ಕ್ಷಯರೋಗಕ್ಕೆ ಜಾಗ್ರತೆ ಮೂಡಿಸುವ ಕಾರ್ಯಕ್ರಮ ಅವಶ್ಯಕ ಎಂದು ತಾಲ್ಲೂಕು ಪಂಚಾಯಿತಿ ಇಓ ಎಂ.ವೆಂಕಟೇಶ್ ತಿಳಿಸಿದರು.
ತಾಲ್ಲೂಕಿನ ಮಳ್ಳೂರು ಗ್ರಾಮದಲ್ಲಿ ಶುಕ್ರವಾರ ಜಿಲ್ಲಾ ಕ್ಷಯರೋಗ ನಿಯಂತ್ರಣ ಕೇಂದ, ಮೇಲೂರು ಪ್ರಾಥಮಿಕ ಆರೋಗ್ಯ ಕೇಂದ್ರ, ಮಳ್ಳೂರು ಗ್ರಾಮಪಂಚಾಯಿತಿ ಮತ್ತು ಮಂಚೇನಹಳ್ಳಿ ವಿಕಾಸ ಸೇವಾ ಗ್ರಾಮೀಣಾಭಿವೃದ್ಧಿ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಕ್ಷಯರೋಗ ನಿಯಂತ್ರಣ ಕುರಿತು ಸಮುದಾಯ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದೇಶದಾದ್ಯಂತ ಪ್ರತಿ ಐದು ನಿಮಿಷಕ್ಕೆ ಇಬ್ಬರು ಕ್ಷಯರೋಗದಿಂದ ಮೃತಪಡುತ್ತಿರುವುದು ಖೇದಕರ ಸಂಗತಿಯಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಹಿಂದಿರುವ ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸರ್ಕಾರದ ಇಲಾಖೆಗಳು ಮತ್ತು ಸರ್ಕಾರೇತರ ಸಂಘ ಸಂಸ್ಥೆಗಳು ಜಾಗೃತಿ ಮೂಡಿಸುವ ಕಾರ್ಯನಿರ್ವಹಿಸಬೇಕು, ಸಂಘ ಸಂಸ್ಥೆಗಳ ಕಾರ್ಯಕರ್ತರು ಅನುಷ್ಠಾನ ಕಾರ್ಯದಲ್ಲಿ ಹೆಚ್ಚಿನ ಮುತುವರ್ಜಿವಹಿಸಬೇಕು ಎಂದರು.
ಜಿಲ್ಲಾ ಕ್ಷಯರೋಗ ನಿಯಂತ್ರಣ ಕೇಂದ್ರದ ಡಿಆರ್ ಟಿಬಿ ಮೇಲ್ವಿಚಾರಕ ಬಿ.ಕೆ.ಮಂಜುನಾಥ ಮಾತನಾಡಿ, ಕ್ಷಯ ರೋಗದ ಬಗ್ಗೆ ಜನತೆಯಲ್ಲಿರುವ ತಿಳುವಳಿಕೆಯ ಕೊರತೆಯಿಂದ ಬಹಳಷ್ಟು ಮಂದಿ ಮೃತ ಪಡುತ್ತಿದ್ದಾರೆ. ಎರಡು ವಾರಕ್ಕಿಂತ ಹೆಚ್ಚಿಗೆ ಸತತವಾಗಿ ಕೆಮ್ಮು ಇರುವುದು, ತೂಕ ಕಡಿಮೆಯಾಗುವುದು, ಸಂಜೆ ಸಮಯದಲ್ಲಿ ಜ್ವರ ಬರುವುದು, ಆಯಾಸ, ಉಸಿರಾಟದಲ್ಲಿ ತೊಂದರೆ, ಹಸಿವಾಗದಿರುವುದು ಇತ್ಯಾದಿ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಅಗತ್ಯ ಚಿಕಿತ್ಸೆ ಪಡೆದುಕೊಳ್ಳಬೇಕು.
ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಕಫ ಪರೀಕ್ಷೆ ಮಾಡಲಾಗುತ್ತದೆ, ಕ್ಷಯರೋಗವು ಪತ್ತೆಯಾದರೆ ಅವರಿಗೆ ೬ ರಿಂದ ೮ ತಿಂಗಳ ಚಿಕಿತ್ಸೆ ಡಾಟ್ಸ್ ನೀಡಲಾಗುತ್ತದೆ. ರೋಗಿ ಇರುವ ಕಡೆಗೆ ಆಶಾ ಕಾರ್ಯಕರ್ತೆಯರ ಮೂಲಕ ಚಿಕಿತ್ಸೆಯ ಸೇವೆ ನೀಡಲಾಗುತ್ತದೆ. ಡಾಟ್ಸ್‌ನಿಂದ ಕ್ಷಯ ಸಂಪೂರ್ಣ ವಾಸಿಯಾಗುತ್ತದೆ, ಪರೀಕ್ಷೆ ಮತ್ತು ಚಿಕಿತ್ಸೆ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿದ್ದು ಸೇವೆಯನ್ನು ಬಳಸಿಕೊಳ್ಳುವಂತೆ ತಿಳಿಸಿದರು.
ಜಿಲ್ಲಾಕ್ಷಯರೋಗ ನಿಯಂತ್ರಣ ಕೇಂದ್ರದ ಹಿರಿಯ ಆರೋಗ್ಯ ಮೇಲ್ವಿಚಾರಕ ವೆಂಕಟನರಸಪ್ಪ, ಶಿಡ್ಲಘಟ್ಟ ಕ್ಷಯರೋಗ ನಿಯಂತ್ರಣ ಘಟಕದ ಹಿರಿಯ ಚಿಕಿತ್ಸಾ ಮೇಲ್ವಿಚಾರಕ ನರಸಿಂಹಮೂರ್ತಿ, ವಿಕಾಸ ಸೇವಾ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಕಾರ್ಯದರ್ಶಿ ಗೌರಿಶಂಕರ ಮಾತನಾಡಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಧಶಿವಕುಮಾರ್, ಸದಸ್ಯ ನಾರಾಯಣಸ್ವಾಮಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಅನಿಲ್ ಕುಮಾರ್, ಪಿಡಿಓ ರವಿಕುಮಾರ್, ವಿಕಾಸ ಸೇವಾ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಂಯೋಜಕಿ ಭಾಗ್ಯ, ಆಶಾ ಕಾರ್ಯಕರ್ತೆಯರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
- Advertisement -
- Advertisement -
- Advertisement -
- Advertisement -