ನೇರಳೆ ಹಣ್ಣಿಗೆ ಭಾರಿ ಬೇಡಿಕೆ

0
824

ನಗರದಲ್ಲಿ ಜಂಬುನೇರಳೆ ಹಣ್ಣಿನ ವ್ಯಾಪಾರ ಭಾರಿ ಜೋರಾಗಿದೆ. ಒಂದೆಡೆ ಮಾವಿನ ಹಣ್ಣಿನ ಸಿಹಿ ಇದ್ದರೆ ಮತ್ತೊಂದೆಡೆ ನೇರಳೆಯ ಒಗರೂ ಜನರಿಗೆ ಸವಿಯಾಗಿದೆ. ಮಾರುಕಟ್ಟೆಯಲ್ಲಿ ಒಳ್ಳೆಯ ಬೆಲೆ ಕೂಡ ಇದೆ.
ಕಾಲು ಕೆ.ಜಿ ಜಂಬು ನೇರಳೆಗೆ 45ರಿಂದ 50ರೂ ವರೆಗೂ ಮಾರಾಟವಾಗುತ್ತಿದೆ. ಆದರೂ ಇದರ ಬೇಡಿಕೆ ಕುಸಿದಿಲ್ಲ. ಈಗ ತಾಲ್ಲೂಕಿನಲ್ಲಿ ಮಾರಾಟವಾಗುತ್ತಿರುವುದು ಆಂಧ್ರಪ್ರದೇಶದ ಮಾರುಕಟ್ಟೆಯಲ್ಲಿ ಖರೀದಿಸಿ ತಂದಿರುವುದು.
ಈ ಒಗರು, ಸಿಹಿ ಮಿಶ್ರಿತ ಹಣ್ಣನ್ನು ತಾಲ್ಲೂಕಿನಲ್ಲಿ ಯತೇಚ್ಛವಾಗಿ ಸಿಗುವುದಿಲ್ಲ. `ಸಿಜಿಗಿಯಮ್ ಕುಮಿನಿ’ ಎಂಬ ಸಸ್ಯ ವರ್ಗಕ್ಕೆ ಸೇರಿದ ನೇರಳೆ ವಾರ್ಷಿಕ ಹಣ್ಣು. ಸಾಮಾನ್ಯವಾಗಿ ಮಾರ್ಚ್, ಏಪ್ರಿಲ್ ತಿಂಗಳಿನಲ್ಲಿ ಹೂವು ಬಿಟ್ಟು, ಜೂನ್ ತಿಂಗಳಿನಲ್ಲಿ ಹಣ್ಣು ನೀಡುತ್ತದೆ.
ಮೊದಲೆಲ್ಲ ರೈತರು ಹೊಲಗಳ ಬೇಲಿ ಸಾಲಿನಲ್ಲಿ ಇವುಗಳನ್ನು ಬೆಳೆಯುತ್ತಿದ್ದರು. ರೈತರಿಗೆ ಇದು ಪರ್ಯಾಯ ಬೆಳೆಯೂ ಆಗಿತ್ತು. ವರ್ಷಕ್ಕೊಮ್ಮೆ ಮಾತ್ರ ಹಣ್ಣುಗಳನ್ನು ಕೊಡುವುದರಿಂದ ಹಿಂದೆ ಇದರ ಬೆಲೆಯೂ ಕಡಿಮೆಯಿದ್ದದರಿಂದ ಇದೀಗ ಇವುಗಳ ಸಂಖ್ಯೆ ಕಡಿಮೆಯಾಗಿರುವುದೇ ಬೆಲೆ ಹೆಚ್ಚಾಗಲು ಕಾರಣ ಎನ್ನಲಾಗುತ್ತದೆ.
ಜಂಬು ನೇರಳೆ ಹಣ್ಣನ್ನು ಇಷ್ಟಪಡದವರು ಅಪರೂಪ. ಹಣ್ಣನ್ನು ನೋಡುತ್ತಿದಂತೆ ಬಾಯಲ್ಲಿ ನೀರೂರುತ್ತದೆ. ನೇರಳೆ ಹಣ್ಣುಗಳ ತಿರುಳನ್ನು ವೈನ್, ವಿನೆಗರ್, ಜೆಲ್ಲಿ, ಜಾಮ್ ತಯಾರಿಕೆಗೆ ಬಳಸಲಾಗುತ್ತದೆ. ಇದರ ಬೀಜಗಳನ್ನು ಆಯುರ್ವೇದ, ಯುನಾನಿ ಔಷಧಿಯಾಗಿಯೂ ಬಳಸಲಾಗುತ್ತದೆ. ಬೀಜದಲ್ಲಿ ಪ್ರೊಟೀನ್, ಕಾರ್ಬೊ ಹೈಡ್ರೇಟ್, ಕ್ಯಾಲ್ಸಿಯಂ ಅಂಶಗಳಿರುತ್ತವೆ ಎನ್ನುತ್ತಾರೆ ವೈದ್ಯರು.
ವೈದ್ಯ ವಿಜ್ಞಾನ ಪ್ರಕಾರ ನೇರಳೆ ಹಣ್ಣಿನ ಪಾನೀಯ ಪಚನಕ್ರಿಯೆಗೆ ಉತ್ತಮ. ರಕ್ತದೊತ್ತಡ, ಸಕ್ಕರೆ ಕಾಯಿಲೆಗಳಿದ್ದವರು ಪ್ರತಿದಿನ ನೇರಳೆ ಹಣ್ಣುಗಳನ್ನು ತಿಂದರೆ ಕಾಯಿಲೆ ನಿಯಂತ್ರಿಸಬಹುದು. ಸಿಹಿ, ಒಗರು ರುಚಿ ಹೊಂದಿರುವ ನೇರಳೆಯನ್ನು ಉಪ್ಪಿನೊಂದಿಗೆ ತಿಂದರೆ ಬಲುರುಚಿ. ಪಟ್ಟಣದ ಇಡೀ ಮಾರುಕಟ್ಟೆಯಲ್ಲಿ ನೇರಳೆ ಹಣ್ಣಿನ ಮಾರಾಟ ಬಲು ಜೋರಾಗಿದೆ.
‘ತಾಲ್ಲೂಕಿನಲ್ಲಿ ಕೆಲವು ರೈತರು ಮಾವು ಹಾಗೂ ಹುಣಸೆಗೆ ಪರ್ಯಾಯವಾಗಿ ಜಂಬು ನೇರಳೆ ಗಿಡ ನೆಟ್ಟು ಬೆಳೆಸುತ್ತಿದ್ದಾರೆ. ಆದರೂ ಹೆಚ್ಚಾಗಿ ಆಂದ್ರದ ಚೇಳೂರಿನ ಕಡೆಯಿಂದ ಬರುತ್ತದೆ. ನಮಗೂ ಒಳ್ಳೆಯ ವ್ಯಾಪಾರವಾಗುತ್ತಿದೆ. ಮಾವಿನ ಹಣ್ಣಿನ ಮಾರಾಟವಿರುವಾಗಲೇ ನೇರಳೆ ಹಣ್ಣು ಕೂಡ ಬಂದಿದ್ದರೂ ಬೇಡಿಕೆ ಕುಸಿದಿಲ್ಲ. ಜನ ಇಷ್ಟಪಟ್ಟು ಕೊಂಡು ತಿನ್ನುತ್ತಿದ್ದಾರೆ’ ಎನ್ನುತ್ತಾರೆ ಹಣ್ಣು ಮಾರಾಟಗಾರ ಅಸ್ಲಂ.

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!