ವಿವಿಧ ಹಣ್ಣುಗಳು ತುಂಬಿರುವ ಮರದ ಕಾಂಡಕ್ಕೆ ಜೋತುಬಿದ್ದ ಉಯ್ಯಾಲೆ. ಉಯ್ಯಾಲೆಯಲ್ಲಿ ರಾಜಠೀವಿಯಲ್ಲಿ ಕುಳಿತು ಬೆಣ್ಣೆಯ ಮಡಿಕೆಯನ್ನು ಹಿಡಿದ ಶ್ರೀಕೃಷ್ಣ. ಕೃಷ್ಣನ ಸುತ್ತ ವೈವಿಧ್ಯಮಯ ತಿಂಡಿ ತಿನಿಸುಗಳು, ಹೂಗಳ ಅಲಂಕಾರ ಕಣ್ಮನ ತಣಿಸುವಂತಿತ್ತು.
ನಗರದ ಗೌಡರಬೀದಿಯ ಪಾರ್ಥಸಾರಥಿ ಮಂಜುನಾಥ್ ಅವರ ಮನೆಯಲ್ಲಿ ಹಲವಾರು ವರ್ಷಗಳಿಂದ ಕೃಷ್ಣ ಜನ್ಮಾಷ್ಠಮಿಯನ್ನು ವಿಶೇಷವಾಗಿ ಆಚರಿಸಿಕೊಂಡು ಬರುತ್ತಿದ್ದಾರೆ, ಒಂದೊಂದು ವರ್ಷ ಒಂದೊಂದು ಕೃಷ್ಣ ಮಹಿಮೆಯನ್ನು ವ್ಯಕ್ತವಾಗುವಂತೆ ಅಲಂಕಾರ ಮಾಡುತ್ತಾರೆ. ಈ ವರ್ಷ ಬೆಣ್ಣೆಯ ಪ್ರಿಯ ಕೃಷ್ಣ ಉಯ್ಯಾಲೆಯ ಸೇವೆಯನ್ನು ಭಕ್ತರಿಂದ ಹೊಂದುತ್ತಿದ್ದಾನೆ.
ಜೊತೆಯಲ್ಲಿ ನೂರೆಂಟು ವಿಧದ ತಿಂಡಿ ತಿನಿಸುಗಳೊಂದಿಗೆ ನಾನಾ ರೀತಿಯ ಹಣ್ಣಗಳು ಮತ್ತು ಹೂಗಳಿಂದ ಶ್ರೀಕೃಷ್ಣನ ವಿಗ್ರಹವನ್ನು ಅಲಂಕರಿಸಲಾಗಿದೆ.
ಸುತ್ತಮುತ್ತಲಿನ ಮನೆಗಳವರು, ಮಕ್ಕಳು ಬಂದು ಭಾಗವತದ ಪ್ರಮುಖ ಘಟ್ಟ ಹಾಗೂ ಬಾಲಕೃಷ್ಣನ ಲೀಲೆಗಳನ್ನು ಕಂಡು ಪ್ರಸಾದವನ್ನು ಪಡೆದರು. ಮಹಿಳೆಯರು ಭಜನೆ ಹಾಗೂ ಭಕ್ತಿಗೀತೆಗಳ ಗಾಯನವನ್ನು ನಡೆಸಿದರು.
‘ಸುಮಾರು ಹದಿನೆಂಟು ವರ್ಷಗಳಿಂದ ಕೃಷ್ಣ ಜನ್ಮಾಷ್ಠಮಿಯನ್ನು ವಿಶೇಷವಾಗಿ ಆಚರಿಸಿಕೊಂಡು ಬರುತ್ತಿದ್ದು, ಒಂದೊಂದು ವರ್ಷ ಒಂದೊಂದು ಕೃಷ್ಣ ಮಹಿಮೆಯನ್ನು ವ್ಯಕ್ತವಾಗುವಂತೆ ಅಲಂಕಾರ ಮಾಡುತ್ತೇವೆ. ಈ ಬಾರಿ ಎಲ್ಲರ ಪ್ರೀತಿಪಾತ್ರನಾದ ಬೆಣ್ಣೆ ಕೃಷ್ಣನನ್ನು ಪೂಜಿಸುತ್ತಿದ್ದೇವೆ. ಮಕ್ಕಳಿಗೆ ಈ ರೀತಿಯ ಪ್ರತಿಕೃತಿಗಳ ಮೂಲಕ ಶ್ರೀಕೃಷ್ಣನ ಲೀಲೆಗಳು ಹಾಗೂ ಭಾಗವತದ ಕಥೆಯನ್ನು ತಿಳಿಸುವ ಪ್ರಯತ್ನವನ್ನು ಮಾಡಿದ್ದೇವೆ’ ಎಂದು ಗೌಡರಬೀದಿಯ ಮಂಜುನಾಥ್ ತಿಳಿಸಿದರು.
- Advertisement -
- Advertisement -
- Advertisement -
- Advertisement -