ಶಿಡ್ಲಘಟ್ಟ ವಿಧಾನಸಭೆ ಕ್ಷೇತ್ರದಾದ್ಯಂತ ಶನಿವಾರ ಚುನಾವಣೆ ಭಾಗಶಃ ಶಾಂತವಾಗಿ ನಡೆದಿದೆ. ತಾಲ್ಲೂಕು ಸೇರಿದಂತೆ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಶೇ. 85.45 ಮತದಾನ ದಾಖಲಾಗಿದೆ.
ಮುಂಜಾನೆಯಿಂದಲೂ ನಗರದ ಮುಖ್ಯ ರಸ್ತೆಗಳಲ್ಲಿ ಬಹುತೇಕ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಗ್ರಾಮೀಣ ಪ್ರದೇಶದ ಜನತೆ ನಗರಕ್ಕೆ ಬಾರದೇ ಇದ್ದುದರಿಂದ ನಗರದಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿತ್ತು.
ಚುನಾವಣೆಯ ದಿನ ಬೆಳಿಗ್ಗೆ ಏಳು ಗಂಟೆಗೆ ಮತದಾನದ ಪ್ರಕ್ರಿಯೆ ಪ್ರಾರಂಭವಾಯಿತು. ಕ್ಷೇತ್ರದ ಒಂದೆರಡು ಕಡೆ ಮತಯಂತ್ರಗಳಲ್ಲಿ ದೋಷ ಕಂಡು ಬಂದಿತ್ತಾದರೂ ಅಧಿಕಾರಿಗಳು ಪರಿಶೀಲನೆ ನಡೆಸಿ ಬೇರೆ ಯಂತ್ರಗಳನ್ನು ಅಳವಡಿಸುವ ಮೂಲಕ ಗೊಂದಲ ನಿವಾರಿಸಿದರು.
ಕೆಲವೆಡೆ ಮತದಾನ ಪ್ರಕ್ರಿಯೆ ಶುರುವಾಗುತ್ತಿದ್ದಂತೆ ಜನರು ಬೆಳಿಗ್ಗೆಯೇ ಉತ್ಸಾಹ ಭರಿತರಾಗಿ ಬೇಗ ಬಂದು ಸರತಿಸಾಲುಗಳಲ್ಲಿ ನಿಂತು ಮತದಾನ ಮಾಡಿದರೆ, ಕೆಲವೆಡೆ ಮಧ್ಯಾಹ್ನದ ವರೆಗೂ ಜನರು ಬರುವುದು ಕಡಿಮೆಯಾಗಿತ್ತು.
ಕಾಂಗ್ರೆಸ್ ಅಭ್ಯರ್ಥಿ ವಿ.ಮುನಿಯಪ್ಪ ಸ್ವಗ್ರಾಮ ಹಂಡಿಗನಾಳ ಗ್ರಾಮದಲ್ಲಿ ಮತಚಲಾಯಿಸಿದರೆ, ಜೆಡಿಎಸ್ ಅಭ್ಯರ್ಥಿ ಬಿ.ಎನ್.ರವಿಕುಮಾರ್ ಸ್ವಗ್ರಾಮ ಮೇಲೂರಿನಲ್ಲಿ ಮತಚಲಾಯಿಸಿದರು. ಬಿಜೆಪಿ ಅಭ್ಯರ್ಥಿ ಎಚ್.ಸುರೇಶ್ ಜೆ ವೆಂಕಟಾಪುರದಲ್ಲಿ ತಮ್ಮ ಮತಚಲಾಯಿಸಿದರೆ, ಪಕ್ಷೇತರ ಅಭ್ಯರ್ಥಿ ಎಂ.ರಾಜಣ್ಣ ತಮ್ಮ ಸ್ವಗ್ರಾಮ ಎಲ್ ಮುತ್ತುಕದಹಳ್ಳಿಯಲ್ಲಿ ಮತ ಚಲಾಯಿಸಿದರು.
ತಾಲ್ಲೂಕಿನ ಗೆಜ್ಜಿಗಾನಹಳ್ಳಿ ಮತ್ತು ಬಚ್ಚಹಳ್ಳಿಯಲ್ಲಿ ಗುಂಪು ಘರ್ಷಣೆ ನಡೆದರೂ ಸಕಾಲದಲ್ಲಿ ಪೊಲೀಸರ ಮಧ್ಯಪ್ರವೇಶದಿಂದ ಎಲ್ಲವೂ ತಿಳಿಯಾಯಿತು.
- Advertisement -
- Advertisement -
- Advertisement -