ಪತ್ರ ಲೇಖನ ಕೇವಲ ಪರೀಕ್ಷೆಯ ಅಂಕಕ್ಕಾಗಿ ಕಲಿಯುವ ಪ್ರಹಸನವಾಗಿರುವಾಗ ತಾಲ್ಲೂಕಿನ ಮುತ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ದೇಶ ಮತ್ತು ವಿದೇಶದಲ್ಲಿ ಪತ್ರ ಸ್ನೇಹಿತರನ್ನು ಹೊಂದಿದ್ದಾರೆ. ವಿಶೇಷವೆಂದರೆ ಅಮೆರಿಕೆಯಿಂದ ಮುತ್ತೂರಿನ ಮಕ್ಕಳಿಗೆ ಪತ್ರಗಳು ಬರುತ್ತಿವೆ, ಇಲ್ಲಿಂದಲೂ ಸಾಗುತ್ತಿವೆ.
ಈ ‘ಪತ್ರ ಸ್ನೇಹ’ದ ನಂಟು ಪ್ರಾರಂಭವಾದದ್ದು ಎರಡು ತಿಂಗಳ ಹಿಂದೆ. ಅಮೆರಿಕಾದಲ್ಲಿ ನೆಲೆಸಿರುವ ಭಾರತೀಯ ಮೂಲದ ಅಶ್ವತಿ ಅಯ್ಯರ್ ಅವರು ‘ನಮ್ಮ ಮುತ್ತೂರು’ ಸಂಸ್ಥೆಯ ಉಷಾಶೆಟ್ಟಿ ಅವರೊಂದಿಗೆ ಮುತ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ್ದರು. ಅವರ ಮನಸ್ಸಿನಲ್ಲಿದ್ದ ‘ಪತ್ರ ಸ್ನೇಹ’ದ ಯೋಜನೆಯನ್ನು ಶಿಕ್ಷಕರೊಂದಿಗೆ ಹಂಚಿಕೊಂಡರು. ಶಿಕ್ಷಕರು ಸಕಾರಾತ್ಮಕವಾಗಿ ಸ್ಪಂದಿಸಿದಾಗ ಈ ಯೋಜನೆಯ ರೂಪುರೇಷೆಯನ್ನು ಸಿದ್ಧಪಡಿಸಿದರು.

ಆರು ಮತ್ತು ಏಳನೆ ತರಗತಿಯ 15 ಮಕ್ಕಳನ್ನು ಆಯ್ಕೆ ಮಾಡಿಕೊಂಡರು. ಶಿಕ್ಷಕ ಎಸ್.ದಾವೂದ್ಪಾಷ ಅವರನ್ನು ಸಹಕರಿಸಲು ಕೋರಿ ಅವರ ಭಾವಚಿತ್ರವನ್ನು ತೆಗೆದುಕೊಂಡು ಹೊರಟರು.
‘ನಮ್ಮ ಹದಿನೈದು ಮಕ್ಕಳಿಗೆ ಅಮೆರಿಕ ಮತ್ತು ಭಾರತದ ಪತ್ರ ಸ್ನೇಹಿತರನ್ನು ಹುಡುಕಿದ ಅಶ್ವತಿ ಅಯ್ಯರ್ ಅವರು ಈ ಮಕ್ಕಳ ಚಿತ್ರ ಮತ್ತು ವಿಳಾಸವನ್ನು ಅವರುಗಳಿಗೆ ನೀಡಿದರು. ಮುತ್ತೂರಿನ 15 ಮಕ್ಕಳು ಪತ್ರ ಬರೆಯಲು ಅನುಕೂಲವಾಗುವಂತೆ ಒಬ್ಬೊಬ್ಬರಿಗೆ ಮೂರು ಲಕೋಟೆಗಳು ಹಾಗೂ ಅಗತ್ಯವಿರುವಷ್ಟು ಅಂಚೆ ಚೀಟಿಗಳನ್ನು ನನಗೆ ಕಳುಹಿಸಿಕೊಟ್ಟರು. ಪ್ರತಿಯೊಬ್ಬ ವಿದ್ಯಾರ್ಥಿಗೂ ತಮ್ಮ ಪತ್ರ ಸ್ನೇಹಿತರಿಂದ ಪತ್ರ ಬಂದ ನಂತರ ಉತ್ತರಿಸಲು ಹೇಳಿ, ಅಂಚೆ ಚೀಟಿ ಹಚ್ಚಿ ಪೋಸ್ಟ್ ಮಾಡುವಂತೆ ಕೋರಿದರು. ಅದರಂತೆ ನಾನು ಮಕ್ಕಳಿಗೆ ಸಹಕರಿಸುತ್ತಿದ್ದೇನೆ’ ಎಂದು ಶಿಕ್ಷಕ ಎಸ್.ದಾವೂದ್ ಪಾಷ ತಿಳಿಸಿದರು.
