‘ಈಗೇನೋ ನೀರಿದೆ, ಹಿಪ್ಪುನೇರಳೆ ಸೊಪ್ಪು ಬೆಳೆಯುತ್ತಿದ್ದೀಯ ನಾರಾಯಣಸ್ವಾಮಿ, ನೀರಾಗೋದ್ರೆ ಏನು ಮಾಡ್ತೀಯ’ ಎಂದು ರೇಷ್ಮೆ ಗೂಡಿನ ಮಾರುಕಟ್ಟೆಯ ಸಹಾಯಕ ನಿರ್ದೇಶಕರಾಗಿದ್ದ ಆಂಜನೇಯರೆಡ್ಡಿ ಕೇಳಿದ್ದರು. ಆಗ ನಾನು ಎಲ್ಲರಿಗೂ ಏನಾಗುತ್ತೋ ನನಗೂ ಅದೇ ಆಗುತ್ತೆ ಬಿಡಿ ಸರ್ ಎಂದು ಹೇಳಿದ್ದೆ. ‘ಬೇಡ ನಾರಾಯಣಸ್ವಾಮಿ, ಸಾಲು ಪದ್ಧತಿಯಲ್ಲಿ ಬೆಳೆಯುತ್ತಿದ್ದ ಹಿಪ್ಪುನೇರಳೆಯನ್ನು ತೆಗೆದು ಗುಣಿ ಮತ್ತು ಮರಕಡ್ಡಿ ಪದ್ಧತಿಯನ್ನು ಅನುಸರಿಸಿ ಬೆಳೆಯಲು ಸಲಹೆ ನೀಡಿದರು. ಅಂದು ಅವರು ಹೇಳಿದ ಮಾತಿನ ಮಹತ್ವ ಇಂದು ನನಗೆ ತಿಳಿಯುತ್ತಿದೆ ಎಂದು ಮರದ ರೀತಿಯಲ್ಲಿ ಬೆಳೆಯುತ್ತಿರುವ ಹಿಪ್ಪುನೇರಳೆ ಸೊಪ್ಪಿನ ಗಿಡಗಳ ಬಳಿ ನಿಂತು ವಿವರಿಸುತ್ತಾರೆ ಅರಿಕೆರೆ ನಾರಾಯಣಸ್ವಾಮಿ.
ಅಂತರ್ಜಲ ಕುಸಿಯುತ್ತಿರುವ ಮತ್ತು ಮಳೆ ನೀರಿನ ಕೊರತೆಯ ಹಿನ್ನೆಲೆಯಲ್ಲಿ ರೇಷ್ಮೆಯನ್ನೇ ನಂಬಿದ ತಾಲ್ಲೂಕಿನ ರೈತರಿಗೆ ಗುಣಿ ಕಡ್ಡಿ ಪದ್ಧತಿಯು ವರದಾನವಾಗಿದ್ದು, ಅರಿಕೆರೆ ಗ್ರಾಮದ ನಾರಾಯಣಸ್ವಾಮಿ ಈ ಪದ್ಧತಿಯ ಮೂಲಕ ಕಡಿಮೆ ನೀರಿನಲ್ಲೂ ಉತ್ಕೃಷ್ಟ ಹಿಪ್ಪುನೇರಳೆ ಸೊಪ್ಪನ್ನು ಬೆಳೆಯುತ್ತಾ ಮಾದರಿಯಾಗಿದ್ದಾರೆ.

