ಮಡಿವಾಳ ಜನಾಂಗದವರು ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಮತ್ತು ಆರ್ಥಿಕವಾಗಿ ಹಿಂದುಳಿದಿದ್ದು, ಜನಾಂಗವನ್ನು ಪರಿಶಿಷ್ಠ ಜಾತಿಗೆ ಸೇರ್ಪಡೆಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ಮಡಿವಾಳರ ಸಂಘದ ರಾಜ್ಯಾಧ್ಯಕ್ಷ ಸಿ.ನಂಜಪ್ಪ ಸರ್ಕಾರವನ್ನು ಒತ್ತಾಯಿಸಿದರು.
ನಗರದ ವಾಸವಿ ಕಲ್ಯಾಣಮಂಟಪದಲ್ಲಿ ಶುಕ್ರವಾರ ಮಡಿವಾಳ ಮಾಚಿದೇವ ಯುವಕರ ಸಂಘದ ವತಿಯಿಂದ ಆಯೋಜನೆ ಮಾಡಲಾಗಿದ್ದ ತಾಲ್ಲೂಕು ಮಟ್ಟದ ಪ್ರತಿಭಾ ಪುರಸ್ಕಾರ- ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಡಿವಾಳ ಜನಾಂಗದವರು ಇಂದಿಗೂ ಕೂಡಾ ತಮ್ಮ ಕುಲಕಸುಬನ್ನೆ ನಂಬಿಕೊಂಡು ಜೀವನ ಮಾಡುತ್ತಿದ್ದಾರೆ, ಶೈಕ್ಷಣಿಕವಾಗಿ ಮುಂದುವರೆಯಲು ಅಗತ್ಯವಾಗಿರುವ ಸೌಲಭ್ಯಗಳು ಸರ್ಕಾರದಿಂದ ಸಿಗುತ್ತಿಲ್ಲ, ಜನಾಂಗಕ್ಕೆ ಸರ್ಕಾರದಿಂದ ಯಾವುದೇ ಸೌಲಭ್ಯಗಳು ಲಭ್ಯವಾಗದೆ ಇರುವುದರಿಂದ ಸಾಮಾಜಿಕವಾಗಿಯೂ ಕೂಡಾ ಹಿಂದುಳಿಯುವಂತಾಗಿದೆ. ಸಮುದಾಯದ ಪ್ರತಿಯೊಂದು ಕುಟುಂಬಗಳಲ್ಲಿಯೂ ಕೂಡಾ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು, ಸಮಾಜದಲ್ಲಿ ಉತ್ತಮವಾದ ಸ್ಥಾನಮಾನವನ್ನು ಕಾಯ್ದುಕೊಳ್ಳಬೇಕಾದರೆ, ವಿದ್ಯೆಯಿಂದ ಮಾತ್ರ ಸಾಧ್ಯವಾಗುತ್ತದೆ, ಈ ನಿಟ್ಟಿನಲ್ಲಿ ಸಮುದಾಯದ ಮುಖಂಡರು ಸಮಾಜದ ಉದ್ದಾರಕ್ಕಾಗಿ ಸಂಘಟಿತರಾಗಬೇಕು ಎಂದರು.
ಶಾಸಕ ಎಂ.ರಾಜಣ್ಣ ಮಾತನಾಡಿ, ಯಾವುದೇ ಸಮುದಾಯವಿರಲಿ ಶಿಕ್ಷಣದಿಂದ ವಂಚಿತವಾದರೆ ಅಂತಹ ಸಮುದಾಯವು ಸಮಾಜದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಿಲ್ಲ, ಕೇವಲ ವರ್ಷಕ್ಕೊಮ್ಮೆ ಮಾತ್ರ ಸಂಘಟಿತರಾದರೆ ಸಾಲದು, ನಿರಂತರವಾಗಿ ಸಂಘಟನೆಯಲ್ಲಿ ತೊಡಗಿಸಿಕೊಂಡು ಸಮುದಾಯದ ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣವನ್ನು ನೀಡಿ ಅವರನ್ನು ಮುಖ್ಯವಾಹಿನಿಗೆ ತರುವಂತಹ ಕೆಲಸವನ್ನು ಪ್ರತಿಯೊಬ್ಬರೂ ಮಾಡಬೇಕು, ಸಮುದಾಯದವರು ಸರ್ಕಾರದಿಂದ ಸಿಗುವಂತಹ ಎಲ್ಲಾ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು, ಸಮುದಾಯದ ಅಭಿವೃದ್ಧಿಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಹೇಳಿದರು.
ಕಾರ್ಯಕ್ರಮಕ್ಕೂ ಮುಂಚೆ ನಗರದ ಪ್ರವಾಸಿಮಂದಿರದ ಆವರಣದಿಂದ ಮಾಚಿದೇವ ಪಲ್ಲಕ್ಕಿಯೊಂದಿಗೆ ಮೆರವಣಿಗೆ ನಡೆಸಲಾಯಿತು, ಮೆರವಣಿಗೆಯಲ್ಲಿ ಡೊಳ್ಳುಕುಣಿತ ಮತ್ತು ವೀರಗಾಸೆ ಕುಣಿತ ಗಮನಸೆಳೆದವು, ಕಾರ್ಯಕ್ರಮವನ್ನು ಮಡಿವಾಳ ಜನಾಂಗದವರು ಪ್ರತಿಯೊಂದು ಶುಭ ಕಾರ್ಯದಲ್ಲೂ ಪಂಜನ್ನು ಹಿಡಿದು ಮುನ್ನಡೆಸುವುದರ ಧ್ಯೋತಕವಾಗಿ ಪಂಜಿಗೆ ಬೆಂಕಿಹೊತ್ತಿಸುವ ಮೂಲಕ ಉದ್ಘಾಟನೆ ಮಾಡಲಾಯಿತು,
ಮಡಿವಾಳ ಜನಾಂಗವನ್ನು ಪರಿಶಿಷ್ಠ ಜಾತಿಗೆ ಸೇರಿಸಬೇಕು ಹಾಗೂ ಮಾಚಿದೇವರ ಜಯಂತ್ಯುತ್ಸವವನ್ನು ಸರ್ಕಾರದ ಮಟ್ಟದಲ್ಲಿ ಆಚರಣೆ ಮಾಡಬೇಕು. ಆದರೆ ನಮಗೆ ಸರ್ಕಾರಿ ರಜೆ ಬೇಕಿಲ್ಲ ಈ ಬಗ್ಗೆ ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ಮನವಿಪತ್ರವನ್ನು ಶಾಸಕ ಎಂ.ರಾಜಣ್ಣ ಅವರಿಗೆ ಜನಾಂಗದ ಮುಖಂಡರು ಸಲ್ಲಿಸಿದರು.
ಕಾರ್ಯಕ್ರಮದ ಅಂಗವಾಗಿ ರೆಡ್ಕ್ರಾಸ್ ಸಂಸ್ಥೆಯ ಸಹಯೋಗದೊಂದಿಗೆ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಆಯೋಜನೆ ಮಾಡಲಾಗಿತ್ತು, ರಕ್ತದಾನ ಶಿಬಿರಕ್ಕೆ ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಮುನಿಯಪ್ಪ ಚಾಲನೆ ನೀಡಿದರು.
2014–15ನೇ ಸಾಲಿನಲ್ಲಿ ಉನ್ನತ ಶಿಕ್ಷಣ, ಎಸ್ಎಸ್ಎಲ್ಸಿ, ಪಿಯುಸಿ ಯಲ್ಲಿ ಹೆಚ್ಚು ಅಂಕ ಗಳಿಸಿರುವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಮಾಡಲಾಯಿತು. ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಸದಸ್ಯ ಜಿ.ಡಿ.ಗೋಪಾಲ್, ರಾಜ್ಯ ಸಹಕಾರ ಮಹಾಮಂಡಳಿ ಉಪಾಧ್ಯಕ್ಷ ಎಚ್.ವಿ.ನಾಗರಾಜ್, ಕಾರ್ಮಿಕರ ಕನಿಷ್ಠ ವೇತನ ಆಯೋಗದ ಅಧ್ಯಕ್ಷೆ ವಿ.ಯೋಗೇಶ್ವರಿ ವಿಜಯ್, ಬಿ.ಬಿ.ಎಂ.ಪಿ ಸದಸ್ಯೆ ಸವಿತಾ.ವಿ.ಕೃಷ್ಣ, ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಎಂ.ದೇವರಾಜ್, ಸಾಹಿತಿ ದೇವರಮಳ್ಳೂರು ವಿ.ಚನ್ನಕೃಷ್ಣ, ನಾ.ಡಿಸೋಜ ಮಕ್ಕಳ ಸಾಹಿತ್ಯ ಪ್ರಶಸ್ತಿ ವಿಜೇತ ಶಿಕ್ಷಕ ಎಸ್.ಕಲಾಧರ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಚಿತ್ರದುರ್ಗ ಶ್ರೀ ಮಾಚಿದೇವ ಮಹಾಸಂಸ್ಥಾನ ಮಠದ ಬಸವ ಮಾಚಿದೇವ ಸ್ವಾಮಿ ಆಶೀರ್ವಚನ ನೀಡಿದರು. ರಾಜ್ಯ ಮಡಿವಾಳ ಸಂಘದ ಅಧ್ಯಕ್ಷ ಸಿ.ನಂಜಪ್ಪ ‘ಮಡಿವಾಳ ಬಂಧು’ ಪತ್ರಿಕೆಯನ್ನು ಬಿಡುಗಡೆ ಮಾಡಿದರು. ಮಡಿವಾಳ ಸಂಘದ ರಾಜ್ಯ ಉಪಾಧ್ಯಕ್ಷ ಆರ್.ವಿ.ರಾಜಣ್ಣ, ಜೆಡಿಎಸ್ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ಕೆ.ವಿ.ಅಮರ್ನಾಥ್, ಮಡಿವಾಳ ಸಂಘದ ರಾಜ್ಯ ಪ್ರಧಾನಕಾರ್ಯದರ್ಶಿ ಬಿ.ರಂಗಸ್ವಾಮಯ್ಯ, ಖಜಾಂಚಿ ಜಿ.ಸುಬ್ರಮಣ್ಯಂ ಗಿರಿಧರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮುನಿಕೃಷ್ಣಪ್ಪ, ಜಿಲ್ಲಾ ಪಂಚಾಯತಿ ಸದಸ್ಯ ಎಸ್.ಎಂ.ನಾರಾಯಣಸ್ವಾಮಿ, ಹಾಪ್ಕಾಮ್ಸ್ ಮಾಜಿ ಅಧ್ಯಕ್ಷ ಬಿ.ವಿ.ಮುನೇಗೌಡ, ಎಚ್.ಸಿ.ರುದ್ರಪ್ಪ, ಎನ್.ಕೆ.ಗುರುರಾಜರಾವ್, ಶೇಖರ್ ಬಾಬು, ರಾಜು ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -