುವುದರ ಬಗೆಗೆ ಕೂಡ ನಮ್ಮ ಜನತೆ ಯೋಚಿಸುವುದಿಲ್ಲ.
ನಮ್ಮ ಸರ್ಕಾರೀ ವ್ಯವಸ್ಥೆ ಮತ್ತು ವೈದ್ಯರುಗಳು ಇಂತಹ ನಕಲಿ ವಸ್ತುಗಳ ಬಗೆಗೆ ತಕ್ಷಣ ಎಚ್ಚೆತ್ತುಕೊಳ್ಳಬೇಕಾಗಿದೆ. ಇವುಗಳ ಮಾರಾಟ ಮತ್ತು ಜಾಹಿರಾತುಗಳ ಬಗೆಗೆ ಕಟ್ಟುನಿಟ್ಟಾದ ನೀತಿ ನಿಯಮಗಳನ್ನು ರೂಪಿಸಬೇಕಿದೆ. ಅಲ್ಲಿಯವರೆಗೆ ನಮ್ಮ ಮುಗ್ಧ ಜನತೆ ಇವುಗಳಿಗಾಗಿ ಹಣವನ್ನು ಕಳೆದುಕೊಳ್ಳುತ್ತಲೇ ಇರುತ್ತಾರೆ. ಎಷ್ಟೋ ಜನ ಇವುಗಳಿಂದಾಗಿ ಅಪಾಯಗಳನ್ನು ಆಹ್ವಾನಿಸಿಕೊಳ್ಳಬಹುದು. ನಾನು ನೋಡಿದಂತೆ ಸಾಕಷ್ಟು ಯುವಕ ಯುವತಿಯರೂ ಕೂಡ ಇಂತಹ ಜಾಹಿರಾತುಗಳಿಂದ ಮೋಸ ಹೋಗಿ ಮನಸ್ಸಮಾಧಾನವನ್ನು ಕಳೆದುಕೊಂಡಿದ್ದಾರೆ.
ನನ್ನಂತಹ ಆಪ್ತಸಲಹೆಗಾರರ ಮತ್ತು ಮನೋಚಿಕಿತ್ಸಕರ ಅನುಭವದಲ್ಲಿ ಹೆಚ್ಚಿನ ಲೈಂಗಿಕ ಸಮಸ್ಯೆಗಳು ಅಜ್ಞಾನದ, ತಪ್ಪು ತಿಳುವಳಿಕೆಗಳ ಅಥವಾ ಸಂಗಾತಿಗಳಲ್ಲಿರಬಹುದಾದ ಹೊಂದಾಣಿಕೆಯ ಸಮಸ್ಯೆಗಳ ಪರಿಣಾಮಗಳು. ತಜ್ಞರ ಸಹಾಯದಿಂದ ಇವುಗಳನ್ನು ಯಾವುದೇ ಔಷಧಿಗಳಿಲ್ಲದೆ ಕಾಯಮ್ಮಾಗಿ ಪರಿಹರಿಸಿಕೊಳ್ಳಲು ಸಾಧ್ಯ. ನಮ್ಮ ಜನ ಲೈಂಗಿಕ ವಿಷಯಗಳ ಬಗೆಗೆ ಸ್ವಲ್ಪ ಮುಕ್ತವಾಗದೆ ಎಲ್ಲವನ್ನೂ ಕದ್ದುಮುಚ್ಚಿ ಪರಿಹರಿಸಿಕೊಳ್ಳುವ ಮನೋಭಾವ ಹೊಂದಿರುವವರೆಗೆ ಇಂತಹ ನಕಲಿ ಕಾಮವರ್ಧಕಗಳು ಭರಪೂರ ಹಣವನ್ನು ಬಾಚಿಕೊಳ್ಳುತ್ತಿರುತ್ತವೆ.
ವಸಂತ್ ನಡಹಳ್ಳಿ
- Advertisement -
- Advertisement -
- Advertisement -
- Advertisement -