ಕುಸಿದ ಅಂತರ್ಜಲ ಮಟ್ಟ, ವಿದ್ಯುತ್ ಕಣ್ಣಾ ಮುಚ್ಚಾಲೆ, ಕೂಲಿ ಕಾರ್ಮಿಕರ ಸಮಸ್ಯೆಗಳು ಕಳೆದ ಐದಾರು ವರ್ಷಗಳಿಂದ ಜಿಲ್ಲೆಯ ರೈತರನ್ನು ಬೆಂಬಿಡದೆ ಕಾಡುತ್ತಿವೆ. ಇಂತಹ ಸಮಸ್ಯೆಗಳ ವಿರುದ್ಧ ಸದಾ ಸೆಣಸಾಡುವ ಬುದ್ಧಿವಂತ ರೈತರು ತಮ್ಮ ನೆಲಮೂಲದ ದೇಸಿ ಜ್ಞಾನವನ್ನು ಬಳಸಿ ಅಲ್ಲಲ್ಲಿ ತಕ್ಕ ಮಟ್ಟಿನ ಯಶಸ್ಸನ್ನು ಕಂಡುಕೊಳ್ಳುತ್ತಿದ್ದಾರೆ. ಅಂಥಹವರಲ್ಲಿ ಒಬ್ಬರಾದ ಅರಿಕೆರೆ ನಾರಾಯಣಸ್ವಾಮಿ ಗುಣಿ ಮತ್ತು ಮರಕಟ್ಟಿ ಪದ್ಧತಿಯಲ್ಲಿ ಮೊದಲು ಮುಕ್ಕಾಲು ಎಕರೆ ಪ್ರದೇಶದಲ್ಲಿ ಪ್ರಯೋಗವನ್ನು ಕೈಗೊಂಡರು. 10 ಅಡಿ ಉದ್ದ ಮತ್ತು 10 ಅಡಿ ಅಗಲದ ಅನುಪಾತದಲ್ಲಿ ಒಂದು ಎಕರೆಗೆ 436 ಹಿಪ್ಪುನೇರಳೆ ಸಸಿಗಳನ್ನು ಈ ಪದ್ಧತಿಯಲ್ಲಿ ನಾಟಿ ಮಾಡಬಹುದಾಗಿದೆ. ಮೂರರಿಂದ ನಾಲ್ಕು ಅಡಿ ಆಳವಾಗಿ ಗುಣಿ ತೆಗೆದು ಹಿಪ್ಪುನೇರಳೆ ನಾರನ್ನು ನಾಟಿ ಮಾಡಿ ಅದು ಬೆಳೆದಂತೆಲ್ಲಾ ಕೊಟ್ಟಿಗೆ ಗೊಬ್ಬರ, ಮಣ್ಣು, ಹಸಿರೆಲೆ ಸೊಪ್ಪು ಮೊದಲಾದವುಗಳನ್ನು ತುಂಬಿಸುತ್ತಾ ಕವಲುಗಳನ್ನು ಕತ್ತರಿಸುತ್ತಾ ಮರದಂತೆ ಎತ್ತರಗೊಳಿಸಬೇಕು. ಮೊದಲ ವರ್ಷ ಬೆಳೆ ಸಿಗುವುದಿಲ್ಲ, ನಂತರ ಸೊಪ್ಪು ಸಿಗಲು ಪ್ರಾರಂಭವಾಗುತ್ತದೆ. ತಾಳ್ಮೆಯಿದ್ದವರಿಗೆ ಅಧಿಕ ಫಲ ಎಂಬಂತಹುದು ಈ ವಿಧಾನ ಎನ್ನುತ್ತಾರೆ ನಾರಾಯಣಸ್ವಾಮಿ.
ಈ ಪದ್ಧತಿಯಲ್ಲಿ ಕೂಲಿ ಆಳಿನ ಉಳಿತಾಯವಾಗುತ್ತದೆ. ಬೇರು ಆಳದಲ್ಲಿರುವುದರಿಂದ ಕಡಿಮೆ ನೀರಿದ್ದರೂ ಸಾಕು, ಸೊಪ್ಪು ಕುಯ್ಯುವ ಖರ್ಚು ಕಡಿಮೆ ಮತ್ತು ಸೊಪ್ಪು ದಿವಿನಾಗಿರುವುದರಿಂದ ದಿನಕ್ಕೆರಡು ಬಾರಿ ಹುಳು ಮೇಯಿಸಲು ಹಾಕಿದರೂ ಸಾಕು. ಅಂತರ ಬೆಳೆಯಾಗಿ ಮೊದಲು ರಾಗಿಯನ್ನು ಹಾಕಿದ್ದೆ, ಈಗ ತೊಗರಿಯನ್ನು ಬೆಳೆದಿದ್ದೇನೆ, ಒಳ್ಳೆಯ ಬೆಳೆಯಾಗಿದೆ. ಈಗ ಶುಂಟಿ ಮತ್ತು ಕನಕಾಂಬರವನ್ನು ಹಾಕಲು ಸಿದ್ಧತೆ ನಡೆಸಿದ್ದೇನೆ. ಸಾಲು ಪದ್ಧತಿಗಿಂತ ಈ ಗುಣಿ ಮತ್ತು ಮರಕಟ್ಟಿ ಪದ್ಧತಿಯಲ್ಲಿ ಹಲವು ಲಾಭಗಳಿವೆ ಎಂದು ಅವರು ವಿವರಿಸಿದರು.

ಮೊದಲು ಈ ಪದ್ಧತಿಯಲ್ಲಿ ನಾಟಿ ಮಾಡಿದಾಗ ಖಾಲಿಯಾಗಿರುವ ತೋಟವನ್ನು ನೋಡಿ ಮನೆಯಲ್ಲಿ ಹೆಂಡತಿ ಮಕ್ಕಳು ವಿರೋಧಿಸಿದ್ದರು. ಈಗ ಒಂದೂವರೆ ವರ್ಷದ ನಂತರ ಇದರ ಲಾಭವನ್ನು ಮನಗಂಡು ಉಳಿದ ತೋಟದಲ್ಲೂ ಈ ಪದ್ಧತಿಯಲ್ಲೇ ಹಿಪ್ಪುನೇರಳೆ ಬೆಳೆಸೋಣ ಎನ್ನುತ್ತಿದ್ದಾನೆ ಮಗ. ಕೊಳವೆ ಬಾವಿಯನ್ನು ಕೊರೆಸುತ್ತಾ ರೈತರು ಸಾಲಗಾರರಾಗುತ್ತಿದ್ದಾರೆ. ಅವರಿಗೆಲ್ಲಾ ನಾನು ಈ ಪದ್ಧತಿಯನ್ನು ಅಳವಡಿಸಿಕೊಳ್ಳಲು ಸಲಹೆ ನೀಡುತ್ತಿದ್ದೇನೆ. ರೈತರು ಒಂದೇ ಬೆಳೆಯನ್ನು ಅವಕಲಂಬಿಸದಂತೆ ಈ ಪದ್ಧತಿಯಲ್ಲಿ ಅಂತರ ಬೆಳೆಯನ್ನೂ ಬೆಳೆಯಬಹುದು. ಇಂಡೋನೇಷ್ಯಾ ಮೂಲದ ಜಮನಾಪಾರಿ ತಳಿಯ ಮೇಕೆಯನ್ನೂ ಸಾಕುತ್ತಿದ್ದೇನೆ. ಒಂದು ಜೊತೆಯನ್ನು ಒಂದು ಲಕ್ಷ ರೂಗಳಿಗೆ ಮಾರುತ್ತೇನೆ ಎಂದು ನಾರಾಯಣಸ್ವಾಮಿ ಹೇಳಿತ್ತಾರೆ.
‘ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಸುಮಾರು 5,935 ಹೆಕ್ಟೇರ್ ವಿಸ್ತೀರ್ಣದಲ್ಲಿ ಹಿಪ್ಪುನೇರಳೆ ಬೇಸಾಯವನ್ನು ಕೈಗೊಂಡಿದ್ದು, ಸುಮಾರು 6,039 ಕುಟುಂಬಗಳು ಹಿಪ್ಪುನೇರಳೆ ಬೇಸಾಯವನ್ನು ಅವಲಂಬಿಸಿದ್ದಾರೆ. ಹಿಪ್ಪುನೇರಳೆ ಬೇಸಾಯದತ್ತ ಆಕರ್ಷಿಸಲು ರೇಷ್ಮೆ ಇಲಾಖೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಮಳೆಯಾಶ್ರಯದಲ್ಲಿ ಮರಗಳ ರೂಪದಲ್ಲಿ ಹಿಪ್ಪುನೇರಳೆ ಗಿಡಗಳನ್ನು ಬೆಳೆಸಲು ರೇಷ್ಮೆ ಇಲಾಖೆಯಿಂದ ಯೋಜನೆಯನ್ನು ರೂಪಿಸಿದೆ. ತಾಲ್ಲೂಕಿನ 300 ಎಕರೆಯಲ್ಲಿ ನಾಟಿ ಮಾಡಲು ವರದನಾಯಕನಹಳ್ಳಿ ಗೇಟ್ ಬಳಿಯಲ್ಲಿ ಸಾಮಾಜಿಕ ಅರಣ್ಯ ಇಲಾಖೆಯವರು ಒಂದು ಲಕ್ಷ ಮೂವತ್ತೈದು ಸಾವಿರ ಹಿಪ್ಪುನೇರಳೆ ಸಸಿಗಳನ್ನು ಬೆಳೆಸಿಕೊಟ್ಟಿದ್ದಾರೆ. ನಾಟಿ ಮಾಡುವುದಕ್ಕೂ ನರೇಗಾದಿಂದ 161 ಮಾನವ ದಿನಗಳ ಕೂಲಿಯನ್ನೂ ನೀಡಲಾಗುವುದು. ಹಿಪ್ಪುನೇರಳೆ ನರ್ಸರಿ ಮಾಡಲು ಹಾಗೂ 2 ಮತ್ತು 3ನೇ ವರ್ಷದ ಹಿಪ್ಪುನೇರಳೆ ತೋಟ ನಿರ್ವಹಣೆಗೂ ಸರ್ಕಾರ ಸಹಾಯಹಸ್ತ ಚಾಚಿದೆ. ಇದರ ಸದುಪಯೋಗ ಮಾಡಿಕೊಳ್ಳಬೇಕು’ ಎಂದು ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಪ್ಪ ತಿಳಿಸಿದರು.
- Advertisement -
- Advertisement -
- Advertisement -







