ಶಾಲೆಯ ಆಸುಪಾಸಿನಲ್ಲಿ ತಂಬಾಕು ಮಾರಾಟ ಹಾಗೂ ಸೇವನೆ ಮಾಡಬೇಡಿ ಎಂದು ಸ್ವತಃ ವಿದ್ಯಾರ್ಥಿಗಳೇ ವಿನೂತನವಾಗಿ ಗುಲಾಬಿ ಆಂದೋಲನವನ್ನು ಗುರುವಾರ ನಡೆಸಿದರು.
ಅಂಗಡಿ ಮಾಲೀಕರಿಗೆ, ಗ್ರಾಹಕರಿಗೆ ಗುಲಾಬಿ ಹೂವು ಕೊಟ್ಟು ತಂಬಾಕು ಮಾರಾಟ ಹಾಗೂ ಸೇವನೆ ಮಾಡಬೇಡಿ ಎಂದು ವಿಭಿನ್ನವಾಗಿ ಮನವಿ ಮಾಡಿಕೊಂಡಿದ್ದಲ್ಲದೆ, ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿದರು.
ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮತ್ತು ಪೊಲೀಸ್ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಈ ವಿಶೇಷ ಗುಲಾಬಿ ಆಂದೋಲನ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಇದರಲ್ಲಿ ಶಾಲಾ ವಿದ್ಯಾರ್ಥಿಗಳು ಪಾಲ್ಗೊಂಡು ಶಾಲಾ-ಕಾಲೇಜಿನ 100 ಮೀಟರ್ ಸುತ್ತಮುತ್ತ ಸಿಗರೇಟ್, ಗುಟ್ಕಾದಂತಹ ತಂಬಾಕು ಉತ್ಪನಗಳ ಮಾರಾಟ ಮತ್ತು ಸೇವನೆ ಮಾಡಬೇಡಿ ಎಂದು ಪ್ರೀತಿಪೂರ್ವಕವಾಗಿ ಮನವಿ ಮಾಡಿಕೊಂಡರು.
ಕೋಟೆ ಸರ್ಕಾರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳೊಂದಿಗೆ ಮಾತನಾಡಿದ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ, ಬಹಳ ಹಿಂದಿನಿಂದ ನಮ್ಮಲ್ಲಿ ತಂಬಾಕು ಬಳಕೆಯಲ್ಲಿದೆ. ದುರಾದೃಷ್ಟವೆಂದರೆ ಇತ್ತೀಚೆಗೆ 15 ರಿಂದ 20 ವರ್ಷದೊಳಗಿನ ಯುವಜನತೆ ಈ ತಂಬಾಕಿನ ವಿವಿಧ ಉತ್ಪನ್ನಗಳಿಗೆ ಬಲಿಯಾಗುತ್ತಿದ್ದಾರೆ. ಇದೊಂದು ಮಾರಕ ದುಶ್ಚಟವಾಗಿ ಪರಿಣಮಿಸಿದೆ. ತಂಬಾಕು ಸೇವನೆಯಿಂದ ಉಂಟಾಗುವ ಮಾರಕ ಪರಿಣಾಮಗಳ ಕುರಿತು ಅರಿಯುವುದರಿಂದ ಇದರಿಂದ ದೂರವುಳಿಯಬಹುದು. ಮಕ್ಕಳು ತಮ್ಮ ಮನೆ ಹಾಗೂ ಸುತ್ತಮುತ್ತ ಈ ವ್ಯಸನಕ್ಕೆ ತುತ್ತಾದವರಿಗೆ ಅರಿವು ಮೂಡಿಸಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಶ್ರೀನಿವಾಸ್ ಮಾತನಾಡಿ, ತಂಬಾಕು ಸೇವೆನೆ ಕ್ಯಾನ್ಸರ್‌ಗೆ ಕಾರಣವಾಗುತ್ತಿರುವುದು ಗೊತ್ತಿದ್ದರೂ ಕೂಡಾ ಯುವ ಜನತೆ ಇದರ ಹಿಂದೆ ಬಿದ್ದು ತಮ್ಮ ಆರೋಗ್ಯ ಹಾಗೂ ಹಣವನ್ನು ಹಾಳು ಮಾಡಿಕೊಳ್ಳುತ್ತಿದೆ. ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡದಂತೆ ಸರಕಾರದ ಆದೇಶವಿದ್ದರೂ ಕೂಡಾ ಯಾವುದೇ ಭಯವಿಲ್ಲದೆ ಎಲ್ಲೇಂದರಲ್ಲಿ ಮಾರಾಟ ಮಾಡಲಾಗುತ್ತಿದೆ. ತಂಬಾಕು ಮಾರಕವಾದ ವಸ್ತವಾಗಿದ್ದು ಇದನ್ನು 18 ವರ್ಷದೊಳಗಿನ ಮಕ್ಕಳಿಗೆ ನೀಡುವುದು ಕೂಡಾ ಕಾನೂನು ಬಾಹಿರ ಅಲ್ಲದೇ ಶಾಲಾ ಸುತ್ತಮುತ್ತಲ ನೂರು ಮೀಟರ ಒಳಗಡೆ ಮಾರಾಟ ಮಾಡದಂತೆ ಸ್ಪಷ್ಟ ಆದೇಶವಿದೆ. ಆದರೆ ಇದನ್ನು ಯಾರು ಪಾಲನೆ ಮಾಡದಿರುವುದು ಬೇಸರದ ಸಂಗತಿ ಎಂದರು.
ಈ ವಿನೂತನ ಗುಲಾಬಿ ಆಂದೋಲನದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ನಗರದ ಟ್.ಬಿ.ರಸ್ತೆ, ನಗರ್ತರಪೇಟೆ ಮುಂತಾದೆಡೆ ಮೆರವಣಿಗೆ ನಡೆಸಿ, ತಂಬಾಕು ಸೇವನೆಯಿಂದಾಗುವ ತೊಂದರೆಗಳ ಬಗ್ಗೆ ಅರಿವು ಮೂಡಿಸಿದರು.
ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಹೇಶ್, ತಾಲ್ಲೂಕು ಆರೋಗ್ಯ ನಿರೀಕ್ಷಕ ಲೋಕೇಶ್, ಶಿಕ್ಷಣ ಸಂಯೋಜಕ ಇ.ಭಾಸ್ಕರಗೌಡ, ಸಿ.ಆರ್.ಪಿ ಪ್ರಕಾಶ್, ಮುಖ್ಯಶಿಕ್ಷಕಿ ನಾಗಮಣಿ, ಶಿಕ್ಷಕ ವೆಂಕಟೇಶ್ ಹಾಜರಿದ್ದರು.
- Advertisement -
- Advertisement -
- Advertisement -