ಪಿ.ಎಲ್.ಡಿ. ಬ್ಯಾಂಕಿನ ಅಧ್ಯಕ್ಷರಾಗಿ ಕಾಳನಾಯಕನಹಳ್ಳಿಯ ಕೆ.ಎಂ. ಭೀಮೇಶ್ ಮತ್ತು ಉಪಾಧ್ಯಕ್ಷರಾಗಿ ರವಿ ಅವಿರೋಧವಾಗಿ ಗುರುವಾರ ಆಯ್ಕೆಯಾದರು.
ಈಗಾಗಲೇ ನಷ್ಟದಲ್ಲಿರುವ ಪಿ.ಎಲ್.ಡಿ.ಬ್ಯಾಂಕಿನ ಅಧ್ಯಕ್ಷರಾಗಿದ್ದ ಚೀಮನಹಳ್ಳಿ ಗೋಪಾಲ್ ರಾಜೀನಾಮೆ ನೀಡಿದ್ದು ತೆರವಾಗಿರುವ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿಯಿತ್ತು.
ಒಟ್ಟು ೧೩ ಮಂದಿ ಆಡಳಿತ ಮಂಡಳಿ ನಿರ್ದೆಶಕರು ಇದ್ದು ಕಾಂಗ್ರೆಸ್ ಬೆಂಬಲಿತ ೮, ಜೆಡಿಎಸ್ ಬೆಂಬಲಿತ ೪ ಹಾಗೂ ನಾಮನಿರ್ದೆಶಿತ ೧ ನಿರ್ದೆಶಕರು ಇದ್ದಾರೆ. ಬಹುಮತ ಇರುವ ಕಾಂಗ್ರೆಸ್ ಹಿಡಿತದಲ್ಲಿ ಬ್ಯಾಂಕ್ ಆಡಳಿತ ಇದೆ.
ಕಾಂಗ್ರೆಸ್ ಪಕ್ಷದಲ್ಲಿನ ಆಂತರಿಕ ಒಪ್ಪಂದದಂತೆ ಹಾಲಿ ಅಧ್ಯಕ್ಷ ಸಿ.ಎಂ.ಗೋಪಾಲ್ ೩೦ ತಿಂಗಳ ನಂತರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇನ್ನುಳಿದ ೩೦ ತಿಂಗಳ ಅವಧಿಗೆ ನಡೆದ ಚುನಾವಣೆ ಅವಿರೋಧವಾಗಿ ನಡೆಯಿತು. ಎಂ.ವಿ.ವೆಂಕಟೇಶಮೂರ್ತಿ ಚುನಾವಣೆ ಅಧಿಕಾರಿ ಆಗಿ ನೇಮಕ ಆಗಿದ್ದರು.
ಆರು ದಶಕಗಳ ಇತಿಹಾಸ ಇರುವ ಇಲ್ಲಿನ ಪಿಎಲ್ಡಿ ಬ್ಯಾಂಕ್ ಲಾಭದಲ್ಲಿಯೆ ಕಾರ್ಯನಿರ್ವಹಿಸುತ್ತಿತ್ತಾದರೂ ಇತ್ತೀಚಿನ ವರ್ಷಗಳಲ್ಲಿ ನಷ್ಟದಲ್ಲಿಯೆ ನಡೆಯುತ್ತಿದೆ. ಕೃಷಿಕರಿಗೆ ಕೊಟ್ಟ ಸಾಲದ ಮರುಪಾವತಿ ಸರಿಯಾಗಿ ಆಗದ ಕಾರಣ ಬ್ಯಾಂಕ್ ಹೊಸದಾಗಿ ಸಾಲ ನೀಡುವ ಶಕ್ತಿಯನ್ನೂ ಕಳೆದುಕೊಂಡಿದೆ.
ಕಳೆದ ಸರ್ವ ಸದಸ್ಯರ ಸಭೆಗೆ ಎಲ್ಲ ಷೇರುದಾರರಿಗೂ ಸಭೆಯ ನೊಟೀಸ್ ನೀಡಲು ಸಹ ಹಣಕಾಸಿನ ಮುಗ್ಗಟ್ಟಿನಿಂದ ಎಲ್ಲರಿಗೂ ನೊಟೀಸ್ ನೀಡಲಾಗದೆ ಸರ್ವ ಸದಸ್ಯರ ಸಭೆಯಲ್ಲಿ ಸದಸ್ಯರ ಕೊರತೆಯಿಂದ ಕೋರಂ ಕೊರತೆಯೂ ಎದುರಾಗಿತ್ತು.
ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯ ನಂತರ ಬೆಂಬಲಿಗರು ಪಟಾಕಿ ಸಿಡಿಸಿ ಗೆದ್ದವರಿಗೆ ಹಾರಗಳನ್ನು ಹಾಕಿ ಸಂಭ್ರಮಿಸಿದರು.
ಪಿ.ಎಲ್.ಡಿ ಬ್ಯಾಂಕ್ ನಿರ್ದೇಶಕರಾದ ಗೋಪಾಲ್, ಅಶ್ವತ್ಥಪ್ಪ, ಅಶ್ವತ್ಥನಾರಾಯಣರೆಡ್ಡಿ, ಬಂಕ್ ಮುನಿಯಪ್ಪ ಹಾಜರಿದ್ದರು.
- Advertisement -
- Advertisement -
- Advertisement -