ವಸಂತ ಮಾಸದ ಆಗಮನಕ್ಕೆ ಸ್ವಾಗತ ಕೋರುವ ರೀತಿಯಲ್ಲಿ ನಗರದ ಚಿಕ್ಕಬಳ್ಳಾಪುರ ರಸ್ತೆಯಲ್ಲಿರುವ ರೇಷ್ಮೆ ವಿಸ್ತರಣಾಧಿಕಾರಿಗಳ ಕಚೇರಿಯ ಪಕ್ಕದಲ್ಲಿ ಹಳದಿ ಬಣ್ಣದ ಹೂಗಳನ್ನು ಅರಳಿಸಿಕೊಂಡು ಎರಡು ಬಂಗಾರದ ಗಂಟೆಯ ಮರಗಳು ಸಿದ್ಧತೆ ನಡೆಸಿದೆ.
ನೀಲಿ ಆಕಾಶದ ಹಿಂತೆರೆಯಲ್ಲಿ ಕಾಂತಿಯುತವಾದ ಅರಿಶಿನ ಬಣ್ಣದ ಹೂಗಳು ನೋಡುಗರನ್ನು ಸೆಳೆಯುತ್ತಿದೆ. ಒಂದೇ ಒಂದು ಹಸಿರೆಲೆಯಿಲ್ಲದೆ ಪ್ರತಿಯೊಂದು ಟೊಂಗೆಯೂ ಹಳದಿ ಬಣ್ಣದ ಗಂಟೆಯಾಕಾರದ ಹೂಗಳನ್ನು ಮುಡಿದು ಸಿಂಗಾರಗೊಂಡಿದೆ. ಆಗಾಗ ಬೀಸುವ ತಂಗಾಳಿಗೆ ಉದುರುವ ಹೂಗಳು ನೆಲವನ್ನೇ ಹೊಂಬಣ್ಣದ ಹಾಸಿಗೆಯನ್ನಾಗಿ ಮಾಡಿರುವುದು ಸೊಗಸಾಗಿದೆ.
ಬೆಗ್ನೋಸಿಯೇಸಿ ಕುಟುಂಬಕ್ಕೆ ಸೇರಿರುವ ಈ ಮರವನ್ನು ಟೆಕೋಮಾ ಅರ್ಜೆಂಟಿಯಾ ಅಥವಾ ಟಿಬೆಬುಯಾ ಅರ್ಜೆಂಟಿಯಾ ಎಂದು ಕರೆಯುತ್ತಾರೆ. ಅಮೆರಿಕಾದ ಅರೆ ಉಷ್ಣವಲಯದ ಪರಾಗ್ವೆ ಇದರ ತವರು. ಸುಮಾರು ಎಂಟು ಮೀಟರ್ ಎತ್ತರದವರೆಗೆ ಬೆಳೆಯುವ ಇದರ ಕಾಂಡಗಳು ವಕ್ರ ಹಾಗೂ ಬಲು ಮೆದು. ಐದರಿಂದ ಎಂಟು ಸೆಂಟಿಮೀಟರಿನಷ್ಟಿರುವ ಇದರ ಹೂಗಳು ಐದರಿಂದ ಏಳು ಉಪಪತ್ರಗಳಿಂದ ಕೂಡಿರುತ್ತವೆ. ಇವುಗಳ ಸಂಯುಕ್ತ ಪತ್ರಗಳು ಬಿಸಿಲ್ಲಲಿ ಬೆಳ್ಳಿಯಂತೆ ಹೊಳೆಯುತ್ತವೆ. ಬೀಜಗಳಿಗೆ ರೆಕ್ಕೆಯಿರುವುದರಿಂದ ಗಾಳಿಯ ಮೂಲಕ ಪ್ರಸಾರಗೊಳ್ಳುತ್ತವೆ.
ಸಾಮಾನ್ಯವಾಗಿ ಶಿಶಿರದಲ್ಲಿ ಪ್ರತಿ ವರ್ಷ ಹೂಬಿಡುವ ಇವು ಹೊನ್ನಿನ ತೇರಿನ ಉತ್ಸವದ ಮೆರುಗನ್ನು ನೀಡುತ್ತವೆ. ಕೇವಲ ಒಂದು ತಿಂಗಳು ಮಾತ್ರ ಈ ರೀತಿ ಹೋಗಳನ್ನು ಅರಳಿಸಿ ನೋಡುಗರ ಕಣ್ಮನ ತಣಿಸುವ ಇವು ಹೂಗಳೆಲ್ಲ ಉದುರಿದ ಮೇಲೆ ಮತ್ತೆ ಹೊಸ ಹಸಿರಿನ ಉಡುಗೆಯನ್ನು ತೊಟ್ಟು ಮುಂದಿನ ಶಿಶಿರಕ್ಕೆ ಸಿದ್ಧತೆ ನಡೆಸುತ್ತವೆ.
‘ವರ್ಷ ಪೂರ್ತಿ ಮಬ್ಬಾದ ಹಸಿರೆಲೆ, ವಕ್ರವಾದ ಕೊಂಬೆಗಳಿಂದ ಅನಾಕರ್ಷಕವಾಗಿದ್ದರೂ ಫೆಬ್ರುವರಿ ಮಾರ್ಚ್ ತಿಂಗಳಿನಲ್ಲಿ ಮರದ ತುಂಬಾ ಹಳದಿ ಹೂವನ್ನು ಅರಳಿಸಿಕೊಂಡು ನಮ್ಮ ಕಚೇರಿಗೆ ಕಿರೀಟಪ್ರಾಯದಂತೆ ಕಂಗೊಳಿಸುತ್ತದೆ. ಈ ಹೂವಿನ ಮಕರಂದ ಹೀರಲು ಸೂರಕ್ಕಿಗಳು, ಜೇನ್ನೊಣಗಳು, ಚಿಟ್ಟೆಗಳು ಬರುತ್ತವೆ. ಈ ಮರದ ನೆರಳಿನಲ್ಲಿ ಕುಳಿತು ಇವನ್ನೆಲ್ಲಾ ನೋಡುವಾಗ ಮನಸ್ಸಿಗೆ ಆನಂದವುಂಟಾಗುತ್ತದೆ’ ಎನ್ನುತ್ತಾರೆ ರೇಷ್ಮೆ ಸಹಾಯಕ ವಿಸ್ತರಣಾಧಿಕಾರಿ ನಾರಾಯಣಸ್ವಾಮಿ.
- Advertisement -
- Advertisement -
- Advertisement -