ನಗರಸಭಾ ಕಾರ್ಯಾಲಯದಿಂದ ಸೋಮವಾರ ನಡೆಯಬೇಕಿದ್ದ ಒಳಚರಂಡಿ ಶುದ್ಧೀಕಣ ಘಟಕದ ತ್ಯಾಜ್ಯ ನೀರಿನ ಹರಾಜು ಪ್ರಕ್ರಿಯೆಯನ್ನು ನಿಲ್ಲಿಸಿದ ಹಿನ್ನೆಲೆಯಲ್ಲಿ ಹಿತ್ತಲಹಳ್ಳಿಯ ಹಾಗೂ ಇನ್ನಿತರ ರೈತರು ನಗರಸಭೆ ಕಚೇರಿಗೆ ಆಗಮಿಸಿ ಅಧಿಕಾರಿಗಳು ಹಾಗೂ ರೈತಸಂಘದ ಜಿಲ್ಲಾ ಅಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟಿಸಿದರು.
ನಗರಸಭೆ ವ್ಯಾಪ್ತಿಯ ತಾಲ್ಲೂಕಿನ ಹಿತ್ತಲಹಳ್ಳಿ ಬಳಿಯಿರುವ ಒಳಚರಂಡಿ ಶುದ್ಧೀಕರಣ ಘಟಕದಲ್ಲಿ ಸುಮಾರು 3.1 ಎಂ.ಎಲ್.ಡಿ ತ್ಯಾಜ್ಯ ನೀರು ಶೇಖರಣೆಯಾಗುತ್ತಿದ್ದು, ವ್ಯವಸಾಯದ ಉಪಯೋಗಕ್ಕಾಗಿ ಈ ನೀರನ್ನು ಸಾರ್ವಜನಿಕ ಹರಾಜು ಮೂಲಕ ವಿಲೇ ಮಾಡಲು ಯೋಜಿಸಿ ಕರಪತ್ರ ಹಂಚಲಾಗಿತ್ತು. ಆದರೆ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲು ಬಂದಿದ್ದ ರೈತರು ಹರಾಜು ಮುಂದೂಡಿರುವುದಾಗಿ ನಗರಸಭೆ ಮುಖ್ಯಾಧಿಕಾರಿಗಳ ಪತ್ರ ಕಂಡು ಅಸಮಧಾನಗೊಂಡರು. ಕೆಲ ರೈತರ ಆಕ್ಷೇಪಣೆ ಮೇರೆಗೆ ಜಿಲ್ಲಾಧಿಕಾರಿಗಳು ದೂರವಾಣಿ ಮೂಲಕ ಸೂಚಿಸಿರುವಂತೆ ಹರಾಜು ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಮುಂದೂಡಿರುವುದಾಗಿ ಈ ಸಂದರ್ಭದಲ್ಲಿ ನಗರಸಭೆ ಮುಖ್ಯಾಧಿಕಾರಿ ತಿಳಿಸಿದರು.
ನಗರಸಭಾ ಕಾರ್ಯಾಲಯದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ರೈತರು, ಹಿತ್ತಲಹಳ್ಳಿ ಗ್ರಾಮದ ಪ್ರಭಾವಿ ರೈತರೊಬ್ಬರು ಸರ್ಕಾರದ ಭೂಮಿಯಲ್ಲಿ ಅಕ್ರಮವಾಗಿ ಉಳುಮೆ ಮಾಡಿಕೊಂಡು ನಗರಸಭೆಯ ಯುಜಿಡಿಯಿಂದ ನೀರನ್ನು ಬಳಕೆ ಮಾಡಿಕೊಂಡು ಬೆಳೆಗಳನ್ನು ಬೆಳೆದುಕೊಳ್ಳುತ್ತಿದ್ದಾರೆ, ಕಳೆದ 1೦ ವರ್ಷಗಳಿಂದ ಪುರಸಭೆಗೆ ಒಂದು ರೂಪಾಯಿಯಷ್ಟು ಆದಾಯವನ್ನು ನೀಡಿಲ್ಲ, ಸುಮಾರು ೧೫೦ ಮಂದಿ ಸಣ್ಣ ರೈತರು ಈಗ ಲಕ್ಷಾಂತರ ರೂಪಾಯಿಗಳ ಹಣವನ್ನು ಸಾಲಮಾಡಿಕೊಂಡು ಕೊಳವೆಬಾವಿಗಳನ್ನು ಕೊರೆಸಲಾಗುತ್ತಿದ್ದರೂ ಕೂಡಾ ಒಂದಿಂಚು ನೀರು ಲಭ್ಯವಾಗುತ್ತಿಲ್ಲ, ಇಂತಹ ಪರಿಸ್ಥಿತಿಗಳಲ್ಲಿ ನಗರಸಭೆಯಿಂದ ತ್ಯಾಜ್ಯ ನೀರನ್ನು ಹರಾಜು ಮಾಡುವ ಪ್ರಯತ್ನ ಮಾಡಿದ್ದು, ಶ್ರೀಮಂತ ರೈತನ ಪರವಾಗಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಅವರು ಬೇರೆ ರೈತರನ್ನು ಪರಿಗಣನೆಗೆ ತೆಗೆದುಕೊಳ್ಳದೆ, ಕೇವಲ ಒಬ್ಬ ರೈತನ ಹಿತವನ್ನು ಕಾಪಾಡಲು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದ್ದರಿಂದ ಹರಾಜು ಪ್ರಕ್ರಿಯೆಯನ್ನು ಮುಂದೂಡಲಾಗಿದೆ. ಹರಾಜಿನ ಮೂಲಕ ನೀರು ಪಡೆಯುವಂತಾಗಬೇಕು ಎಂದು ರೈತರು ಒತ್ತಾಯಿಸಿದರು.
ನಡೆದ ಹರಾಜು – ೧೫ ಲಕ್ಷ ೧೦ ಸಾವಿರ ರೂಪಾಯಿಗಳಿಗೆ ತ್ಯಾಜ್ಯ ನೀರು
ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ರೈತ ಸಂಘದ ಅಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಹಾಗೂ ಪುರಸಭಾ ಸದಸ್ಯ ಲಕ್ಷ್ಮಯ್ಯ ಅವರ ನಡುವೆ ಮನವಿ ಪತ್ರದ ವಿಚಾರವಾಗಿ ಮಾತಿನ ಚಕಮಕಿ ನಡೆಯಿತು, ನಂತರ ಮಾತನಾಡಿದ ರೈತಸಂಘದ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ನಗರಸಭೆಯಿಂದ ಹರಾಜು ಪ್ರಕ್ರಿಯೆಗೆ ಸಿದ್ದತೆ ಮಾಡಿಕೊಂಡಿರುವ ಬಗ್ಗೆ ರೈತ ಎಚ್.ಕೆ.ರಮೇಶ್ ಅವರ ಮನವಿಯಂತೆ ಜಿಲ್ಲಾಧಿಕಾರಿಗಳ ಬಳಿಯಲ್ಲಿ ಚರ್ಚೆ ನಡೆಸಿ ಎರಡು ತಿಂಗಳ ಕಾಲಾವಕಾಶವನ್ನು ಕೇಳಿ ಮನವಿ ಕೊಟ್ಟಿರುವುದು ನಿಜ, ಆದರೆ ಹರಾಜು ಪ್ರಕ್ರಿಯೆಯನ್ನು ನಿಲ್ಲಿಸುವಂತೆ ಹೇಳಿಲ್ಲ ಎಂದು ಸಮಜಾಯಿಶಿ ನೀಡಿದರು. ಇಷ್ಟಕ್ಕೆ ತೃಪ್ತರಾಗದ ರೈತರು ಹರಾಜು ಪ್ರಕ್ರಿಯೆಯನ್ನು ನಡೆಸಲೇಬೇಕು ಎಂದು ಪಟ್ಟುಹಿಡಿದಾಗ ನಗರಸಭೆಯ ಮುಖ್ಯಾಧಿಕಾರಿ ಎಸ್.ಎ.ರಾಮ್ಪ್ರಕಾಶ್ ಅವರು ಜಿಲ್ಲಾಧಿಕಾರಿಗಳ ಅನುಮತಿಯನ್ನು ಪಡೆದುಕೊಂಡು ನಗರಸಭೆಯ ಸಭಾಂಗಣದಲ್ಲಿ ರೈತರ ಸಮ್ಮುಖದಲ್ಲಿ ಹರಾಜು ಪ್ರಕ್ರಿಯೆಯನ್ನು ನಡೆಸಿದರು. ಹಿತ್ತಲಹಳ್ಳಿಯ ರೈತ ಎಚ್.ಕೆ.ರಮೇಶ್ ಅವರು ೧೫ ಲಕ್ಷ ೧೦ ಸಾವಿರ ರೂಪಾಯಿಗಳಿಗೆ ಒಂದು ವರ್ಷದ ಅವಧಿಗೆ ಹರಾಜಿನಲ್ಲಿ ಕೂಗಿ ಪಡೆದರು.
ರೈತರಾದ ಚಿಕ್ಕಮುನಿಯಪ್ಪ, ಎಚ್.ಜಿ.ಗೋಪಾಲಗೌಡ, ನಂಜುಂಡಪ್ಪ, ಜಿ.ಗೋಪಾಲಪ್ಪ, ಮುರಳಿ, ಪಿ.ವೇಣು, ರಾಮಾಂಜಿನಪ್ಪ, ಲೋಕೇಶ್, ನಗರಸಭಾ ಸದಸ್ಯ ಲಕ್ಷ್ಮಯ್ಯ, ಷಫಿ ಮುಂತಾದವರು ಹಾಜರಿದ್ದರು.
ನಗರಸಭೆಯಲ್ಲಿ ನಡೆದಿದೆ ಲೆಕ್ಕಾಚಾರ
ಕೇವಲ ಒಂದು ವರ್ಷದ ಅವಧಿಗೆ ೧೫ ಲಕ್ಷ ೧೦ ಸಾವಿರ ರೂಪಾಯಿಗಳಷ್ಟು ತ್ಯಾಜ್ಯದ ನೀರು ಹರಾಜಿನಲ್ಲಿ ಬಂದಿರುವುದರಿಂದ ಕಳೆದ ಹತ್ತು ವರ್ಷದಿಂದ ಎಷ್ಟು ಹಣ ಬರಬಹುದಿತ್ತು ಎಂಬ ಲಕ್ಕಾಚಾರೆ ನಡೆದಿದೆ. ಈ ತ್ಯಾಜ್ಯದ ನೀರು ಬಳಸುವುದರಿಂದ ಬೇಸಾಯದ ಅಗತ್ಯವಿರುವುದಿಲ್ಲ. ನೀರು ಹೋದ ನಂತರ ಉಳಿಯುವ ಘನತ್ಯಾಜ್ಯವೂ ನಗರಸಭೆಗೆ ಲಕ್ಷಾಂತರ ಆದಾಯ ತರಲಿದೆ.
- Advertisement -
- Advertisement -
- Advertisement -
- Advertisement -