ದೇಶಕ್ಕಾಗಿ ಜೀವನ ತ್ಯಾಗ ಮಾಡಿದ ವೀರಯೋಧರ ಸೇವೆ ಅವಿಸ್ಮರಣೀಯ. ನಿರ್ಭಯವಾಗಿ ಜೀವನ ಮಾಡಲು ಗಡಿಭಾಗದಲ್ಲಿ ಹಗಲು ರಾತ್ರಿ ಶತ್ರುಗಳ ಗುಂಡಿಗೆ ಎದೆಯೊಡ್ಡಿ ನಮ್ಮನ್ನು ರಕ್ಷಣೆ ಮಾಡುವ ಯೋಧರ ಸೇವೆ ಅನನ್ಯವಾಗಿದೆ. ಯುವಕರು ರಾಷ್ಟ್ರಪ್ರೇಮ ಬೆಳೆಸಿಕೊಳ್ಳಬೇಕು ಎಂದು ಗಡಿ ಭದ್ರತಾ ಪಡೆಯ ನಿವೃತ್ತ ಯೋಧ ಹಾಗೂ ಕಾರ್ಗಿಲ್‌ನ ಟೈಗರ್ ಹಿಲ್ ಕದನದಲ್ಲಿ ಪಾಲ್ಗೊಂಡಿದ್ದ ಜಯರಾಮ ಕೃಷ್ಣಪ್ಪ ತಿಳಿಸಿದರು.
ತಾಲ್ಲೂಕಿನ ಜೆ.ವೆಂಕಟಾಪುರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓಂ ಸಾಯಿ ಯುವ ಸೇವಾ ಸಂಘದ ಸದಸ್ಯರು ಹಾಗೂ ಜೆ.ವೆಂಕಟಾಪುರ ರಮೇಶ್ ಸಂಯುಕ್ತಾಶ್ರಯದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಗಿಲ್ ವಿಜಯ ದಿವಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ವಿಜಯಪುರ ಹೋಬಳಿ ನಲ್ಲೂರಿನವನಾದ ನಾನು ಕಷ್ಟದಲ್ಲಿ ಬೆಳೆದವನು. ಬಿಎಸ್‌ಎಫ್ ಸೇರಿದ ನಂತರ ನನ್ನ ಬದುಕು ಬದಲಾಯಿತು. ತ್ಯಾಗ ಬಲಿದಾನಕ್ಕೆ ಇನ್ನೊಂದು ಹೆಸರು ನಮ್ಮ ಸೈನಿಕರು. ಪ್ರಾಣದ ಹಂಗು ತೊರೆದು ಮಾತೃಭೂಮಿ ಸಾರ್ವಭೌಮತ್ವಕ್ಕೆ ಹೋರಾಡಿದ ಯೋಧರಿಗೆ ಋಣಿ ಆಗಿರಬೇಕು ಎಂದು ಹೇಳಿದರು.
ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಮಾತನಾಡಿ, ಪಾಕಿಸ್ಥಾನದ ಆಕ್ರಮಣದಿಂದ ಕಾರ್ಗಿಲ್ ಪ್ರದೇಶಗಳನ್ನು ಪುನರ್ ವಶಪಡಿಸಿಕೊಂಡು ಭಾರತದ ಸೇನಾ ಪರಾಕ್ರಮವನ್ನು ಜಗಜ್ಜಾಹೀರುಗೊಳಿಸಿದ ವೀರ ಸೈನಿಕರ ಸಾಹಸದ ಪ್ರತಿಕವಾದ ‘ಅಪರೇಷನ್ ವಿಜಯ್’ ಯಶಸ್ವೀ ಕಾರ್ಯಾಚರಣೆಯ ಹದಿನೇಳನೇ ವಾರ್ಷಿಕ ಸ್ಮರಣೆಯನ್ನು ಮಾಡಲಾಗುತ್ತಿದೆ.
ಹನ್ನೆರಡು ವರ್ಷಗಳ ಹಿಂದೆ, ಭಯೋತ್ಪಾದಕರ ನೆರವು ಪಡೆದು ಭಾರತವನ್ನೇ ಕಬಳಿಸಲು ಹೊರಟಿದ್ದ ಪಾಕಿಸ್ತಾನದ ಸಂಚನ್ನು ಪುಡಿಗಟ್ಟಿದ ನಮ್ಮ ಭಾರತದ ಹೆಮ್ಮೆಯ ವೀರಪುತ್ರರು, ತ್ಯಾಗ ಬಲಿದಾನ ಮಾಡಿ, ವೀರಾವೇಶದಿಂದ ಹೋರಾಡಿ, ನಮ್ಮನ್ನೆಲ್ಲಾ ರಕ್ಷಿಸಿದ್ದಾರೆ. ಅಂಥಾ ವೀರ ಯೋಧರಿಗೆ ನಮನ ಸಲ್ಲಿಸಲು ಜೂನ್ 26ನ್ನು ಪ್ರತಿವರ್ಷ ಕಾರ್ಗಿಲ್ ದಿವಸವನ್ನಾಗಿ ಆಚರಿಸುತ್ತೇವೆ. ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್‌ನೊಳಗೆ ನುಸುಳಿದವರು ನಮ್ಮ ಸೈನಿಕರಲ್ಲ ಎನ್ನುತ್ತಲೇ ಇದ್ದ ಪಾಕಿಸ್ತಾನವು, ಸದ್ದಿಲ್ಲದೆ ಭಾರತದ ಗಡಿಯೊಳಕ್ಕೆ ಉಗ್ರಗಾಮಿಗಳ ಸೋಗಿನಲ್ಲಿ ಒಳಗೆ ನುಗ್ಗಿತ್ತು ಎಂದು ವಿವರಿಸಿದರು.
ಯಣ್ಣಂಗೂರು ಗ್ರಾಮದ ಯೋಧ ರವಿಕುಮಾರ್ ಯೋಧರ ಬದುಕಿನ ಬಗ್ಗೆ ತಿಳಿಸಿದರು. ಈ ಸಂದರ್ಭದಲ್ಲಿ ಶಾಲಾ ಆವರಣದಲ್ಲಿ ಗಿಡಗಳನ್ನು ನೆಟ್ಟು ಓಂ ಸಾಯಿ ಯುವ ಸೇವಾ ಸಂಘದ ಸದಸ್ಯರು ಹಾಗೂ ಜೆ.ವೆಂಕಟಾಪುರ ರಮೇಶ್ ಶಾಲಾ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ, ಲೇಖನ ಸಾಮಗ್ರಿ ಹಾಗೂ ಸಿಹಿಯನ್ನು ವಿತರಿಸಿದರು. ಯೋಧರಾದ ಜಯರಾಮ್ ಕೃಷ್ಣಪ್ಪ ಮತ್ತು ರವಿಕುಮಾರ್ ಅವರನ್ನು ಸನ್ಮಾನಿಸಲಾಯಿತು.
ಗ್ರಾಮ ಪಂಚಾಯ್ತಿ ಅಧ್ಯಕ್ಷ ರಘುನಾಥ್, ಸದಸ್ಯ ಎನ್.ನಾಗೇಶ್, ಎಸ್‌ಡಿಎಂಸಿ ಅಧ್ಯಕ್ಷ ಎನ್.ವೆಂಕಟೇಶ್, ಮುಖ್ಯ ಶಿಕ್ಷಕಿ ಗೀತಾ, ಶಿಕ್ಷಕರಾದ ಆರ್.ವಿಕಾಸ್, ಜಿ.ಎಸ್.ಅಶ್ವತ್, ಎ.ಆನಂದಮ್ಮ, ವಿ.ದೇವಕಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -