ಕೊರೊನಾ ಸೋಂಕು ಹರಡದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಾರಿ ಮಾಡಿರುವ ಅಗತ್ಯ ಕ್ರಮಗಳನ್ನು ರೈತ ಸಂಘ ಸ್ವಾಗತಿಸುತ್ತದೆ. ಆದರೂ ಲಾಕ್ ಡೌನ್ ಹಿನ್ನಲೆಯಲ್ಲಿ ಸಂಕಷ್ಟಕ್ಕೆ ಸಿಕ್ಕಿರುವ ರೈತರಿಗೆ ಪರಿಹಾರೋಪಾಯ ಕಲ್ಪಿಸಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ(ಪುಟ್ಟಣ್ಣಯ್ಯ ಬಣ) ಪದಾಧಿಕಾರಿಗಳು ತಹಶೀಲ್ದಾರ್ ರ ಮೂಲಕ ಸೋಮವಾರ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ರೈತ ಸಂಘದ ತಾಲ್ಲೂಕು ಅಧ್ಯಕ್ಷ ಎಸ್.ಎಂ.ರವಿಪ್ರಕಾಶ್ ಮಾತನಾಡಿ, ರೈತರಿಗೆ ಲಾಕ್ ಡೌನ್ ನಿಂದ ವಿನಾಯಿತಿ ಕಲ್ಪಿಸಲಾಗಿದೆ ಎಂದು ರಾಜ್ಯ ಸರ್ಕಾರ ಹೇಳುತ್ತಿದೆಯಾದರೂ ಕೃಷಿ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವಲ್ಲಿ ವಿಫಲವಾಗಿರುವ ಹಿನ್ನಲೆಯಲ್ಲಿ ಜಿಲ್ಲಾದ್ಯಂತ ರೈತರು ಬೆಳೆದ ಬೆಳೆಗಳು ಬೀದಿಗೆ ಹಾಕುವ ಸ್ಥಿತಿ ಬಂದೊದಗಿದೆ. ರಾಜ್ಯದ ಎಲ್ಲಾ ಗಡಿಗಳು ಬಂದ್ ಆಗಿದ್ದು ರೈತ ಬೆಳೆದ ಉತ್ಪನ್ನಗಳನ್ನು ಸಾಗಿಸಲು ತೊಂದರೆಯಾಗಿದೆ. ಬೆಳೆದ ಬೆಳೆಯನ್ನು ಖರೀದಿಸಲು ಯಾರೂ ಮುಂದೆ ಬರುತ್ತಿಲ್ಲ. ಹಾಗಾಗಿ ಸರ್ಕಾರವೇ ನೇರವಾಗಿ ರೈತರಿಂದ ಉತ್ಪನ್ನಗಳನ್ನು ಖರೀದಿಸಬೇಕು. ಇದಿಂದ ರೈತರಿಂದ ಮಧ್ಯವರ್ತಿಗಳು ಕೊಂಡು ಗ್ರಾಹಕರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದನ್ನು ತಡೆಗಟ್ಟಬಹುದು. ದ್ರಾಕ್ಷಿ, ದಾಳಿಂಬೆ, ಚೇಪೆಕಾಯಿ ಹಣ್ಣಾಗಿ ತೋಟದಲ್ಲಿಯೇ ಉರುಳಿ ಬೀಳುತ್ತಿವೆ. ತಕ್ಷಣ ಹಣ್ಣುಗಳನ್ನು ಸಂರಕ್ಷಿಸಲು ಉಚಿತವಾಗಿ ಕೋಲ್ಡ್ ಸ್ಟೋರೇಜ್ ತೆರೆಯಬೇಕು. ಕೃಷಿ ಅಲ್ಪಾವಧಿ ಸಾಲವನ್ನು ಕಟ್ಟಲು ಮೂರು ತಿಂಗಳ ಕಾಲ ವಿಸ್ತರಣೆ ಮಾಡಿರುವ ಸರ್ಕಾರ ಕೃಷಿ ಚಟುವಟಿಕೆಗಳಿಗಾಗಿ ಹೊಸ ಸಾಲ ನೀಡಲು ಕ್ರಮ ಜರುಗಿಸಬೇಕು ಎಂದು ಬೇಡಿಕೆಗಳನ್ನೊಳಗೊಂಡ ಮನವಿ ಪತ್ರವನ್ನು ತಹಶೀಲ್ದಾರ್ ಕೆ.ಅರುಂದತಿ ಅವರಿಗೆ ಸಲ್ಲಿಸಿದರು.
ಮನವಿ ಸ್ವೀಕರಿಸಿದ ತಹಶೀಲ್ದಾರ್ ಕೆ.ಅರುಂಧತಿ ಮಾತನಾಡಿ, ರೈತರ ಬೇಡಿಕೆಯನ್ನು ಮೇಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಕಳುಹಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಟಿ.ಕೆ.ಅರುಣ್‌ಕುಮಾರ್, ತಾಲ್ಲೂಕು ಉಪಾಧ್ಯಕ್ಷ ನಾಗರಾಜ್, ಕೆ.ಶಂಕರನಾರಾಯಣ, ತಾಲ್ಲೂಕು ಸಂಚಾಲಕ ಎಚ್.ಮುದ್ದುಕೃಷ್ಣ, ಕಾರ್ಯಾಧ್ಯಕ್ಷ ಮಾರುತಿ, ಗೌರವಾಧ್ಯಕ್ಷ ಚನ್ನೇಗೌಡ, ಕಾರ್ಯದರ್ಶಿ ಶ್ರೀಧರ್ ಹಾಜರಿದ್ದರು.