ಕಾಲುಬಾಯಿ ಜ್ವರದಿಂದ ಜಾನುವಾರುಗಳನ್ನು ರಕ್ಷಿಸಲು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯು ರಾಸುಗಳಿಗೆ ಮಾರ್ಚ್ 9ರಿಂದ 25ರವರೆಗೆ ಎಂಟನೇ ಸುತ್ತಿನ ಲಸಿಕಾ ಆಂದೋಲನ ಕೈಗೊಂಡಿದೆ.
ತಾಲ್ಲೂಕಿನ ಚೌಡಸಂದ್ರ ಗ್ರಾಮದಲ್ಲಿ ಲಸಿಕೆ ಕಾರ್ಯಕ್ರಮದಲ್ಲಿ ಗುರುವಾರ ಹಾಜರಿದ್ದ ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಡಾ.ಮುನಿನಾರಾಯಣರೆಡ್ಡಿ ಮಾತನಾಡಿ, ಜ್ವರ ಬರುವುದಕ್ಕಿಂತ ಮುಂಚೆ ಜಾಗೃತರಾಗಿ ಲಸಿಕೆ ಹಾಕಿಸುವುದು ಸೂಕ್ತ. ಪ್ರತಿ ರಾಸುಗಳಿಗೂ ಲಸಿಕೆ ಹಾಕಿಸಬೇಕು. ಎಲ್ಲ ಸೀಳು ಗೊರಸುಳ್ಳ ಪ್ರಾಣಿಗಳಲ್ಲಿ ಅಂದರೆ ಹಸು, ಎಮ್ಮೆ, ಹಂದಿ ಮುಂತಾದ ಪ್ರಾಣಿಗಳಲ್ಲಿ ವೈರಾಣುಗಳಿಂದ ಈ ರೋಗ ಹರಡುತ್ತದೆ. ಇದು ಸಾಂಕ್ರಾಮಿಕವಾಗಿದ್ದು, ಅತಿ ಬೇಗನೆ ಒಂದರಿಂದ ಇನ್ನೊಂದು ರಾಸುವಿಗೆ ನೇರ ಸಂಪರ್ಕ, ಗಾಳಿ, ನೀರು, ಆಹಾರದ ಮೂಲಕ ಹರಡುತ್ತದೆ ಎಂದು ತಿಳಿಸಿದರು.
ತಾಲ್ಲೂಕಿನ 274 ಜನವಸತಿ ಗ್ರಾಮಗಳಲ್ಲಿ ಸಮೀಕ್ಷೆ ನಡೆಸಿದ್ದೇವೆ. ಈ ಗ್ರಾಮಗಳಲ್ಲಿ 34,519 ದನಗಳು, 6,957 ಎಮ್ಮೆಗಳು, 175 ಹಂದಿಗಳು ಸೇರಿದಂತೆ 41,651 ಜಾನುವಾರುಗಳಿವೆ. ಕಳೆದ ನಾಲ್ಕು ದಿನಗಳಲ್ಲಿ 87 ಗ್ರಾಮಗಳಲ್ಲಿ ಲಸಿಕೆ ಹಾಕಲಾಗಿದೆ. 11,911 ದನಗಳು, 1904 ಎಮ್ಮೆಗಳು, 44 ಹಂದಿಗಳು ಸೇರಿದಂತೆ ಒಟ್ಟು 13,859 ಜಾನುವಾರುಗಳಿಗೆ ಲಸಿಕೆ ಹಾಕಿದ್ದೇವೆ.
ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ ವಾತಾವರಣ ಬದಲಾವಣೆ ಬರುವುದರಿಂದ ಜಾನುವಾರುಗಳಿಗೆ ಕಾಲುಬಾಯಿ ಜ್ವರ ಬರುವ ಸನ್ನಿವೇಶ ಇರುತ್ತದೆ. ಅದಕ್ಕೆ ಮುಂಜಾಗ್ರತ ಕ್ರಮವಾಗಿ ಪಶುಪಾಲನೆ ಇಲಾಖೆಯಿಂದ ಉಚಿತ ಲಸಿಕೆ ಹಾಕಲಾಗುತ್ತಿರುವುದರಿಂದ ರೈತರು ಸದುಪಯೋಗಪಡಿಸಿಕೊಳ್ಳಬೇಕು. ಕಳೆದ ವರ್ಷ ಮಳಮಾಚನಹಳ್ಳಿಯಲ್ಲಿ ಹಾಗೂ ಲಕ್ಕಹಳ್ಳಿಯಲ್ಲಿ ಹಲವು ಜಾನುವಾರುಗಳು ಈ ರೋಗಕ್ಕೆ ಬಲಿಯಾಗಿ ಅಪಾರ ನಷ್ಟವುಂಟಾಗಿತ್ತು. ಈ ಲಸಿಕೆ ಹಾಕುವುದರಿಂದ ಎರಡು ದಿನ ಹಾಲು ಕಡಿಮೆಯಾಗುವುದು ಬಿಟ್ಟರೆ ಯಾವುದೇ ತೊಂದರೆಯಿಲ್ಲ. ಮೂಢನಂಬಿಕೆ ಬಿಟ್ಟು ಜನರು ಲಸಿಕೆ ಹಾಕಿಸುವಂತೆ ಅವರು ತಿಳಿಸಿದರು.
ಮೇಲೂರು ಪಶು ಆಸ್ಪತ್ರೆಯ ದೇವರಾಜ್, ಶ್ರೀನಿವಾಸ್ ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -