‘ನನಗೆ ಕಾಲಿಲ್ಲದಿದ್ದರೆ ಏನಂತೆ, ಕೈಗಳು ಮತ್ತು ಬುದ್ಧಿಯಿದೆಯಲ್ಲ. ಬದುಕು ಸಾಗಿಸುತ್ತೇನೆ’ ಎಂದು ಛಲದಿಂದ ಹೇಳುತ್ತಾರೆ ಅಪ್ಪೇಗೌಡನಹಳ್ಳಿಯ ಮುನಿರಾಜು.
ಅಂಗವೈಕಲ್ಯತೆಯಿದ್ದರೂ ಹಲವಾರು ಕೈಕಸುಬುಗಳನ್ನು ತಾವೇ ಸ್ವತಃ ಆಸಕ್ತಿಯಿಂದ ಕಲಿತು ಇವರು ಜೀವನ ನಡೆಸುತ್ತಿದ್ದಾರೆ.
ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಹಲವಾರು ಕಸುಬುಗಳನ್ನು ಮಾಡುತ್ತಾ ಇತರರಿಗೆ ಮಾದರಿಯಾಗಿದ್ದಾರೆ ಮುನಿರಾಜು. ಸೈಕಲ್ ರಿಪೇರಿ, ಬಡಗಿ ಕೆಲಸ, ವೆಲ್ಡಿಂಗ್, ಟೈರ್ ಪಂಚರ್ ಹಾಕುವುದು, ತರಕಾರಿ ಮಾರಾಟ, ಆಟೋ ಚಾಲನೆ, ನಾಟಿ ಕೋಳಿ ವ್ಯಾಪಾರ, ಕೋಳಿ ಮಾಂಸದ ವ್ಯಾಪಾರ, ಒರಾರಿಯ ತಯಾರಿಕೆ, ಚಿಲ್ಲರೆ ಅಂಗಡಿ, ಹೊಲ ಕುಯ್ಯುವುದು, ಹಾಲು ಕರೆಯುವುದು ಮುಂತಾದ ಕಸುಬುಗಳಲ್ಲಿ ಇವರು ನಿಷ್ಣಾತರು.
ಪಿಯುಸಿ ವರೆಗೂ ಓದಿರುವ ಮುನಿರಾಜು ಹತ್ತು ವರ್ಷ ವಯಸ್ಸಿನಲ್ಲಿ ಪೋಲಿಯೀ ಖಾಯಿಲೆಯಿಂದ ತನ್ನೆರಡು ಕಾಲುಗಳ ಸ್ವಾಧೀನ ಕಳೆದುಕೊಂಡರು. ಅಂದಿನಿಂದ ಪರಾವಲಂಬಿಯಾದ ಇವರು ಶಾಲೆಗೆ ಹೋಗುತ್ತಿದ್ದುದು ಸ್ನೇಹಿತರ ಸೈಕಲ್ ನಲ್ಲಿ. ಐದನೇ ತರಗತಿಯಿಂದ ಎಸ್.ಎಸ್.ಎಲ್.ಸಿ ವರೆಗೂ ಓದಿದ್ದು ಮೇಲೂರು ಪ್ರೌಢಶಾಲೆಯಲ್ಲಿ. ನಂತರ ಪಿಯುಸಿ ಓದು ಶಿಡ್ಲಘಟ್ಟದ ಪದವಿಪೂರ್ವ ಕಾಲೇಜಿನಲ್ಲಿ.
ಬದುಕು ಮುನ್ನಡೆಸಲು, ಇತರರ ಮೇಲೆ ಅವಲಂಬಿತರಾಗಬಾರದು ಎಂದು ನಿರ್ಧರಿಸಿದ ಮುನಿರಾಜು ಮನೆಯ ಬಳಿಯೇ ಸೈಕಲ್ ರಿಪೇರಿ ಕೆಲಸ ಪ್ರಾರಂಭಿಸಿದರು. ಸೋಮವಾರ ಶಿಡ್ಲಘಟ್ಟದ ಸಂತೆಯಲ್ಲಿ ನಾಟಿ ಕೋಳಿ ವ್ಯಾಪಾರವನ್ನೂ ಮಾಡುತ್ತಿದ್ದರು. ಸ್ವಂತಿಕೆಯಿಂದ ಮರಗೆಲಸವನ್ನು ರೂಢಿಸಿಕೊಂಡು ನೇಗಿಲು, ಒರಾರಿ ತಯಾರಿಯನ್ನೂ ಮಾಡುತ್ತಿದ್ದರು. ಕೋಳಿ ವ್ಯಾಪಾರಸ್ಥರೊಂದಿಗೆ ಮಾತನಾಡಿ ಕೋಳಿ ತರಿಸಿ ಕತ್ತರಿಸಿ ಮಾರಾಟ ಮಾಡುವ ವೃತ್ತಿಯನ್ನೂ ಕೈಗೊಂಡರು.
