31.9 C
Sidlaghatta
Thursday, March 28, 2024

ಪ್ರವಾಸಿ ತಾಣಗಳು, ದೋಚು ಕೇಂದ್ರಗಳು

- Advertisement -
- Advertisement -

ಇಂಗ್ಲೀಷ್‍ನ ಪ್ರವರ್ತಕ ಕವಿಯಾದ ಟಿ.ಎಸ್.ಎಲಿಯಚ್‍ನ ಕವನ ‘Journey of the Magi’ ದಲ್ಲಿನ ಸಾಲುಗಳಿವು.
And the cities hostile and towns unfriendly
And the village’s dirty and charging high prices:
A hard time we had of it.
ಈ ಕವಿತೆಯನ್ನು ಕನ್ನಡದಲ್ಲಿ “ಜ್ಞಾನಿಗಳ ಪಯಣ” ಎಂದು ಶ್ರೀ.ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರು ಅನುವಾದಿಸಿದು,್ದ ಆ ಸಾಲುಗಳು, ಒಂದಕ್ಕೆ ಹತ್ತು ಬೆಲೆ ಇಟ್ಟು ಮಾರುವ ಸುಟ್ಟ ಸುಡುಗಾಡು ಹಳ್ಳಿಗಳ ಹಾದು ಬಂದೆವು. ಅದೆಂಥ ಕೆಟ್ಟ ಕಾಲ!
ಕ್ರಿಸ್ತನ ಹುಟ್ಟಿನ ಕುರಿತು ಮುನ್ಸೂಚನೆ ಪಡೆದ ಮೂವರು ಜ್ಞಾನಿಗಳು, ಚಾಲ್ಡಿಯಾದ ರಾಜ ಬಾಲ್ತಜಾರ್, ಇಥಿಯೋಪಿಯಾದ ರಾಜ ತಾರ್ಫಿಷ್ ಮತ್ತು ನ್ಯೂಬಿಯಾದ ರಾಜ ಮೆಲ್‍ಫಿಯರ್, ಅತ್ತ ಪಯಣ ಬೆಳಸಿದ ಸಂದರ್ಭದಲ್ಲಾದ ಅನುಭವದ ವಿವರಣೆಗಳು ಈ ಕವಿತೆಯಲ್ಲಿದೆ.
ಅವರುಗಳು ಅಂದು ಪಡೆದ ಅನುಭವಕ್ಕೂ ಇಂದು ನಾವು ಪಡೆಯುತ್ತಿರುವ ಅನುಭವಕ್ಕೂ ಅಂಥ ವ್ಯಾತ್ಯಾಸಗಳೇನೂ ಕಾಣಿಸುತ್ತಿಲ್ಲ. ಅವರ ಪ್ರವಾಸದ ಸಂದರ್ಭದಲ್ಲಿ ಕೂಡ ಅವರು ಪ್ರವಾಸಿಗರೆಂದು ಅರಿತ ಜನ, ಅಧಿಕ ಬೆಲೆ ಕೇಳಿ ಅವರನ್ನು ದೋಚಿದ್ದರು. ಹಾಗೇ ಇಂದು ಪ್ರವಾಸಿಗಳೆಂದು ತಿಳಿದರೆ ಸಾಕು ನಮ್ಮವರೇ ನಮ್ಮನ್ನು ದೋಚಲು ಸಿದ್ದರಾಗಿ ಕುಳಿತಿರುತ್ತಾರೆ. ನೀವು ಯಾವುದೇ ಪ್ರವಾಸಿ ಕೇಂದ್ರಗಳಿಗೆ ತೆರಳಿದರೂ ಸರಿ, ಅಲ್ಲಿಯ ಬೆಲೆ ಗಗನಕ್ಕೇರಿರುತ್ತದೆ. ಬಂದ ಪ್ರವಾಸಿಗಳನ್ನು ಆದಷ್ಟು ದೋಚುವುದೇ ಅಲ್ಲಿನ ವ್ಯಾಪಾರಿಗಳ, ಮತ್ತಿತರರ ಕಸುಬಾಗಿರುತ್ತದೆ. ಕಳ್ಳರ ಹಾವಳಿ ಬೇರೆ. ಅವರು ಹೇಳಿ ಕೇಳಿ ಕಳ್ಳರು, ಅವರ ಸುದ್ದಿ ಬೇರೆ ಕಳ್ಳರೆಂದು ಗುರ್ತಿಸಿಕೊಳ್ಳದೇ ಕಳ್ಳರಾಗುವುದು ಬೇರೆ.
