24.1 C
Sidlaghatta
Saturday, November 8, 2025

ಓಶೋ ರಜನೀಶ್ ಅಸಾಮಾನ್ಯ ವ್ಯಕ್ತಿ

- Advertisement -
- Advertisement -

ಓಶೋ ನೀಡಿರುವ ಪ್ರವಚನಗಳಲ್ಲಿ ವೇದಾಂತವಿದೆ, ಬದುಕಿನ ಸಾರವಿದೆ, ದಾರಿತಪ್ಪಿದವರಿಗೆ ಮಾರ್ಗದರ್ಶನವಿದೆ, ಜೀವನದರ್ಶನವೂ ಇದೆ. ಓಶೋಗೆ ಓಶೋನೇ ಸಾಟಿ ಎಂದು ಸಾಹಿತಿ ಬೆ.ಕಾ.ಮೂರ್ತೀಶ್ವರಯ್ಯ ತಿಳಿಸಿದರು.
ನಗರದ ಸಾರ್ವಜನಿಕ ಗ್ರಂಥಾಲಯದಲ್ಲಿ ಭಾನುವಾರ ಕನ್ನಡ ಸಾರಸ್ವತ ಪರಿಚಾರಿಕೆ ಮತ್ತು ಕೇಂದ್ರ ಗ್ರಂಥಾಲಯದ ಸಹಯೋಗದಲ್ಲಿ ನಡೆದ ‘ಓದಿನ ಅರಮನೆಯಲ್ಲಿ ಪುಸ್ತಕ ಪರಿಚಯ’ 6 ನೇ ತಿಂಗಳ ಕಾರ್ಯಕ್ರಮದಲ್ಲಿ ತಾವು ಅನುವಾದಿಸಿರುವ ಓಶೋ ಕೃತಿಗಳಾದ ‘ಮುಂಜಾನೆಯ ಬೆಳಕಿನಲ್ಲಿ’ ಮತ್ತು ‘ಮೌನದ ಮಾತುಗಳು’ ಬಗ್ಗೆ ವಿವರಿಸಿ ಅವರು ಮಾತನಾಡಿದರು.
ಓಶೋ ರಜನೀಶ್ ಅಸಾಮಾನ್ಯ ವ್ಯಕ್ತಿ. ಈವರೆಗೆ ಎಲ್ಲ ವಿಷಯಗಳ ಬಗ್ಗೆ ಮಾತನಾಡಿರುವ ಓಶೋ, ಮಾತನಾಡದ ವಿಷಯವೇ ಬಹುಶಃ ಇಲ್ಲ. ಉಪನಿಷತ್, ಬೌದ್ಧ ಧರ್ಮ, ಯೋಗ, ಧ್ಯಾನ, ಝೆನ್, ಸೂಫಿ, ತಾವೋ, ಭಗವದ್ಗೀತೆ, ಭಾರತ, ಭಾರತೀಯ ಸಂತರು, ಪತಂಜಲಿ, ಶಿವಸೂತ್ರ, ಗಾಂಧಿ, ಆಧ್ಯಾತ್ಮ ಮುಂತಾದ ಎಲ್ಲಾ ವಿಚಾರಗಳ ಬಗ್ಗೆಯೂ ಮಾತನಾಡಿದ್ದಾರೆ. ನಿರಂತರವಾಗಿ ಮಾತನಾಡುತ್ತಲೇ ಇದ್ದ ಓಶೋ ವಿಚಾರಗಳು 600 ಪುಸ್ತಕಗಳಲ್ಲಿ ಬಂದಿವೆ ಎಂದರೆ ಅವರು ಎಷ್ಟು ಮಾತನಾಡಿದ್ದಾರೆ ಎಂದು ಊಹಿಸಬಹುದು.
ಓಶೋ ಒಬ್ಬ ವಿಸ್ಮಯ ವ್ಯಕ್ತಿ. ಅವರ ಚಿಂತನೆಗಳೂ ಕೂಡ ವಿಸ್ಮಯಕರವೇ. ಏಕೆಂದರೆ ಅವು ಕೊಡುವ ಒಳನೋಟಗಳು ನಮ್ಮನ್ನು ಬೆರಗುಗೊಳಿಸಬಲ್ಲವು, ಚಿಂತನೆಗೆ ಹಚ್ಚಬಲ್ಲವು. ಮನುಷ್ಯನ ಆತ್ಮ ಸಂತೋಷವೇ, ಧ್ಯಾನಸ್ಥ ಸ್ಥಿತಿಯನ್ನು ಮುಟ್ಟುವುದೇ ಅವರ ಪ್ರವಚನಗಳ ಗುರಿ. ದಾರಿದೀಪವಾಗಬಲ್ಲ ಅವರ ವಿಚಾರಗಳು ನಮ್ಮ ಜೀವನದಲ್ಲಿ ಸರಿದಾರಿಯನ್ನು ತೋರಬಲ್ಲುದು ಎಂದು ಹೇಳಿದರು.
