ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಗೇಟ್ ಬಳಿಯ ಬಯಲಾಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಭಾನುವಾರ ಭೀಮನ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜೆ ಹಾಗೂ ಭಜನೆಯನ್ನು ಆಯೋಜಿಸಲಾಗಿತ್ತು.
ಆಷಾಢ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆಯ ದಿನ ಆಚರಿಸುವ ಈ ಹಬ್ಬಕ್ಕೆ ಕುಟುಂಬ ಸಮೇತರಾಗಿ ತಾಲ್ಲೂಕಿನ ವಿವಿಧ ಭಾಗಗಳಿಂದ ಜನರು ಆಗಮಿಸಿ ಪೂಜೆಯಲ್ಲಿ ಪಾಲ್ಗೊಂಡರು.
ಪ್ರತಿ ಅಮಾವಾಸ್ಯೆಯಂದು ಬಯಲಾಂಜನೇಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ, ಭಜನೆ ಹಾಗೂ ತೀರ್ಥ ಪ್ರಸಾದ ವಿನಿಯೋಗಿಸಲಾಗುತ್ತದೆ. ಇದು 165ನೇ ಅಮಾವಾಸ್ಯೆ ವಿಶೇಷ ಪೂಜೆಯಾಗಿದ್ದು, ಭೀಮನ ಅಮಾವಾಸ್ಯೆಯ ಕಾರಣ ಹೆಚ್ಚು ಭಕ್ತರು ಅದರಲ್ಲೂ ಕುಟುಂಬ ಸಮೇತರಾಗಿ ಆಗಮಿಸಿದ್ದರು.
ಬೆಳಿಗ್ಗೆ ಪೂಜಾ ಸಮಯದಲ್ಲಿ ತಾಲ್ಲೂಕು ಸವಿತಾ ಕಲಾ ಸಂಘದಿಂದ ಮಂಗಳವಾದ್ಯಗೋಷ್ಠಿ ನಡೆಯಿತು. ಅಪ್ಪೇಗೌಡನಹಳ್ಳಿ ಶ್ರೀರಾಮ ಭಕ್ತ ಮಂಡಳಿ, ಮೇಲೂರು ಶ್ರೀರಾಮ ಭಕ್ತ ಮಂಡಳಿ, ಕೊಂಡೇನಹಳ್ಳಿ ಆಂಜನೇಯಸ್ವಾಮಿ ಭಜನಾ ಮಂಡಳಿ, ಕಡಿಶೀಗೇನಹಳ್ಳಿ ಮುತ್ತರಾಯಸ್ವಾಮಿ ಭಜನಾ ಮಂಡಳಿ, ಮಳ್ಳೂರು ಶ್ರೀರಾಮ ಭಕ್ತ ಮಂಡಳಿ ಮತ್ತು ಸಾಯಿನಾಥ ಭಜನೆ ಮಂಡಳಿಗಳಿಂದ ಸಂಗೀತ ಮತ್ತು ಭಜನೆ ದಿನ ಪೂರ್ತಿ ನಡೆಯಿತು.
ತಾಲ್ಲೂಕಿನ ಹಂಡಿಗನಾಳ, ಕೇಶವಪುರ, ನೆಲಮಾಕಲಹಳ್ಳಿ, ಆನೂರು, ಅಪ್ಪೇಗೌಡನಹಳ್ಳಿ, ಕೇಶವಾರ, ಚೌಡಸಂದ್ರ, ಮೇಲೂರು, ಮಳ್ಳೂರು, ಭಕ್ತರಹಳ್ಳಿ, ಮಳಮಾಚನಹಳ್ಳಿ, ಕಂಬದಹಳ್ಳಿ, ಕೊಂಡೇನಹಳ್ಳಿ, ಕಡಿಶೀಗೇನಹಳ್ಳಿ, ಮುತ್ತೂರು, ಗಂಗನಹಳ್ಳಿ ಮುಂತಾದ ಗ್ರಾಮಗಳಿಂದ ಭಕ್ತರು ಆಗಮಿಸಿ ಪೂಜೆಯಲ್ಲಿ ಪಾಲ್ಗೊಂಡರು.
ತೀರ್ಥ ಪ್ರಸಾದ ಹಾಗೂ ಅನ್ನಸಂತರ್ಪಣೆಯನ್ನು ಸಹ ದೇವಾಲಯದ ಆವರಣದಲ್ಲಿ ನಡೆಸಲಾಯಿತು. ಮಕ್ಕಳ ಆಟಿಕೆಗಳಾದ ತುತ್ತೂರಿ, ಬೆಲೂನು ಮಾರಾಟಗಾರರು ಆಗಮಿಸಿದ್ದು, ಅವು ಮಕ್ಕಳ ಆಕರ್ಷಣೆಯಾಗಿ ಪರಿಣಮಿಸಿತ್ತು.
- Advertisement -
- Advertisement -
- Advertisement -