ಬಹಳಷ್ಟು ಪ್ರವಾಸಿ ಕೇಂದ್ರಗಳಲ್ಲಿ ‘ಪ್ರವೇಶ ಧನ’ ನಿಗದಿಗೊಳಿಸಿರುತ್ತಾರೆ. ಅಲ್ಲಿನ ವ್ಯವಸ್ಥೆಗೂ ಅದಕ್ಕೂ ಸಂಬಂಧವೇ ಇರುವುದಿಲ್ಲ. ಕೇರಳದಲ್ಲಿ ಒಂದು ಕಡೆ ಸಾಂಬಾರು ಬೆಳೆಗಳ ತೋಟಕ್ಕೆ ಪ್ರವೇಶ ಧನ ರೂ. 100/- (ಒಬ್ಬರಿಗೆ) ಪಡೆದು ತೋರಿಸಿದ್ದು, ಏಲಕ್ಕಿ, ಬಾಳೆ, ಅಡಿಕೆ ಮತ್ತು ಕೆಂಪು ದಾಸವಾಳ ಮಾತ್ರ. ಆಗ ಅನ್ನಿಸಿದ್ದು ಅವರು ನಿಜವಾಗಿಯೂ ನಮ್ಮ ಕಿವಿಯ ಮೇಲೆ ಈ ಕೆಂಪು ದಾಸವಾಳ ಹೂವನ್ನು ಇಡುತ್ತಿದ್ದಾರೆ ಎಂದು ‘ಪ್ರವೇಶ ಧನ’ ಪಡೆಯುವುದು ತಪ್ಪಲ್ಲ. ಅಲ್ಲಿನ ಪ್ರದೇಶವನ್ನು ಸ್ವಚ್ಛವಾಗಿ, ಜೋಪಾನವಾಗಿ ಇಡುವ ಜವಾಬ್ದಾರಿಗೆ ಹಣದ ಅಗತ್ಯವಿದೆ. ಆದರೆ ಅದಕ್ಕೂ ಒಂದು ಮಿತಿಯಿರಬೇಕು.
ಹಾಗೇ ಹೊರಗಡೆ ಊಟ, ತಿಂಡಿ, ವಸತಿ, ಎಲ್ಲದಕ್ಕೂ ಪ್ರವಾಸಿ ತಾಣಗಳಲ್ಲಿ ಒಂದಕ್ಕೆ ಹತ್ತರಷ್ಟು ಹಣವನ್ನು ತೆರಬೇಕು. ಒಳ್ಳೆಯ ಊಟ, ತಿಂಡಿ, ವಸತಿ, ಸೌಕರ್ಯ ಪೂರೈಸಲು ತೋರುವ ಕಾಳಜಿಗಿಂತ ಎಷ್ಟು ದೋಚಬಹುದೆಂಬ ಕಾಳಜಿಯೇ ಅಲ್ಲಿನ ಜನರಿಗೆ ಅಧಿಕವಾಗಿರುವಂತೆ ತೋರುತ್ತದೆ. ಸ್ಪಷ್ಟ ಉದಾಹರಣೆ ಬೇಕೆಂದರೆ ನಮ್ಮ ಜೋಗ ಜಲಪಾತದ ಬಳಿಯ ಬೆಲೆಗೂ, ಪಕ್ಕದ ತಾಳಗುಪ್ಪ, ಸಾಗರದಲ್ಲಿನ ಬೆಲೆಗೂ ತಾಳೆ ಹಾಕಿ ನೋಡಬಹುದು. ಪ್ರವಾಸಿಗರು ವರ್ಷದಲ್ಲಿ ಒಮ್ಮೆಯೋ, ಎರಡು ಬಾರಿಯೋ ತಮ್ಮ ಖುಷಿಗಾಗಿ ಹೊರಗಡೆ ಬಂದಿರುತ್ತಾರೆ. ಹಾಗೆ ಬಂದವರಿಗೆ ಸಮಾಧಾನವಾಗುವ ರೀತಿಯಲ್ಲಿ ಪ್ರವಾಸಿ ಕೇಂದ್ರಗಳು ಇರಬೇಕಾಗಿತ್ತು. ಆದರೆ ಅವರು ತಮ್ಮೆಲ್ಲ ಖುಷಿ ಮತ್ತು ಸಮಾಧಾನವನ್ನು ಕಳೆದುಕೊಳ್ಳುವಂತೆ, ಈ ಪ್ರವಾಸಿ ತಾಣಗಳು, ವ್ಯವಸ್ಥಿತವಾಗಿ ನೋಡಿಕೊಳ್ಳುತ್ತವೆ. ಹೀಗಾದಾಗ ಬರಬೇಕೆಂದು ಬಯಸುವವರೂ ಹಿಂದೇಟು ಹಾಕುತ್ತಾರೆ. ಒಮ್ಮೆ ಬಂದವರು ಮತ್ತೆ ಬರಲಾರರು ಬರಬೇಕೆಂದಿದ್ದವರಿಗೂ ಬೇಡವೆಂದು ತಿಳಿಹೇಳಿಯಾರು ಹೀಗಾದರೆ ಪ್ರವಾಸಿ ಕೇಂದ್ರಗಳು ಅಭಿವೃದ್ಧಿಯಾವುದು ಹೇಗೆ ಸಾಧ್ಯ?
ಇನ್ನು ನಮ್ಮಲ್ಲಿನ ಪ್ರವಾಸಿ ಕೇಂದ್ರಗಳ ಅಭಿವೃದ್ಧಿಗಳಿಗೆ ಸಹಕಾರ ಅನೇಕಾನೇಕ ಯೋಜನೆಗಳನ್ನು ರೂಪಿಸಿದ್ದಿದೆ. ಅಭಿವೃದ್ಧಿ ಪ್ರಾಧಿಕಾರಿಗಳ ರಚನೆ ಕೂಡ ಆಗಿದೆ. ಆದರೆ ಅಭಿವೃದ್ಧಿ ಎಷ್ಟರ ಮಟ್ಟಿಗೆ ಆಗಿದೆ? ಕೇವಲ ಪ್ರಾಧಿಕಾರದ ಬೋರ್ಡು ನಮ್ಮನ್ನು ಸ್ವಾಗತಿಸುತ್ತದೆಯೇ ವಿನಃ ಅವುಗಳು ನೀಡುವ ಸವಲತ್ತುಗಳಲ್ಲ, ಬಹಳಷ್ಟು ನಿರೀಕ್ಷೆಯೊಂದಿಗೆ ಬಂದವರಿಗೆ ನಿರಾಸೆ ಮಾತ್ರ ಕಾದಿರುತ್ತದೆ. ಕೊಳಕು ಪರಿಸರ, ಕುಡಿಯಲೂ ನೀರಿಲ್ಲದ ಸ್ಥಿತಿ ಹದಗೆಟ್ಟು ಶೌಚಾಲಯಗಳು, ಹುರಿದು ತಿನ್ನುವ ಶೆಡ್ಡುಗಳು, ವಾಹನ ಚಾಲಕರು ಹೀಗೆ ಪಟ್ಟಿ ಬೆಳೆಯುತ್ತ ಹೋಗುತ್ತದೆ. ಪುನಃ ಪುನಃ ಪ್ರವಾಸ ಕೈಗೊಳ್ಳಬೇಕೆಂಬ ಉತ್ಸಾಹವನ್ನೆ ಬತ್ತಿಸುವ ಸ್ಥಿತಿ ಇಂದು ಬಹತೇಕ ಪ್ರವಾಸಿ ತಾಣಗಳಲ್ಲಿ ಇದೆ ಎಂಥವರ ಆದಾಯಕ್ಕಾದರೂ ಒಂದು ಮಿತಿ ಇದೆ.
