ಕನ್ನಡಿಗರೆಲ್ಲರೂ ಜಾತಿ, ಮತ, ರಾಜಕೀಯ, ಮೇಲು ಕೀಳು ಎಂಬ ಭಾವನೆ ತೊರೆದು ಒಂದಾಗಬೇಕು. ಇಂತಹ ಕನ್ನಡ ಸಂಸ್ಕೃತಿಯನ್ನು ಬೆಳೆಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ (ನಾರಾಯಣಗೌಡರ ಬಣ) ಜಿಲ್ಲಾಧ್ಯಕ್ಷ ಲೋಕೇಶ್ ಹೇಳಿದರು.
ನಗರದ ಪ್ರವಾಸಿಮಂದಿರದ ಆವರಣದಲ್ಲಿನ ಭಾನುವಾರ ನಡೆದ ಕನ್ನಡ ರಕ್ಷಣಾ ವೇದಿಕೆಯ ವೀರಾಪುರ ಮತ್ತು ಬೂದಾಳ ಗ್ರಾಮ ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಅವರು ಮಾತನಾಡಿದರು.
ಕನ್ನಡ ನಾಡಿನಲ್ಲಿ ಕನ್ನಡ ಭಾಷೆ ಆಡಳಿತ ಭಾಷೆಯಾಗಬೇಕು. ಕನ್ನಡಿಗರು, ಕನ್ನಡ ಭಾಷೆಯಲ್ಲೆ ವ್ಯವಹರಿಸುವ ಮೂಲಕ ನಾಡು, ನುಡಿ, ಭಾಷೆ, ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕಾಗಿದೆ. ನಮ್ಮದಲ್ಲದ ಭಾಷೆಯ ಮೇಲೆ ಹೆಚ್ಚು ವ್ಯಾಮೋಹಗಳನ್ನು ಬೆಳೆಸಿಕೊಳ್ಳಬಾರದು. ಮನೆಗಳಲ್ಲಿ ತೆಲುಗು, ಹೊರಗೆ ಕನ್ನಡ, ಶಾಲೆಯಲ್ಲಿ ಆಂಗ್ಲಭಾಷೆ ಮತ್ತು ರಾಷ್ಟ್ರದಲ್ಲಿ ವ್ಯವಹಾರಿಕ ಭಾಷೆಯಾಗಿ ಹಿಂದಿ ಭಾಷೆಯನ್ನು ಕಲಿಯುವಂತಹ ಸ್ಥಿತಿ ಮಕ್ಕಳಿಗೆ ಒದಗಿ ಬಂದಿರುವುದರಿಂದ ಮಕ್ಕಳ ಕಲಿಕೆಯ ಮೇಲೆ ಹೆಚ್ಚು ದುಷ್ಪರಿಣಾಮವನ್ನು ಉಂಟು ಮಾಡುತ್ತಿವೆ. ಸಂಪರ್ಕ ಭಾಷೆಯನ್ನಾಗಿ ಆಂಗ್ಲಭಾಷೆಯನ್ನು ಉಳಿಸಿಕೊಂಡರೂ ಕೂಡಾ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಮಾತನಾಡುವ, ವ್ಯವಹರಿಸುವ, ಕಲಿಯುವಂತಹ ಭಾಷೆಯಾಗಿ ಬೆಳೆಸಬೇಕು. ಗ್ರಾಮ ಮಟ್ಟದಲ್ಲಿನ ಶಾಖೆಗಳ ಪದಾಧಿಕಾರಿಗಳು ಕನ್ನಡದ ನೆಲ,ಜಲ, ಭಾಷೆ, ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ, ಹೋರಾಟ ಮಾಡಬೇಕು. ನಾಡಿನ ವಿಚಾರವಾಗಿ ಧ್ವನಿಯೆತ್ತಬೇಕು ಎಂದರು.
ವೀರಾಪುರ ಮತ್ತು ಬೂದಾಳ ಗ್ರಾಮ ಘಟಕದ ಅಧ್ಯಕ್ಷರಾಗಿ ಎ.ಮಣಿಕಂಠ, ಉಪಾಧ್ಯಕ್ಷರಾಗಿ ಎನ್.ಸುನೀಲ್ಕುಮಾರ್, ಕಾರ್ಯದರ್ಶಿ ಕೆ.ಹರೀಶ್, ಖಜಾಂಚಿ ಆರ್.ಮೂರ್ತಿ, ನಿರ್ದೇಶಕರಾಗಿ ನಾಗೇಶ್ (ಪುಟ್ಟು), ಪಿ.ಚಂದ್ರಶೇಖರ್, ಜಿ.ಮಹೇಶ್, ಪಿ.ಎಂ.ವೆಂಕಟೇಶ್, ಆರ್.ಮಂಜುನಾಥ್, ಡಿ.ರಾಮಕೃಷ್ಣ, ರಾಮಾಂಜಿ ಪದಾಧಿಕಾರಿಗಳಾಗಿ ಆಯ್ಕೆಯಾಗಿದ್ದಾರೆ.
ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮುನಿರಾಜು, ತಾಲ್ಲೂಕು ಅಧ್ಯಕ್ಷ ವೆಂಕಟರವಣಪ್ಪ, ಅಂತರಾಷ್ಟ್ರೀಯ ಕ್ರೀಡಾಪಟು ಮಂಚನಬೆಲೆ ಶ್ರೀನಿವಾಸ್, ಕಬ್ಬಡ್ಡಿ ತೀರ್ಪುಗಾರ ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ದೇವರಾಜ್(ದೇವಿ) ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -