ಹೌಸಿಂಗ್ ಫಾರ್ ಆಲ್ ಯೋಜನೆಯಡಿಯಲ್ಲಿ ನಿವೇಶನ ಹಾಗೂ ಮನೆ ರಹಿತರಿಗೆ ವಸತಿ ಸೌಲಭ್ಯ ಕಲ್ಪಿಸಿಕೊಡಲು ನಗರಸಭೆಯ ಎಲ್ಲಾ ಸದಸ್ಯರ ಸಹಕಾರ ಅಗತ್ಯವಿದೆ ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ನಗರದ ನಗರಸಭಾ ಕಾರ್ಯಾಲಯದಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.
ಪ್ರಧಾನಮಂತ್ರಿಗಳ ಹೌಸಿಂಗ್ ಪಾರ್ ಆಲ್ ಯೋಜನೆಯಡಿಯಲ್ಲಿ ಸುಮಾರು ೩.೮೦ ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಜಿ+೧ ಕ್ಯಾಟಗರಿಯಲ್ಲಿ ೧೫೦೦ ಮನೆಗಳನ್ನು ನಿರ್ಮಾಣ ಮಾಡಿಕೊಡಲು ಅವಕಾಶವಿದ್ದು, ಸಾಮಾನ್ಯ ವರ್ಗದ ಫಲಾನುಭವಿಗಳು ೮೦ ಸಾವಿರ ಠೇವಣಿ ಹಾಗೂ ಪರಿಶಿಷ್ಟ ಜಾತಿ, ಪಂಗಡದ ಫಲಾನುಭವಿಗಳು ೨೫ ಸಾವಿರ ರೂಪಾಯಿಗಳ ಠೇವಣಿಯನ್ನು ಇಡಬೇಕಾಗುತ್ತದೆ. ಈ ಬಗ್ಗೆ ನಾಗರಿಕರಲ್ಲಿ ಗೊಂದಲ ಮೂಡಿಸಲಾಗುತ್ತಿದ್ದು, ಸಾರ್ವಜನಿಕರು ಮನೆ ಸಿಗುತ್ತದೆ ಎಂಬ ಕಾರಣಕ್ಕಾಗಿ ಮಧ್ಯವರ್ತಿಗಳ ವಂಚನೆಯ ಮಾತುಗಳಿಗೆ ಒಳಗಾಗಬಾರದು. ನಗರದಲ್ಲಿ ವಾಸವಾಗಿರುವ ನಿವೇಶನ ರಹಿತರಿಗೆ ಮಾತ್ರ ಈ ಸೌಲಭ್ಯವನ್ನು ಕೊಡಲಾಗುತ್ತದೆ. ನೆರೆಯ ಹಳ್ಳಿಗಳಿಂದ ಬಂದವರು ಹಾಗೂ ವಸತಿ ಸೌಲಭ್ಯ ಹೊಂದಿರುವವರಿಗೆ ಇಲ್ಲ. ಈ ಬಗ್ಗೆ ಈಗಾಗಲೇ ಎನ್.ಜಿ.ಓ. ಸಂಸ್ಥೆಗಳಿಂದ ಸರ್ವೆ ನಡೆಸಲಾಗಿದ್ದು, ಸ್ಥಳೀಯ ವಾರ್ಡುಗಳ ಸದಸ್ಯರುಗಳ ಸಮ್ಮುಖದಲ್ಲಿ ಪುನಃ ಸರ್ವೆ ನಡೆಸಿ ಅರ್ಹಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದರು.
ಸರ್ಕಾರ ನೀಡಿರುವ ನಿರ್ದೇಶನಗಳಂತೆ ಎಲ್ಲಾ ಯೋಜನೆಗಳಿಗೆ ಕ್ರಿಯಾ ಯೋಜನೆಗಳನ್ನು ತಯಾರಿಸಿ ಅನುಮೋದನೆಗೆ ಕಳುಹಿಸಬೇಕು. ಸದಸ್ಯರುಗಳು ಸ್ವತಃ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಬೇಡವೆಂದು ಸಲಹೆ ನೀಡಿದರು.
ನೆರೆಯ ಹಂಡಿಗನಾಳ ಗ್ರಾಮ ಪಂಚಾಯತಿಯಿಂದ ನಗರಸಭೆಗೆ ಹಸ್ತಾಂತರಿಸಿರುವ ಹೌಸ್ ಲಿಸ್ಟ್ನಲ್ಲಿ ೪೦೦ ರಿಂದ ೭೦೦ ರವೆರೆಗೆ ಸಮರ್ಪಕವಾದ ದಾಖಲೆಗಳು ಇಲ್ಲ. ಆದ್ದರಿಂದ ನಗರಸಭೆಯವರೆ ನೇರವಾಗಿ ಅನುಭವದ ಆಧಾರದ ಮೇಲೆ ದಾಖಲೆಗಳನ್ನು ನಿರ್ಮಾಣ ಮಾಡಲು ಸದಸ್ಯರು ಸಮ್ಮತಿ ವ್ಯಕ್ತಪಡಿಸಿದರು.
ನಗರಕ್ಕೆ ಕುಡಿಯುವ ನೀರು ಪೂರೈಕೆಗೆ ತಾಲ್ಲೂಕಿನ ರಾಮಸಮುದ್ರ ಕೆರೆಯಿಂದ ನೀರು ತರಲು ಸುಮಾರು ೪೪ ಕೋಟಿ ರೂಪಾಯಿಗಳ ವೆಚ್ಚದಲ್ಲಿ ಕ್ರಿಯಾ ಯೋಜನೆ ತಯಾರಿಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಕಳುಹಿಸಿಲು ಸದಸ್ಯರ ಸಹಕಾರ ನೀಡಬೇಕು ಎಂದು ಹೇಳಿದರು.
ನಗರದಲ್ಲಿ ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವ ಅಂಗಡಿಗಳು ಹಾಗೂ ಹೊಟೇಲುಗಳಿಗೆ ನೋಟಿಸ್ ಜಾರಿ ಮಾಡಿ ಲೈಸೆನ್ಸ್ ರದ್ದುಪಡಿಸಬೇಕು ಎಂದು ಸದಸ್ಯರು ಒತ್ತಾಯಿಸಿದರು.
ನಗರದ ರಾಜೀವ್ಗಾಂಧಿ ಬಡಾವಣೆಯಲ್ಲಿ ಸ್ಲಂ ಬೋರ್ಡ್ ನಿಂದ ನಿರ್ಮಾಣ ಮಾಡಲಾಗಿರುವ ಗುಂಪು ಮನೆಗಳನ್ನು ನಗರಸಭೆಗೆ ವರ್ಗಾವಣೆ ಮಾಡಿಲ್ಲ, ಆಶ್ರಯ ಕಮಿಟಿಗೆ ತಂದಿಲ್ಲ, ಈ ಬಗ್ಗೆ ಸ್ಲಂ ಬೋರ್ಡ್ ನವರಿಗೂ ದೂರು ನೀಡಿದ್ದು, ರಾಜಕೀಯವಾದ ಒತ್ತಡಗಳಿಂದ ಅವರು ಬಂದು ಪರಿಶೀಲನೆ ಮಾಡಿ, ತೆರವುಗೊಳಿಸಿಲ್ಲ, ಈ ಬಗ್ಗೆ ಮುಂದಿನ ದಿನಗಳಲ್ಲಿ ಸೂಕ್ತ ಕ್ರಮ ಜರುಗಿಸಲಾಗುತ್ತದೆ ಎಂದು ಶಾಸಕ ರಾಜಣ್ಣ ಎಚ್ಚರಿಸಿದರು.
ನಗರಸಭಾ ಅಧ್ಯಕ್ಷೆ ಮುಷ್ಟರಿತನ್ವೀರ್, ಉಪಾಧ್ಯಕ್ಷೆ ಸುಮಿತ್ರಮ್ಮರಮೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ನಂದು ಕಿಶನ್, ಆಯುಕ್ತ ಎಚ್.ಎ.ಹರೀಶ್, ಸದಸ್ಯರಾದ ಚಿಕ್ಕಮುನಿಯಪ್ಪ, ಅಪ್ಸರ್ಪಾಷ, ಜೆ.ಎಂ.ಬಾಲಕೃಷ್ಣ, ರಾಘವೇಂದ್ರ, ಪ್ರಭಾವತಿ ಸುರೇಶ್, ಲಕ್ಷ್ಮಯ್ಯ ಮತ್ತಿತರರು ಹಾಜರಿದ್ದರು.
- Advertisement -
- Advertisement -
- Advertisement -
- Advertisement -