ಪ್ರಕೃತಿ ಸೌಂದರ್ಯದ ಆಸ್ಪಾದನೆಗೆ ಹೊರಟ ಪ್ರವಾಸಿಗಳಿಗಾಗಲಿ ಧಾರ್ಮಿಕ ನಂಬಿಕೆಯ ಮೇರೆಗೆ ಧಾರ್ಮಿಕ ಸ್ಥಳಗಳಿಗೆ ಭೇಟಿಕೊಡುವ ಯಾತ್ರಾರ್ಥಿಗಳಿಗಾಗಲೀ, ಹೊರಡುವ ಮುನ್ನ ಇದ್ದ ಉತ್ಸಾಹ, ಹೋಗಿ ಬಂದ ಅನಂತರ ಇರುವುದು ಅನುಮಾನ. ಕಾರಣವೆಂದರೆ ಅಲ್ಲಿನವರು ಬೆಳೆಸಿಕೊಂಡ ದೋಚುಪ್ರವೃತ್ತಿ ಹೊಸಬರೆಂದು ತಿಳಿದರೆ ಸಾಕು, ಅವರೆಲ್ಲಾ ಒಟ್ಟಾಗಿ ಜಿಗುಣಿಗಳಂತೆ ಶೋಷಿಸಲು ತೊಡಗುತ್ತಾರೆ. ಭಾಷೆ ಬಾರದಿದ್ದರಂತೂ ಹೀರುವಿಕೆಗೆ ಮಿತಿಯೇ ಇರುವುದಿಲ್ಲ. ಇವರೆಲ್ಲ ನಮ್ಮಲ್ಲಿಗೆ ಬಂದಿದ್ದಾರೆ, ಅವರಿಗೆ ಆದಷ್ಟು ಉತ್ತಮವಾದ ಸೇವೆ ಒದಗಿಸಬೇಕು, ಶೋಷಿಸಬಾರದು ಎಂಬ ಕನಿಷ್ಠ ಮಾನವೀಯತೆ ಕೂಡ ಮರೆಯಾಗಿದ್ದನ್ನು ನಾವು ಎಲ್ಲೆಂದರಲ್ಲಿ ಕಾಣಬಹುದಾಗಿದೆ. ಧಾರ್ಮಿಕ ಕೇಂದ್ರಗಳಲ್ಲಿ ಕೂಡ, ಶ್ರದ್ಧೆಯನ್ನು ಬಂಡವಾಳವಾಗಿಸಿಕೊಂಡು ಇಲ್ಲಸಲ್ಲದ ಆಚರಣೆಗಳನ್ನು ನೆರವೇರಿಸುವಂತೆ ಪ್ರೇರೇಪಿಸುತ್ತ ತಲೆಕೆಡಿಸುವವರ ದೊಡ್ಡ ಪಡೆಯೇ ಸದಾ ಜಾಗೃತವಾಗಿರುತ್ತದೆ. ಯಾಕೆ ಹೀಗೆ? ಇದಕ್ಕೆ ಪರಿಹಾರವೇ ಇಲ್ಲವೇ? ಪ್ರಶ್ನಿಸಿದರೆ ಉತ್ತರ ಕಷ್ಟವಾದರೂ ಕೆಲಮಟ್ಟಿನ ಸುಧಾರಣೆ ಸಾಧ್ಯವಾಗಬಹುದಾದ್ದು, ನಾವು ತೆಗೆದುಕೊಳ್ಳಬಹುದಾದ ಮುನ್ನೆಚ್ಚರಿಕೆಗಳಿಂದ. ಅಂದರೆ ಪ್ರವಾಸಿ ತಾಣಗಳಿಗೆ ತೆರಳುವಾಗ, ನಾವು ನಮ್ಮಲ್ಲಿಂದಲೇ ನಮಗೆ ಪರಿಚಯದ ಬಾಡಿಗೆ ವಾಹನ ಪಡೆಯುವುದರಿಂದ ಹಿಡಿದು ನಮಗೆ ಬೇಕಾಗಬಹುದಾದ ಆಹಾರ, ಸಾರು ಇತ್ಯಾದಿ ಅಗತ್ಯ ಸಾಮಗ್ರಿಗಳನ್ನು ಒಯ್ಯುವುದು. ಇದು ಭಾರದ ಕೆಲಸ, ಹೊರೆ ಎಂದು ಭಾವಿಸಿದರೆ ಹಣ ನೀರಿನಂತೆ ಖರ್ಚಾಗುತ್ತದೆ. ಹಾಗೇ ಹೊರಗಡೆ ಹೊರಡುವ ಮುನ್ನ ಈಗಾಗಲೇ ಅಲ್ಲಿಗೆ ಹೋಗಿ ಬಂದವರಿಂದ ಸಲಹೆ, ಸೂಚನೆ ಮಾರ್ಗದರ್ಶನ ಪಡೆದುಕೊಂಡರೆ ಒಳ್ಳೆಯದು. ನೋಡಬಹುದಾದ ಸ್ಥಳಗಳು ಮತ್ತು ನಾವು ನೀಡುವ ಹಣಕ್ಕೆ ಯೋಗ್ಯವಾದ ಸ್ಥಳಗಳ ಸಂದರ್ಶನ ಸಾಧ್ಯವಾಗಬಹುದು, ಹಾಗಲ್ಲದಿದ್ದರೆ ನಮ್ಮ ಹೂದೋಟದ ಕೆಂಪು ದಾಸವಾಳವನ್ನೆ ನಾವು ತಲಾ ನೂರು ರೂಪಾಯಿ ನೀಡಿ ನೋಡುವ ಪ್ರಾರಾಬ್ದ ಒದಗಬಹುದು.
ಸರ್ಕಾರ ಪ್ರವಾಸಿ ತಾಣಗಳ ಮೇಲೆ ಸರಿಯಾದ ಲಕ್ಷ ಹರಿಸಬೇಕು ಕೇವಲ ಅಲ್ಲಿಯ ಅಭಿವೃದ್ಧಿಯನ್ನಷ್ಟೆ ಅಲ್ಲದೇ ಅಲ್ಲಿನ ಸುಲಿಗೆಯ ಕುರಿತೂ ನಿಗಾ ವಹಿಸುವುದು ಸೂಕ್ತ. ಅಭಿವೃದ್ಧಿ ಪ್ರಾಧಿಕಾರಗಳು ಕೇವಲ ‘ಬಿಳಿಯಾನೆ’ಗಳಾಗದೆ, ಬಂದವರ ಹಿತ ಚಿಂತನೆಗೂ ಲಕ್ಷ ಹರಿಸಬೇಕು. ಅಲ್ಲಿನ ಪ್ರವೇಶ ಶುಲ್ಕದಿಂದ ಹಿಡಿದು ಅಸುಪಾಸಿನ ಹೋಟೆಲ್, ಅಂಗಡಿಗಳಲ್ಲಿ ನೀಡುವ ತಿಂಡಿ, ಊಟ, ಹಣ್ಣು ಹಂಪಲುಗಳ ದರದ ಕುರಿತು ನಿರ್ದಿಷ್ಟ ಪಟ್ಟಿ ಪ್ರಕಟಿಸಿ, ಪ್ರವಾಸಿಗರು ಮೋಸ ಹೋಗದಂತೆ ನೋಡಿಕೊಳ್ಳಬೇಕು. ಸಾಧ್ಯವಾದಲ್ಲಿ ಸರಕಾರವೇ, ಸಹಕಾರಿ ತತ್ವದಡಿ ಅಥವಾ ಸ್ವಸಹಾಯ ಗುಂಪುಗಳಿಗೆ ನೆರವು ನೀಡಿ ಉತ್ತಮ ಸೌಲಭ್ಯ, ಯೋಗ್ಯ ಬೆಲೆಗೆ ಊಟ, ತಿಂಡಿ ಇತ್ಯಾದಿ ದೊರಕುವ ವ್ಯವಸ್ಥೆ ಮಾಡಬೇಕು. ಯಾಕೆಂದರೆ ಪ್ರವಾಸಿಗರು ಕೂಡ ಈ ದೇಶದ ನಾಗರಿಕರೇ ಸರಿ. ಅವರನ್ನು ಶೋಷಣೆಯಿಂದ ಕಾಪಾಡುವುದು ಕೂಡ ಆಡಳಿತ ಜವಬ್ದಾರಿ. ಇದರೊಟ್ಟಿಗೆ ಪ್ರತಿಯೊಂದು ಪ್ರವಾಸಿ ಕೇಂದ್ರಗಳಲ್ಲೂ ‘ಮಾಹಿತಿ ಕೇಂದ್ರ’ ವನ್ನು ಸ್ಥಾಪಿಸಿ, ಹೊರಗಡೆಯಿಂದ ಬಂದವರಿಗೆ ಮಾಹಿತಿ ಸಹಾಯ ನೀಡಬೇಕು. ಅದು ವಸತಿಯನ್ನು ಕುರಿತಾಗಿ ಅಥವಾ ವಾಹನಗಳ ಕುರಿತಾಗಿ ಅಥವಾ ಬಸ್ಸು, ರೈಲು, ವಿಮಾನಗಳ ಕುರಿತಾಗಿ ಮತ್ತು ಸ್ಥಳ ಕಾಯ್ದಿರಿಸುವಿಕೆ ಕುರಿತಾಗಿ, ಅಂದರೆ ಬಂದವರಿಗೆ ಇರುವುದಕ್ಕೆ ಮತ್ತು ಹೋಗುವುದಕ್ಕೆ ಅನುಕೂಲವಾಗುತ್ತದೆ. ಪ್ರವಾಸ ಪ್ರಯಾಸವಾಗದಂತೆ ಇನ್ನಷ್ಟು ಪ್ರವಾಸಕ್ಕೆ ಪ್ರೊತ್ಸಹಿಸಿದಂತಾಗುತ್ತದೆ.
ಮನುಷ್ಯ ಜ್ಞಾನಿಯಾಗುವುದಕ್ಕೆ ‘ಒಂದೋ ಕೋಶ ಓದಬೇಕು ಅಥವಾ ದೇಶ ತಿರುಗಬೇಕು’ ಎಂದು ತಿಳಿದವರು ಹೇಳುತ್ತಾರೆ. ಇಂದಿನ ಯಾಂತ್ರಿಕ ಬದುಕಿನಲ್ಲಿ ಬಹುತೇಕ ಮಂದಿ ಕೂತು ಕೋಶ ಓದುವ ವ್ಯವಧಾನವಿಲ್ಲ. ಇರುವ ಸೀಮಿತ ವಿರಾಮದ ಅವಧಿ ಕೂಡ ಟಿ.ವಿ.ಯ ಸೀರಿಯಲ್ಲುಗಳಲ್ಲೆ ಕಳೆದು ಹೋಗುತ್ತದೆ. ಹಾಗಾಗಿ ವರ್ಷದಲ್ಲಿ ನಾಲ್ಕಾರು ದಿನ ಹೆಚ್ಚೆಂದರೆ ಒಂದು ವಾರ ಹೊರಗಡೆ ಸುತ್ತಾಡಿ ಬರಲು ಅಪೇಕ್ಷೆಸುವವರೇ ಅಧಿಕ. ಹೀಗೆ ಪ್ರವಾಸಕ್ಕೆ ಹೊರಡುವವರಿಗೆ ಅವರು ಹೋದಡೆಗೆ ಪಡೆಯುವ ಜ್ಞಾನ ಮತ್ತು ಸಂತೋಷಕ್ಕೆ ಯಾವುದೇ ಅಡ್ಡಿಯಾಗುವುದು ಸರಿಯಲ್ಲ. ಬರಿಯಾ ಚೌಕಶಿಯಲ್ಲೇ ದಿನಕಳೆವಂತಾದರೆ ಖುಷಿ ಎಲ್ಲಿಂದ ಬರಲು ಸಾಧ್ಯ.
