ಮೃತ ವ್ಯಕ್ತಿಯ ಶವ ಸಂಸ್ಕಾರ ನಡೆಸುವ ಸ್ಥಳದ ವಿಚಾರವಾಗಿ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರ ಮಧ್ಯಸ್ಥಿಕೆಯಲ್ಲಿ ಅಂತ್ಯ ಸಂಸ್ಕಾರ ನಡೆಸಿದ ಘಟನೆ ತಾಲ್ಲೂಕಿನ ಗಂಗನಹಳ್ಳಿ ಗ್ರಾಮದಲ್ಲಿ ಭಾನುವಾರ ನಡೆದಿದೆ.
ತಾಲ್ಲೂಕಿನ ಮೇಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಂಗನಹಳ್ಳಿ ಗ್ರಾಮದಲ್ಲಿ ಮೃತ ರತ್ನಮ್ಮ ಎಂಬುವವರ ಅಂತ್ಯಸಂಸ್ಕಾರಕ್ಕೆಂದು ಆಕೆಯ ಪತಿಯನ್ನು ಮಣ್ಣು ಮಾಡಿರುವ ಜಾಗದ ಪಕ್ಕದಲ್ಲಿ ಗುಂಡಿ ತೋಡುವಾಗ ಇದೇ ಗ್ರಾಮದ ರಾಮಾಂಜಿನಪ್ಪ, ಇದು ನಮಗೆ ಸೇರಿದ ಜಾಗ ನಮ್ಮ ಬಳಿ ದಾಖಲೆಯಿದೆ. ಈಗಾಗಲೇ ಸ್ಮಶಾನಗಳಿಗಾಗಿ ನಮ್ಮ ಇಡುವಳಿ ಜಮೀನಿನಲ್ಲಿ ೨೦ ಗುಂಟೆ ಜಮೀನು ಬಿಟ್ಟಿದ್ದೇವೆ. ಅಲ್ಲಿ ಮಾಡಿಕೊಳ್ಳದೆ ಇಲ್ಲಿ ಅಂತ್ಯ ಸಂಸ್ಕಾರ ಮಾಡುತ್ತಿರುವುದು ಸರಿಯಲ್ಲ, ಇಲ್ಲಿ ಮಾಡಬೇಡಿ, ಬೇರೆ ಕಡೆ ಮಾಡಿಕೊಳ್ಳಿ ಎಂದು ಅಡ್ಡಿ ಪಡಿಸಿದ್ದಾರೆ.
ಕಳೆದ ಕೆಲ ವರ್ಷಗಳಿಂದ ಇದೇ ಸ್ಥಳದಲ್ಲಿ ಮೃತರನ್ನು ಮಣ್ಣು ಮಾಡಿದ್ದಾರೆ. ಅದರಲ್ಲಿಯೂ ಇದೀಗ ಮೃತಪಟ್ಟಿರುವ ರತ್ನಮ್ಮರ ಪತಿಯನ್ನು ಸಹ ಇದೇ ಸ್ಥಳದಲ್ಲಿ ಅಂತ್ಯ ಸಂಸ್ಕಾರ ಮಾಡಿದ್ದು ಇದೀಗ ಪತಿಯನ್ನು ಮಣ್ಣು ಮಾಡಿರುವ ಪಕ್ಕದಲ್ಲಿಯೇ ಇವರ ಅಂತ್ಯಕ್ರಿಯೆ ನಡೆಯಬೇಕು ಎಂದು ಗ್ರಾಮದ ದೊಡ್ಡಪಾಪಣ್ಣ ಮತ್ತಿತರರು ಪಟ್ಟುಹಿಡಿದಾಗ ಎರಡು ಗುಂಪಿನ ನಡುವೆ ಕೆಲಕಾಲ ಮಾತಿನಚಕಮಕಿ ನಡೆದು ಕೈ ಕೈ ಮಿಲಾಯಿಸುವ ಮಟ್ಟಕ್ಕೆ ಬಂದಿತ್ತು.
ವಿಷಯ ತಿಳಿದು ಸ್ಥಳಕ್ಕೆ ಬಂದಿದ್ದ ಕಸಬಾ ಹೋಬಳಿ ರಾಜಸ್ವ ನಿರೀಕ್ಷಕ ವಿಶ್ವನಾಥ್ ಮತ್ತು ಸರ್ಕಲ್ ಇನ್ ಸ್ಪೆಕ್ಟರ್ ಆನಂದ್ಕುಮಾರ್ ಪೋಲೀಸ್ ಸಿಬ್ಬಂದಿಯೊಂದಿಗೆ ಗ್ರಾಮಕ್ಕೆ ಭೇಟಿ ನೀಡಿ ಕಂದಾಯ ಇಲಾಖೆಯ ಅಧಿಕಾರಿಗಳ ಸೂಚನೆಯ ಮೇರೆಗೆ ಅದೇ ಸ್ಥಳದಲ್ಲಿಯೇ ಪೊಲೀಸ್ ಬಂದೋ ಬಸ್ತ್ ನಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.
- Advertisement -
- Advertisement -
- Advertisement -
- Advertisement -