ಬೆಂಗಳೂರು ಗ್ರಾಮಾಂತರ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚಂದ್ರಶೇಖರ ಹಡಪದ್ ಮಾತನಾಡಿ, ಜ್ಆನವೆಂಬುದು ಸಾಗರದಂತಹುದು. ನಮ್ಮ ಬೊಗಸೆಯಲ್ಲಿ ಸಿಗುವಷ್ಟು ನಾವು ಹಿಡಿಯಬೇಕು. ಪುಸ್ತಕ ಪ್ರೀತಿಯನ್ನು ಬೆಳೆಸುವ, ಲೇಖಕರನ್ನು ಪರಿಚಯಿಸುವ ಈ ಕಾರ್ಯಕ್ರಮ ಮಾದರಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಮಾತನಾಡಿ, ದೇವನಹಳ್ಳಿ ತಾಲ್ಲೂಕು ಬೆಟ್ಟಕೋಟೆಯವರಾದ ಮೂರ್ತಿಶ್ವರಯ್ಯ,48 ಕೃತಿಗಳನ್ನು ರಚಿಸಿದ್ದಾರೆ. ದೇವನಹಳ್ಳಿ ತಾಲ್ಲೂಕು ಪರಿಚಯ, ಬಿ.ಆರ್.ಅಂಬೇಡ್ಕರ್, ಎ.ಪಿ.ಜೆ.ಅಬ್ದುಲ್ ಕಲಾಂ ರವರ ಚಿಂತನೆಗಳು, ಮಹಾತ್ಮ ಗಾಂಧಿ ನುಡಿಮುತ್ತುಗಳು, ತಮಿಳುನಾಡಿನ ಪಂಚಭೂತ ಸ್ಥಳಗಳು, ನ್ಯಾಯಾಲಯಗಳಲ್ಲಿ ಕನ್ನಡ, ಕನ್ನಡದಲ್ಲಿ ಕಾನೂನು ಸೂತ್ರಗಳು ಮುಂತಾದ ಕೃತಿಗಳನ್ನು ರಚಿಸಿರುವ ಅವರ ಸಾಹಿತ್ಯ ಸೇವೆಯನ್ನು ಗುರುತಿಸಿ ಕಾರ್ಯನಿರತ ಪತ್ರಕರ್ತರ ಸಂಘದಿಂದ ‘ಖಾದ್ರಿ ಶಾಮಣ್ಣ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ ಎಂದು ಹೇಳಿದರು.
ಕನ್ನಡ ಸಾರಸ್ವತ ಪರಿಚಾರಿಕೆ ಕಾರ್ಯದರ್ಶಿ ಎ.ಎಂ.ತ್ಯಾಗರಾಜ್, ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಪಾ.ಮು.ಚಲಪತಿಗೌಡ, ಸಾಹಿತಿ ಕೃಷ್ಣಪ್ಪದಾಸರು ಹಾಜರಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!