‘ಮಕ್ಕಳಿಗೆ ಪತ್ರ ಲೇಖನ ಕಲೆ, ಭಾಷೆ, ಭಾವನೆಗಳನ್ನು ಅಭಿವ್ಯಕ್ತಿಸುವುದು, ಹೊಸ ಪರಿಚಯ, ದೇಶ ವಿದೇಶಗಳ ಸಂಪರ್ಕ ಮುಂತಾದ ಕಲಿಕೆ ಇದರಿಂದ ಸಾಧ್ಯವಾಗುತ್ತದೆ. ಮೂರು ತಿಂಗಳಿಗೆ ಆಗುವಷ್ಟು ಲಕೋಟೆ ಮತ್ತು ಅಂಚೆ ಚೀಟಿಗಳನ್ನು ಕೊಟ್ಟಿರುವ ಅಶ್ವತಿ ಅಯ್ಯರ್ ಅವರು ಡಿಸೆಂಬರಿನಲ್ಲಿ ಮುತ್ತೂರಿಗೆ ಬಂದು ಈ ಪತ್ರಸ್ನೇಹದ ವಿಸ್ತರಣೆಗೆ ಇನ್ನಷ್ಟು ಸಹಾಯ ಮಾಡುವುದಾಗಿ ತಿಳಿಸಿದ್ದಾರೆ. ಸ್ನೇಹ, ವಿಶ್ವಾಸಕ್ಕೆ ಗಡಿ ರೇಖೆಗಳಿಲ್ಲ ಎಂಬುದನ್ನು ಇದು ಸಾಬೀತು ಪಡಿಸುತ್ತಿದೆ’ ಎಂದು ಅವರು ವಿವರಿಸಿದರು.
‘ಮುಂಬೈನಿಂದ ಪ್ರಿಯಾ ಎಂಬುವವರು ನನಗೆ ಪತ್ರವನ್ನು ಬರೆದಿದ್ದಾರೆ. ದೂರದ ಮಹಾರಾಷ್ಟ್ರದಿಂದ ಬಂದ ಪತ್ರವನ್ನು ಕಂಡು ನನಗೆ ಅತ್ಯಂತ ಸಂತಸವಾಯಿತು. ಅವರು ನನಗೆ ಕನ್ನಡ ಕಲಿಸಲು ಕೋರಿದ್ದಾರೆ. ಅವರ ಹವ್ಯಾಸಗಳ ಬಗ್ಗೆ ಬರೆದು ನನ್ನ ಗ್ರಾಮ ಮತ್ತು ಹವ್ಯಾಸಗಳ ಬಗ್ಗೆ ಬರೆಯಲು ಹೇಳಿದ್ದಾರೆ. ನಮ್ಮ ಗುರುಗಳ ಸಹಾಯದಿಂದ ಅವರಿಗೆ ಪತ್ರ ಬರೆಯುತ್ತೇನೆ’ ಎಂದು ಏಳನೇ ತರಗತಿಯ ಅಕ್ಷಯ್ ಹರ್ಷವ್ಯಕ್ತಪಡಿಸುತ್ತಾನೆ.
- Advertisement -
- Advertisement -
- Advertisement -







