ಪ್ರಧಾನಿ ನರೇಂದ್ರ ಮೋದಿ 500ರೂ, ಹಾಗೂ 1000 ರೂ. ನೋಟ್ ರದ್ದತಿಗೊಳಿಸಿ ಒಂದು ವರ್ಷದ ಹಿನ್ನೆಲೆಯಲ್ಲಿ ಈ ನಿರ್ಧಾರದ ಬಗ್ಗೆ ವಿರೋಧ ವ್ಯಕ್ತಪಡಿಸಿ ಬುಧವಾರ ಕಾಂಗ್ರೆಸ್ ಪಕ್ಷದ ವತಿಯಿಂದ ಮುಖಂಡ ವಿ.ಮುನಿಯಪ್ಪ ನೇತೃತ್ವದಲ್ಲಿ ತಾಲ್ಲೂಕು ಕಚೇರಿಯ ಮುಂದೆ ಕೇಂದ್ರ ಸರ್ಕಾರದ ವಿರುದ್ದ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ದ ಧಿಕ್ಕಾರ ಕೂಗಿ ಪ್ರತಿಭಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ವಿ.ಮುನಿಯಪ್ಪ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೋಟ್ ಬ್ಯಾನ್ ಮಾಡಿದ್ದು, ಅವರ ವೈಫಲ್ಯತೆಯಾಗಿದೆ, ಇದರಿಂದಾಗಿ ಬಡ ಜನತೆಗೆ ತುಂಬಾ ತೊಂದರೆಗೊಳಗಾಗಿದ್ದಾರೆ. ಇದರಿಂದ ಹಣ ಉಳ್ಳವರಿಗೆ ಯಾವುದೇ ರೀತಿಯ ತೊಂದರೆಯಾಗಿಲ್ಲ, ಜೊತೆಗೆ ಯಾವುದೇ ಶ್ರೀಮಂತನೂ ಕೂಡ ಹಣ ಬದಲಾವಣೆ ಮಾಡಿಕೊಳ್ಳಲು ಬ್ಯಾಂಕುಗಳ ಮುಂದೆ ನಿಂತಿರುವುದು ಕಂಡು ಬಂದಿಲ್ಲ, ವಾರಗಟ್ಟಲೆ ಬ್ಯಾಂಕುಗಳ ಮುಂದೆ ಸರತಿ ಸಾಲಿನಲ್ಲಿ ನಿಂತು ಬಡ ಜನರು ತೊಂದರೆಗೀಡಾಗಿದ್ದಾರೆ. ವಿದೇಶದಲ್ಲಿರುವ ಕಪ್ಪು ಹಣವನ್ನು ತಂದು ಬಡ ಜನರಿಗೆ ಶೂನ್ಯ ಖಾತೆಯನ್ನು ತೆರೆದು ಅವರ ಖಾತೆಗೆ ಹಣ ಹಾಕುತ್ತೇವೆಂದು ಭರವಸೆ ನೀಡಿದ್ದರು, ಅದೂ ಇಂದು ಹುಸಿಯಾಗಿದೆ. ರಾಜ್ಯ ಸರ್ಕಾರ ರೈತರ 50 ಸಾವಿರ ರೂ. ಸಾಲ ಮನ್ನಾ ಮಾಡಿದೆ ಕೇಂದ್ರ ಸರ್ಕಾರ ಉಳಿದ ರೈತರ ಸಾಲವನ್ನು ಸಾಲ ಮನ್ನಾ ಮಾಡಲು ಮೀನ-ಮೇಷ ಎಣಿಸುತ್ತಿದೆ ಎಂದು ಆರೋಪಿಸಿದರು.
ಕೇಂದ್ರ ಸರ್ಕಾರ ಜಿ.ಎಸ್.ಟಿ ಮಾಡಿರುವುದರಿಂದ ಶೇ 90 ರಷ್ಟು ಬಡ ಜನರಿಗೆ ತೊಂದರೆಯಾಗಿದೆ. ಮೋದಿ ಎಂದರೆ ಒಂದು ದುರಂತವಿದ್ದಹಾಗೆ. ಆದರೆ ಅವರು ಭಕ್ತರು ಮಾತ್ರವೇ ಅಪನಗದೀಕರಣದಿಂದ ಒಳಿತಾಗಿದೆ ಎಂದು ಕುಣಿಯುತ್ತಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಕಾರ್ಯಕರ್ತರು ನಗರದ ಬಸ್ ನಿಲ್ದಾಣದಿಂದ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿ ಕರಾಳ ದಿನವಿದು ಎನ್ನುತ್ತಾ ಕೇಂದ್ರ ಸರ್ಕಾರದ ವಿರುದ್ದ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ದ ಧಿಕ್ಕಾರ ಕೂಗಿ ಪ್ರತಿಭಟಿಸಿದರು.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ನಿರ್ಮಲಾ ಮುನಿರಾಜು, ಯಾಸ್ಮೀನ್ ತಾಜ್, ಆರ್.ಶ್ರೀನಿವಾಸ್, ಗುಡಿಯಪ್ಪ, ಸತೀಶ್, ತನ್ವೀರ್, ಮುನಿಕೃಷ್ಣಪ್ಪ, ಎಚ್.ಎಂ.ಮುನಿಯಪ್ಪ, ಮೌಲಾ, ಸುಬ್ರಮಣಿ ಹಾಜರಿದ್ದರು.
- Advertisement -
- Advertisement -
- Advertisement -