ಬಾಹ್ಯಾಕಾಶ ವಿಜ್ಞಾನಿ ಡಾ ಯು. ಆರ್. ರಾವ್ ಅವರ ಕೊಡುಗೆ ಅಪಾರ
ಕನ್ನಡನಾಡು ಬಾಹ್ಯಾಕಾಶ ಜಗತ್ತಿಗೆ ನೀಡಿದ ಅತ್ಯುತ್ತಮ ಕೊಡುಗೆಗಳಲ್ಲಿ ಯು.ಆರ್.ರಾವ್ ಸಹ ಒಬ್ಬರು ಎಂದು ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ತಿಳಿಸಿದರು.
ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಕನ್ನಡ ಸಾರಸ್ವತ ಪರಿಚಾರಿಕೆ ವತಿಯಿಂದ ಲೋಕಮಾನ್ಯ ಬಾಲಗಂಗಾಧರ ತಿಲಕ್ ಮತ್ತು ಚಂದ್ರಶೇಖರ್ ಆಜಾದ್ ಜನ್ಮದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸೋಮವಾರ ಬೆಳಗ್ಗಿನ ಜಾವ 2.55 ರ ಸುಮಾರಿಗೆ ಬೆಂಗಳೂರಿನ ಇಂದಿರಾ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಬಾಹ್ಯಾಕಾಶ ವಿಜ್ಞಾನಿ, ಇಸ್ರೋ ಮಾಜಿ ಅಧ್ಯಕ್ಷ ಯುಆರ್ ರಾವ್ ವಿಧಿವಶರಾದರು. ಇಸ್ರೋದಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿ, 1985 ರಲ್ಲಿ ಇಸ್ರೋ ಅಧ್ಯಕ್ಷರಾಗಿ ಆಯ್ಕೆಯಾದರು. ಪಿಎಸ್ ಎಲ್ ವಿ, ಎಎಸ್ ಎಲ್ ವಿ, ಜಿಎಸ್ ಎಲ್ ವಿಗಳ ಯಶಸ್ವೀ ಉಡ್ಡಯನದ ಹಿಂದೆ ರಾವ್ ಅವರ ಅವಿರತ ಶ್ರಮವಿದೆ. ಭಾಸ್ಕರ, ರೋಹಿಣಿ, ಇನ್ಸಾಟ್-1, ಇನ್ಸಾಟ್-2, ಐಆರ್ ಎಸ್-1 ಮುಂತಾದ 18 ಉಪಗ್ರಹಗಳ ನಿರ್ಮಾಣದಲ್ಲಿ ರಾವ್ ಮುಖ್ಯ ಮಾರ್ಗದರ್ಶಕರಾಗಿದ್ದರು. ಇತ್ತೀಚೆಗಷ್ಟೆ ಭಾರತದ ಉನ್ನತ ನಾಗರಿಕ ಪ್ರಶಸ್ತಿ ಪದ್ಮವಿಭೂಷಣ ನೀಡಿ ಅವರನ್ನು ಗೌರವಿಸಲಾಗಿತ್ತು ಎಂದು ವಿವರಿಸಿದರು.
ಶಿಕ್ಷಕ ಚಾಂದ್‌ಪಾಷ ಮಾತನಾಡಿ, ಲೋಕಮಾನ್ಯ ಬಾಲಗಂಗಾಧರ ತಿಲಕ್ ಮತ್ತು ಚಂದ್ರಶೇಖರ್ ಆಜಾದ್ ಅವರ ಜೀವನ, ಸಾಧನೆ, ಆದರ್ಶ, ತ್ಯಾಗ ಬಲಿದಾನಗಳ ಬಗ್ಗೆ ಮಕ್ಕಳಿಗೆ ವಿವರಿಸಿದರು.
ಈ ಸಂದರ್ಭದಲ್ಲಿ ಪ್ರೊ.ಯು.ಆರ್. ರಾವ್ ಅವರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆಯನ್ನು ಮಾಡಲಾಯಿತು.
ಕನ್ನಡ ಸಾರಸ್ವತ ಪರಿಚಾರಿಕೆ ಕಾರ್ಯದರ್ಶಿ ಎ.ಎಂ.ತ್ಯಾಗರಾಜ್, ಮುಖ್ಯಶಿಕ್ಷಕಿ ವೆಂಕಟರತ್ನಮ್ಮ, ಶಿಕ್ಷಕರಾದ ಅಶೋಕ್, ಭಾರತಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -