ಲೋಕಾಯುಕ್ತ ನ್ಯಾಯಮೂರ್ತಿ ಎಸ್.ಬಾಸ್ಕರರಾವ್ ಅವರ ಪುತ್ರ, ಅಶ್ವಿನ್ರಾವ್ ಅವರ ಲಂಚ ಪ್ರಕರಣಕ್ಕೆ ಸಂಬಂಧಪಟ್ಟಂತೆ ನ್ಯಾಯಮೂರ್ತಿಗಳ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ (ಪುಟ್ಟಣ್ಣಯ್ಯ ಬಣ) ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ಸೋಮವಾರ ಮನವಿ ಪತ್ರವನ್ನು ಸಲ್ಲಿಸಿದರು.
ನಗರದ ತಾಲ್ಲೂಕು ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ಅವರು, ರಾಜ್ಯದ ೬ ಕೋಟಿಗೂ ಹೆಚ್ಚು ಮಂದಿ ಜನತೆ ನಂಬಿಕೆಯಿಟ್ಟಿರುವ ಲೋಕಾಯುಕ್ತ ಸಂಸ್ಥೆಯಲ್ಲಿ ಉನ್ನತ ಹುದ್ದೆಯಲ್ಲಿರುವ ನ್ಯಾಯಮೂರ್ತಿ ಎಸ್.ಬಾಸ್ಕರ್ರಾವ್ ಅವರು, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಅವರು ರಾಜೀನಾಮೆ ನೀಡದಿದ್ದರೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಧ್ಯಪ್ರವೇಶ ಮಾಡಿ, ಅವರನ್ನು ವಜಾಗೊಳಿಸಬೇಕು. ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಯಿಂದಾಗಿ ರೇಷ್ಮೆ ಆಮದು ಶುಲ್ಕವನ್ನು ಇಳಿಕೆ ಮಾಡಿದ್ದರಿಂದ ತೀವ್ರವಾಗಿ ಇಳಿಮುಖವಾಗಿರುವ ರೇಷ್ಮೆ ಗೂಡು ಹಾಗೂ ರೇಷ್ಮೆ ನೂಲಿಗೆ ಸೂಕ್ತವಾದ ಬೆಲೆಗಳನ್ನು ನೀಡಬೇಕು. ಹಿಪ್ಪುನೇರಳೆ ಬೆಳೆಯುವಂತಹ ರೈತರುಗಳ ನೆರವಿಗೆ ಸರ್ಕಾರ ಧಾವಿಸಬೇಕು. ಬ್ಯಾಂಕುಗಳಿಂದ ಮಾಡಿರುವ ಸಾಲಗಳನ್ನು ಮರುಪಾವತಿ ಮಾಡಲು ಕಾಲಾವಕಾಶವನ್ನು ಕಲ್ಪಿಸಿಕೊಡಬೇಕು. ರೈತರ ಸಾಲಗಳಿಗೆ ಬಡ್ಡಿಯನ್ನು ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.
ನಗರದ ಡಿ.ಸಿ.ಸಿ.ಬ್ಯಾಂಕಿನಲ್ಲಿ ರೈತರುಗಳಿಂದ ದಾಖಲೆಗಳನ್ನು ಪಡೆದುಕೊಂಡಿದ್ದು, ಪಹಣಿಗಳಲ್ಲಿ ಸಾಲವಿತರಣೆ ಮಾಡಿರುವಂತೆ ನಮೂದು ಮಾಡಿದ್ದು, ಇದುವರೆಗೂ ಒಬ್ಬ ರೈತರಿಗೂ ಸಾಲವನ್ನು ನೀಡದೆ ವಂಚನೆ ಮಾಡಲಾಗಿದೆ. ಜೂನ್ ಅಂತ್ಯದ ವೇಳೆಗೆ ಸಾಲಗಳನ್ನು ವಿತರಣೆ ಮಾಡುವುದಾಗಿ ಹೇಳಿದ್ದ ವ್ಯವಸ್ಥಾಪಕರು ಹಾಗೂ ನಿರ್ದೇಶಕರು ನೀಡಿದ್ದ ಭರವಸೆ ವಿಫಲವಾಗಿದ್ದು, ಮುಂದಿನ ಒಂದೆರಡು ದಿನಗಳಲ್ಲಿ ರೈತರುಗಳಿಗೆ ಸಾಲಗಳನ್ನು ವಿತರಣೆ ಮಾಡದಿದ್ದರೆ ಡಿ.ಸಿ.ಸಿ.ಬ್ಯಾಂಕಿಗೆ ಬೀಗಹಾಕಿ ಪ್ರತಿಭಟನೆ ಮಾಡಲಾಗುತ್ತದೆ. ಕೋಲಾರದ ಜಿಲ್ಲಾ ಬ್ಯಾಂಕಿನ ಸಮೀಪದಲ್ಲೂ ಪ್ರತಿಭಟನೆ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ರೈತರಿಂದ ಮನವಿ ಪತ್ರವನ್ನು ಸ್ವೀಕರಿಸಿದ ಉಪತಹಸೀಲ್ದಾರ್ ವಾಸುದೇವಮೂರ್ತಿ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಕಳುಹಿಸಿಕೊಡಲಾಗುತ್ತದೆ ಎಂದರು.
ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ (ಪುಟ್ಟಣ್ಣಯ್ಯ ಬಣ) ತಾಲ್ಲೂಕು ಅಧ್ಯಕ್ಷ ರವಿಪ್ರಕಾಶ್, ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್, ಮುನಿಕೆಂಪಣ್ಣ, ಕದಿರಪ್ಪ, ಶಿವಣ್ಣ, ಚಂದ್ರಶೇಖರ್, ವೆಂಕಟೇಶ್, ಮಲ್ಲಪ್ಪ, ಆಂಜನೇಯರೆಡ್ಡಿ, ನಾಗರಾಜು, ಮುನಿನಾರಾಯಣಪ್ಪ, ಗೋವಿಂದಪ್ಪ, ನಾಗೇಶ್, ಮುನೇಗೌಡ, ಡಿ.ವಿ.ನಾರಾಯಣಸ್ವಾಮಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -