ದೇಹವು ಅಳಿದರೂ ತಮ್ಮ ಬದುಕು, ನಡೆ, ನುಡಿ, ಆದರ್ಶ, ಬರಹ ಮಾರ್ಗದರ್ಶನವಾಗುವಂತೆ ಜೀವಿಸಿದ ಮಹಾಪುರುಷರ ಜಯಂತ್ಯುತ್ಸವಗಳನ್ನು ಆಚರಣೆ ಮಾಡುತ್ತಿದ್ದೇವೆ. ವಿವಿಧ ಸಮುದಾಯಗಳೊಂದಿಗೆ ತಾಲ್ಲೂಕು ಆಡಳಿತವು ಈ ಜಯಂತ್ಯುತ್ಸವಗಳಲ್ಲಿ ಕೊಂಡಿಯಂತೆ ಕಾರ್ಯನಿರ್ವಹಿಸುತ್ತಿದೆ ಎಂದು ತಹಶೀಲ್ದಾರ್ ಅಜಿತ್ಕುಮಾರ್ ರೈ ತಿಳಿಸಿದರು.
ನಗರದ ಅಗ್ನಿಶಾಮಕ ಠಾಣೆ ಸಭಾಂಗಣದಲ್ಲಿ ಗುರುವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಡೆದ ಶ್ರೀ ಮಡಿವಾಳ ಮಾಚಿದೇವರ ಪ್ರಥಮ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಕತ್ತಲೆಯೊಳಗೆ ಬೆಳಕು ಹೊಕ್ಕಂತಾಯಿತು ಶರಣ ಮಡಿವಾಳ ಮಾಚಿದೇವ ತಂದೆ ಕೃಪೆಯಿಂದ…’ ಎಂದು ಅಲ್ಲಮಪ್ರಭುಗಳು ಹೇಳಿರುವುದು ಮಾಚಿದೇವರ ಘನಜ್ಞಾನಕ್ಕೆ ಹಿಡಿದ ಕನ್ನಡಿ. ಕಲ್ಯಾಣದ ಕ್ರಾಂತಿಯ ಸಂದರ್ಭದಲ್ಲಿ ಶರಣರ ವಚನಸಾಹಿತ್ಯವನ್ನು ನಾಶಪಡಿಸುವ ಪ್ರಯತ್ನ ತಡೆದ ಮಾಚಿದೇವ ವಚನಸಾಹಿತ್ಯವನ್ನು ಬೆನ್ನ ಮೇಲೆ, ತಲೆಯ ಮೇಲೆಯೇ ಹೊತ್ತು ಹೋರಾಡಿದರು. ಶರಣರ ವಚನಸಾಹಿತ್ಯದ ರಕ್ಷಣೆಗಾಗಿ ಹೋರಾಡಿದ ಮಾಚಿದೇವರು ಅಮರರಾದರು. ಇಂದು ಅವರ ಜಯಂತಿಯನ್ನು ನಾಡಿನ ಎಲ್ಲೆಡೆ ಶ್ರದ್ಧೆಯಿಂದ ಆಚರಿಸಲಾಗುತ್ತಿರುವುದು ಅರ್ಥಪೂರ್ಣವಾಗಿದೆ ಎಂದು ಹೇಳಿದರು.
ನಗರಸಭಾ ಪ್ರಭಾರ ಅಧ್ಯಕ್ಷೆ ಪ್ರಭಾವತಿ ಸುರೇಶ್ ಮಾತನಾಡಿ, ಸರ್ವರಿಗೂ ಸಮಪಾಲು -ಸಮಬಾಳು ಒದಗಿಸಲು ಬಸವ- ಮಾಚಿದೇವಾದಿ ಶರಣರು ಸಾಮಾಜಿಕ ಕ್ರಾಂತಿಯನ್ನೇ ಕೈಗೊಂಡರು. ಶರಣರ ಅಗ್ರಗಣ್ಯ ಬಳಗದಲ್ಲಿ ‘ಮಡಿವಾಳ ಮಾಚಿದೇವ’ ಪ್ರಮುಖರು ಎಂದು ಹೇಳಿದರು.
ಮುಖ್ಯ ಭಾಷಣಕಾರ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಎಂ.ದೇವರಾಜ್ ಮಾತನಾಡಿ, ಶರಣರ ಬಟ್ಟೆಗಳನ್ನು ಶುಚಿ ಮಾಡುವುದು ಮಾಚಿದೇವರ ಕಾಯಕ. ವೀರನಿಷ್ಠೆಯ ಶರಣನೀತ. ವಿಜಾಪುರ ಜಿಲ್ಲೆಯ ಸಿಂಧಗಿ ತಾಲೂಕಿನ ‘ದೇವರ ಹಿಪ್ಪರಗಿಯಲ್ಲಿ’ ಪರುವತಯ್ಯ -ಸುಜ್ನಾನವ್ವ ದಂಪತಿಗಳ ಪುತ್ರ. ಇವರ ಕಾರ್ಯಕ್ಷೇತ್ರ ಕಲ್ಯಾಣ. ಆರಾಧ್ಯದೈವ ಕಲ್ಲಿನಾಥ. ಕಾವ್ಯ ಪುರಾಣಗಳಲ್ಲಿ ಇವರನ್ನು ವೀರಭದ್ರನ ಅವತಾರವೆಂದು ಬಣ್ಣಿಸಲಾಗಿದೆ. ಶಾಸನ ಶಿಲ್ಪಗಳಲ್ಲಿಯೂ ಇವರ ಕುರಿತಾಗಿ ಮಾಹಿತಿಯಿದೆ. ಅನುಭವ ಮಂಟಪ ಕಟ್ಟುವಲ್ಲಿ ಮಡಿವಾಳ ಮಾಚಿದೇವರ ಕಾಯಕ ಅತಿ ಮಹತ್ವದ್ದು ಎಂದು ಮಾಚಿದೇವರ ಜೀವನದ ಘಟನೆಗಳನ್ನು, ವಚನಸಾಹಿತ್ಯವನ್ನು ವಿವರಿಸಿದರು.
ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಮುತ್ತಿನ ಪಲ್ಲಕ್ಕಿಗಳು, ಮಡಿವಾಳ ಮಾಚಿದೇವರ ವೇಷಧಾರಿಗಳು, ವೀರಗಾಸೆ, ನಾಸಿಕ್ ಡೋಲು, ತಮಟೆ, ಪೂರ್ಣಕುಂಭ ಹೊತ್ತ ಮಹಿಳೆಯರು ನಗರದ ಬಸ್ ನಿಲ್ದಾಣದಿಂದ ತಾಲ್ಲೂಕು ಕಚೇರಿಯವರೆಗೂ ಮೆರವಣಿಗೆ ನಡೆಸಿದರು.
ಮಡಿವಾಳ ಸಮುದಾಯದ ಹಿರಿಯರಾದ ಓಬಣ್ಣ, ಯಣ್ಣೂರು ಮುನಿಯಪ್ಪ, ದೇವರಮಳ್ಳೂರು ಚನ್ನಕೃಷ್ಣ, ಚಂದ್ರಪ್ಪ ಅವರನ್ನು ಸನ್ಮಾನಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಎಂ.ವೆಂಕಟೇಶ್, ರಾಜ್ಯ ಮಡಿವಾಳ ಸಂಘದ ಉಪಾಧ್ಯಕ್ಷ ಎಂ.ರಾಜಣ್ಣ, ಮಡಿವಾಳ ಕ್ಷೇಮಾಭಿವೃದ್ಧಿ ಸಂಘದ ತಾಲ್ಲೂಕು ಅಧ್ಯಕ್ಷ ಮುರಳೀಧರ, ಸರ್ಕಲ್ ಇನ್ಸ್ಪೆಕ್ಟರ್ ಸಿದ್ದರಾಜು, ನಾರ್ಥ್ ಈಸ್ಟ್ ಸುರೇಶ್, ದೈಹಿಕ ಶಿಕ್ಷಣ ಸಂಯೋಜಕ ರಂಗನಾಥ್, ರೈತ ಸಂಘದ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ತಾಟಪರ್ತಿ ರಾಜಪ್ಪ, ಕೊರಿಯರ್ ರಾಜು, ಮುತ್ತೂರು ರಾಜಣ್ಣ, ಸಮಾಜ ಕಲ್ಯಾಣ ಇಲಾಖೆಯ ಶಂಕರ್, ವೆಂಕಟಸ್ವಾಮಿ, ಕೃಷ್ಣಪ್ಪ, ಮುನಿಶಾಮಣ್ಣ, ನರಸಪ್ಪ, ಅಬ್ಲೂಡು ದೇವರಾಜ್, ರಾಮಾಂಜಿನಪ್ಪ, ರಾಜಣ್ಣ, ನಂಜಪ್ಪ, ಚಲಪತಿ ಹಾಜರಿದ್ದರು.
ಪಂಜನ್ನು ಉರಿಸಿ ಉದ್ಘಾಟನೆ: ವೇದಿಕೆಯ ಮೇಲಿನ ಗಣ್ಯರು ಮಡಿವಾಳ ಜನಾಂಗದ ಸಂಕೇತವಾದ ಪಂಜನ್ನು ಉರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದ್ದು ವಿಶೇಷವಾಗಿತ್ತು.
ಸ್ತ್ರೀಶಕ್ತಿ ಸಂಘ: ತಾಲ್ಲೂಕಿನ ಹಿತ್ತಲಹಳ್ಳಿ ಗ್ರಾಮದಲ್ಲಿ ಶ್ರೀ ಮಡಿವಾಳ ಮಾಚಿದೇವರ ಸ್ತ್ರೀಶಕ್ತಿ ಮಹಿಳಾ ಸ್ವ-ಸಹಾಯ ಸಂಘವನ್ನು ರಾಜ್ಯ ಮಡಿವಾಳ ಸಂಘದ ಉಪಾಧ್ಯಕ್ಷ ಹಾಗೂ ತಾಲ್ಲೂಕು ಅಧ್ಯಕ್ಷ ಆರ್.ವಿ.ರಾಜಣ್ಣ ಉದ್ಘಾಟಿಸಿದರು. ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರಾದ ಕವಿತಾ, ನಾರಾಯಣಮ್ಮ, ಪದ್ಮಮ್ಮ, ಮಮತಾ, ಅಂಬಿಕಾ, ಕವನ, ನವನೀತಾ, ನಾಗರತ್ನಮ್ಮ, ಭಾಗ್ಯಮ್ಮ ಹಾಜರಿದ್ದರು.
- Advertisement -
- Advertisement -
- Advertisement -
- Advertisement -