ದೋಚುವ ಕೇಂದ್ರಗಳಾಗಿ ಮಾರ್ಪಡುತ್ತಿರುವ ಪ್ರವಾಸಿ ತಾಣಗಳಿಂದ ಶೋಷಣೆಯಷ್ಟೆ ಸಾಧ್ಯ. ಇದು ತಪ್ಪಬೇಕು. ಆನ ಒಪ್ಪುವಂತಹ ವಾತವರಣ ನಿರ್ಮಾಣವಾಗಬೇಕಾದ್ದು ಇಂದಿನ ತುರ್ತು.
‘ಒಂದಕ್ಕೆ ಹತ್ತು ಬೆಲೆ ತೆತ್ತು, ಸುಟ್ಟು ಸೂಡುಗಾಡುಗಳ ನೋಡ ಬಂದೆವು’ ಅಂದುಕೊಳ್ಳಬಾರದು. ಹಾಗೆ ಆಗದಂತೆ ವ್ಯವಸ್ಥೆ ಬದಲಾದರೆ ಸಂತೋಷ’ ಆದರೆ ಅದು ನೀರಿಕ್ಷಿಸಿದಂತೆ ಬದಲಾಗುವುದು ಕಷ್ಟ. ಒಟ್ಟಾರೆ ಒಂದಿಷ್ಟು ಸಂಗತಿಗಳನ್ನು ತಿಳಿದುಕೊಳ್ಳಬೇಕೆಂದರೆ ಕೆಟ್ಟದನ್ನೆಲ್ಲಾ ಅನುಭವಿಸಬೇಕು. ಅದಕ್ಕೆ ಪ್ರಾರಾಬ್ಧ ಎನ್ನಬಹುದೆನೊ?
ಆದರೆ ಎಲ್ಲ ವ್ಯಾಖ್ಯೆಗಳಗೂ ಅಪವಾದವಿದ್ದಂತೆ. ಕೆಲವೊಂದು ಪ್ರವಾಸಿ ತಾಣಗಳೂ ಸಹ ಅಪವಾದಗಳೆಂಬಂತೆ ಒಳ್ಳೆಯಾದಗಿವೆ ಎಂಬುದನ್ನು ನಾವು ಮರೆಯುವಂತಿಲ್ಲ.
ಪ್ರತಿ ಬಾರಿ ನಾವು ಪ್ರವಾಸಕ್ಕೆ ಹೊರಟುನಿಂತಾಗ ಮತ್ತೆ ಮರಳಿ ಬಂದಾಗ ಅದೆ ಏಲಿಯಟ್‍ನ ವಾಕ್ಯಗಳು ನಮ್ಮಳೊಗೆ ಅನುರಣಿಸದಿರಲಿ ಎಂಬ ಆಶಾಭಾವನೆ. Happy journey.
ರವೀಂದ್ರ ಭಟ್ ಕುಳಿಬೀಡು.

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!