ಆಟೋ ಕೊಂಡ ಮುನಿರಾಜು ಕಾಲಿಲ್ಲದಿದ್ದರೂ ಒಂದೂವರೆ ವರ್ಷ ಬಾಡಿಗೆಗೆ ಆಟೋ ಚಾಲನೆ ಮಾಡುತ್ತಿದ್ದರು. ದೊಡ್ಡತೇಕಹಳ್ಳಿಯಲ್ಲಿ ಅಪಘಾತಕ್ಕೀಡಾಗಿ ಆಟೋ ನುಜ್ಜುಗುಜ್ಜಾದ ಮೇಲೆ ಅದನ್ನು ಬಿಟ್ಟರು. ಮನೆಯ ಬಳಿ ಚಿಲ್ಲರೆ ಅಂಗಡಿ ಹಾಕಿಕೊಂಡಿದ್ದ ಅವರು ತನ್ನ ತಂದೆ ಕಾಲು ಮುರಿದುಕೊಂಡಿದ್ದರಿಂದ ಅವರಿಗೆ ಅಂಗಡಿಯನ್ನು ಬಿಟ್ಟುಕೊಟ್ಟಿದ್ದಾರೆ.
ಕೆಲ ಕಾಲ ತರಕಾರಿ ಸೊಪ್ಪನ್ನೂ ಮಾರುತ್ತಿದ್ದ ಮುನಿರಾಜು, ಒಂದು ಹಸು ಮತ್ತು ಒಂದು ಎಮ್ಮೆಯನ್ನು ಸಾಕಿದ್ದು, ಹಾಲು ಕರೆಯುವುದು, ಹೊಲ ಕುಯ್ಯುವುದನ್ನೂ ಮಾಡುತ್ತಾರೆ. ಸ್ವಂತ ಪರಿಶ್ರಮದಿಂದ ವೆಲ್ಡಿಂಗ್ ಹಾಗೂ ಟ್ರಾಕ್ಟರ್ ರಿಪೇರಿಯ ಕೆಲಸವನ್ನು ಕಲಿತಿದ್ದಾರೆ. ತಿಂಗಳಿಗೊಮ್ಮೆ ದೊಡ್ಡಬಳ್ಳಾಪುರಕ್ಕೆ ಹೋಗಿ ಅಲ್ಲಿ ಟ್ರಾಕ್ಟರ್ ಗುಜರಿಯಲ್ಲಿ ಒಂದೆರಡು ದಿನ ಉಳಿದು ಕೆಲಸ ಮಾಡಿ ವಾಪಸಾಗುತ್ತಾರೆ.
ಪತ್ನಿ ಹಾಗೂ ಶಾಲೆಗೆ ಹೋಗುವ ಇಬ್ಬರು ಮಕ್ಕಳ ತಂದೆಯಾದ ಮುನಿರಾಜು ಅಂಗವೈಕಲ್ಯವನ್ನು ಮೆಟ್ಟಿ ನಿಂತಿದ್ದಾರೆ.
‘ಮುನಿರಾಜು ಮಾಡುವ ಕೆಲಸಗಳನ್ನು ಕಂಡರೆ ಅಚ್ಚರಿ ಎನಿಸುತ್ತದೆ. ಕೈಕಾಲು ಸರಿಯಾಗಿರುವವರೂ ಸಹ ಮಾಡಲು ಹಿಂದೇಟು ಹಾಕುವ ಕೆಲಸಗಳನ್ನು ಶ್ರದ್ಧೆಯಿಂದ ಮಾಡುತ್ತಾರೆ. ನಮ್ಮ ಗ್ರಾಮ ಪಂಚಾಯಿತಿಯಿಂದ ಅನುದಾನ ಪಡೆದು ನಿರ್ಮಿಸುತ್ತಿರುವ ಶೌಚಾಲಯಗಳ ಬಾಗಿಲುಗಳನ್ನು ಅವರೇ ಸಿದ್ಧಪಡಿಸಿ ಕೊಡುತ್ತಿದ್ದಾರೆ. ನಮ್ಮ ಗ್ರಾಮ ಪಂಚಾಯಿತಿಯ ವತಿಯಿಂದ ಇವರಿಗೆ ಮನೆಯೊಂದನ್ನು ನಿರ್ಮಿಸಿಕೊಳ್ಳಲು ಅನುದಾನ ನೀಡಿದ್ದೇವೆ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಎ.ಎಂ.ತ್ಯಾಗರಾಜ್ ತಿಳಿಸಿದರು.
’ಈತ ವಾಹನಕ್ಕಾಗಿ ಅರ್ಜಿ ಸಲ್ಲಿಸಿ ಮೂರು ವರ್ಷಗಳಾಯಿತು. ನಾನೂ ಸಹ ಇವರೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿಗೆ ಅಲೆದಿದ್ದೇನೆ. ಶಾಸಕರು ಮಂಜೂರು ಮಾಡಿದಲ್ಲಿ ವಾಹನ ಸಿಗುತ್ತದೆ. ಈ ರೀತಿ ಕಷ್ಟಪಡುವವರಿಗೆ ಸರ್ಕಾರದಿಂದ ವಾಹನ ನೀಡಬೇಕು’ ಎನ್ನುತ್ತಾರೆ ನೀರುಗಂಟಿ ಮುನಿರಾಜು.
- Advertisement -
- Advertisement -
- Advertisement -