ಗ್ರಾಮೀಣ ಪ್ರದೇಶದಲ್ಲಿನ ಮಹಿಳೆ ಹಲವು ಸವಾಲುಗಳನ್ನು ಎದುರಿಸಬೇಕಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಎ.ಎಂ.ತ್ಯಾಗರಾಜ್ ತಿಳಿಸಿದರು.
ತಾಲ್ಲೂಕಿನ ಮಳಮಾಚನಹಳ್ಳಿಯ ಸಮುದಾಯ ಭವನದಲ್ಲಿ ಮಂಗಳವಾರ ನಡೆದ ‘ಕಸಾಪ ನಡೆ ಸಾಧಕರ ಕಡೆ’ ಮತ್ತು ಅಂತರರಾಷ್ಟ್ರೀಯ ಗ್ರಾಮೀಣ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಸಾಧಕ ಮಹಿಳೆಯರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಈಗೀಗ ಗ್ರಾಮೀಣ ಮಹಿಳೆಯರು ಪಂಚಾಯಿತಿ ವ್ಯವಸ್ಥೆಯಲ್ಲಿ ರಾಜಕೀಯ ಅಧಿಕಾರದ ವಲಯಕ್ಕೆ ಪ್ರವೇಶಿಸಿದ್ದಾರೆ. ಪರಿಸ್ಥಿತಿ ಬದಲಾಗುತ್ತಿದೆ. ಆದರೂ ಅವರನ್ನು ಘನತೆಯಿಂದ ನಡೆಸಿಕೊಳ್ಳುವ ಸಮಾಜವಿನ್ನೂ ಸೃಷ್ಟಿಯಾಗಿಲ್ಲ. ನಮ್ಮ ದೇಶದಲ್ಲಿ ಅನೇಕ ಮಹಿಳೆಯರು ರಾಜಕಾರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದರೂ ನಿತ್ಯ ಜೀವನದಲ್ಲಿ ಅವರ ಕುರಿತ ಸಮಾಜದ ನಡವಳಿಕೆ ಪೂರ್ತಿ ಬದಲಾಗಿಲ್ಲ. ಅದು ಬದಲಾದಾಗ ಮಾತ್ರ ಹಳ್ಳಿ ಹೆಣ್ಣುಮಕ್ಕಳ ಶ್ರಮಕ್ಕೆ ನಿಜವಾದ ಅರ್ಥ ಬರುತ್ತದೆ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಎನ್.ಬೈರೇಗೌಡ ಮಾತನಾಡಿ, ಹೆಣ್ಣುಮಕ್ಕಳು ಖಡ್ಡಾಯವಾಗಿ ಶಿಕ್ಷಣ ಪಡೆಯಬೇಕು. ಸ್ವಾವಲಂಬಿಗಳಾಗಿ ಆರ್ಥಿಕವಾಗಿ ಸಬಲರಾಗಬೇಕು. ಮನೆಗಳ ಬಳಿ ಕೋಳಿ, ಕುರಿ, ಜೇನು ಸಾಕಣೆ ಮಾಡುತ್ತಾ ತರಕಾರಿಗಳನ್ನು ಬೆಳೆಯುತ್ತಾ ಕೈಖರ್ಚಿಗೆ ಹಣ ಸಂಪಾದಿಸಬಹುದು. ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಿ ಸರ್ಕಾರಿ ಶಾಲೆಗಳು ಮುಚ್ಚದಂತೆ ಕಾಪಾಡುವ ಹೊಣೆ ನಮ್ಮದು ಎಂದರು.
ಈ ಸಂದರ್ಭದಲ್ಲಿ ಮೂವರು ಸಾಧಕಿಯರನ್ನು ಸನ್ಮಾನಿಸಲಾಯಿತು. ಮಳಮಾಚನಹಳ್ಳಿ ಪಾರ್ವತಮ್ಮ (ಹರಿಕತೆ ಮತ್ತು ನಾಟಕ ಕಲಾವಿದೆ), ಮಳಮಾಚನಹಳ್ಳಿ ಪದ್ಮಮ್ಮ(ಗ್ರಾಮದಲ್ಲಿ ಮದ್ಯಪಾನ ನಿಷೇಧಿಸಲು ಹೋರಾಟಿದ ಮಹಿಳೆ), ಬೋದಗೂರು ಮಾಣಿಕ್ಯಮ್ಮ (ಸಿರಿಧಾನ್ಯ, ಸಮಗ್ರ ಸಾವಯವ ಕೃಷಿ, ಹೈನುಗಾರಿಕೆ) ಅವರನ್ನು ಗೌರವಿಸಲಾಯಿತು.
ಕಸಾಪ ತಾಲ್ಲೂಕು ಘಟಕದ ಕಾರ್ಯದರ್ಶಿ ಚಾಂದ್‌ಪಾಷ, ಸಂಘಸಂಸ್ಥೆಗಳ ಪ್ರತಿನಿಧಿ ಶಂಕರ್, ನಗರಘಟಕದ ಅಧ್ಯಕ್ಷ ಮುನಿರಾಜು, ನರಸಿಂಹಮೂರ್ತಿ, ಮಂಜುನಾಥ್, ಗ್ರಾಮ ಪಂಚಾಯಿತಿ ಪಿಡಿಒ ಪವಿತ್ರ, ಕಾರ್ಯದರ್ಶಿ ರಾಜಣ್ಣ, ರೇಷ್ಮೆ ರೈತ ಉತ್ಪಾದಕ ಕಂಪೆನಿ ಅಧ್ಯಕ್ಷ ಬೋದಗೂರು ವೆಂಕಟಸ್ವಾಮಿರೆಡ್ಡಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ರಾಧಮ್ಮ, ಅಂಗನವಾಡಿ ಕಾರ್ಯಕರ್ತೆಯರಾದ ಮಂಜುಳಾ, ಭಾಗ್ಯಮ್ಮ, ಸೌಮ್ಯಶ್ರೀ, ವಿಮಲಾ, ಲಕ್ಷ್ಮೀದೇವಮ್ಮ, ಮುನಿಆಂಜಿನಮ್ಮ, ದ್ಯಾವಮ್ಮ, ವೀಣಾ, ರೂಪಾ, ರಮಾದೇವಿ, ಲಕ್ಷ್ಮೀದೇವಿ, ವರಲಕ್ಷ್ಮಿ, ರತ್ನಮ್ಮ, ಮಂಜುಳಮ್ಮ, ನಾಗರತ್ನ, ಆನಂದ್ ಹಾಜರಿದ್ದರು.