ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವುದರೊಂದಿಗೆ ಓದಲು ಒಳ್ಳೆಯ ವಾತಾವರಣವನ್ನು ಮನೆಯಲ್ಲಿ ಸೃಷ್ಠಿಸಿಕೊಡಬೇಕು ಎಂದು ಆದಿಚುಂಚನಗಿರಿ ಚಿಕ್ಕಬಳ್ಳಾಪುರ ಶಾಖಾ ಮಠದ ಮಂಗಳಾನಾಥನಂದ ಸ್ವಾಮೀಜಿ ತಿಳಿಸಿದರು.
ನಗರದ ಹೊರವಲಯದ ಹನುಮಂತಪುರ ಗೇಟ್ ಬಳಿಯಿರುವ ಬಿಜಿಎಸ್ ಪಬ್ಲಿಕ್ ಶಾಲೆಯಲ್ಲಿ ಶನಿವಾರ ನಡೆದ ಯುಕೆಜಿ ಮಕ್ಕಳ ಗ್ರಾಜುಯೇಷನ್ ಡೇ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿ ಅವರು ಮಾತನಾಡಿದರು.
ಶಾಲೆಯಲ್ಲಿ ಮಕ್ಕಳು ಕಲಿಯುವುದಕ್ಕಿಂತ ಹೆಚ್ಚು ಮನೆ ಹಾಗೂ ಸಮಾಜದಿಂದ ಕಲಿಯುತ್ತವೆ. ಹಾಗಾಗಿ ಉತ್ತಮ ನಡತೆ, ಆಚಾರ, ವಿಚಾರ ಮುಂತಾದ ಸಂಗತಿಗಳು ಸಿಗುವ ಹಾಗೆ ನೋಡಿಕೊಳ್ಳಬೇಕು. ಬಾಲ್ಯದಲ್ಲಿ ಕಲಿತದ್ದು ಕಟ್ಟಡಕ್ಕೆ ಅಡಿಪಾಯದಂತೆ ಜೀವನದಲ್ಲಿ ಭವಿಷ್ಯಕ್ಕೆ ನೆರವಾಗುತ್ತದೆ. ಮನೆಯಲ್ಲಿ ದೂರದರ್ಶನ ಮಕ್ಕಳಿಗೆ ಜ್ಞಾನಾರ್ಜನೆಗೆ ಪೂರಕವಾಗಿರಲಿ. ಅವರು ದಾರಿತಪ್ಪುವಷ್ಟು ಅದನ್ನು ನೋಡದಿರಲಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪುಟ್ಟ ಮಕ್ಕಳು ತಮ್ಮ ಮುದ್ದು ಮಾತಿನಲ್ಲಿ ನಿರೂಪಣೆ, ವಿವರಣೆ, ಪರಿಚಯ ಮತ್ತು ವಂದನೆ ನುಡಿಗಳನ್ನು ಹೇಳಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಶಾಲಾ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಯುಕೆಜಿ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರವನ್ನು ಸ್ವಾಮೀಜಿ ವಿತರಿಸಿದರು.
ಬಿಜಿಎಸ್ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ಮಹದೇವ್, ಕೆಂಪರೆಡ್ಡಿ, ದೇವರಾಜ್ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -