ಜಿಲ್ಲೆಯ ಬಹುಭಾಷಿಕ ಮತ್ತು ಬಹುಮುಖಿ ಸಂಸ್ಕೃತಿಗಳ ಪರಿಸರದಲ್ಲಿ ಹಲವಾರು ವೈಶಿಷ್ಟ್ಯಪೂರ್ಣ ಜಾನಪದ ಆಚರಣೆಗಳಿವೆ. ಕೃಷಿ, ಹಬ್ಬ, ಮದುವೆ, ಜನನ ಮುಂತಾದ ವೈವಿಧ್ಯಮಯ ಆಚರಣೆಗಳೊಂದಿಗೆ ಗ್ರಾಮಕ್ಕೆ ಶಾಂತಿ, ಗ್ರಾಮಸ್ಥರ ಒಳಿತು, ಒಗ್ಗಟ್ಟು, ಸುಖ, ನೆಮ್ಮದಿಗಾಗಿಯೇ ಕೆಲವು ನಿರ್ದಿಷ್ಟ ಆಚರಣೆಗಳಿವೆ. ಸಲ್ಲಮುದ್ದ ಅಥವಾ ತಣಿಮುದ್ದೆ ಆಚರಣೆಯೂ ಇದರಲ್ಲೊಂದು.
ಶಿಡ್ಲಘಟ್ಟ ತಾಲ್ಲೂಕಿನ ಸದ್ದಹಳ್ಳಿ ಗ್ರಾಮದಲ್ಲಿ ಸುಮಾರು 25 ವರ್ಷಗಳ ನಂತರ ಸಲ್ಲಮುದ್ದ ಅಥವಾ ತಣಿಮುದ್ದೆ ಆಚರಣೆಯನ್ನು ಗ್ರಾಮಸ್ಥರು ಒಗ್ಗೂಡಿ ಆಚರಿಸುತ್ತಿದ್ದಾರೆ. ಗ್ರಾಮಕ್ಕೆ ಶಾಂತಿ ಮಾಡಿಸುವುದು, ಕೆಡುಕಾಗದಂತೆ ಮತ್ತು ಗ್ರಾಮದ ಏಳಿಗೆಗಾಗಿ ಅಷ್ಟಬಂಧನ ಮಾಡಿಸುವುದು ಸೇರಿದಂತೆ ಐದು ದಿನಗಳ ಆಚರಣೆಯನ್ನು ಗ್ರಾಮಸ್ಥರೆಲ್ಲರೂ ಸೇರಿ ಶ್ರದ್ಧಾಭಕ್ತಿಯಿಂದ ಆಚರಿಸುವರು. ಗ್ರಾಮದ ಹೆಣ್ಣುಮಕ್ಕಳೆಂದೇ ನಂಬಿರುವ ನರಿಡಮ್ಮ ಮತ್ತು ಗಂಗಮ್ಮ ದೇವಿಯನ್ನು ಕರೆತಂದು ಐದು ದಿನಗಳ ಪೂಜೆ ಆಚರಣೆಯನ್ನು ನೆರವೇರಿಸಿ ಮಡಿಲು ತುಂಬಿ ವಾಪಸ್ ಕಳುಹಿಸುವುದು ಈ ಆಚರಣೆಯ ಭಾವನಾತ್ಮಕ ಅಂಶವಾಗಿದೆ.
ಈ ಆಚರಣೆಯು ಪ್ರಾರಂಭವಾಗಿದ್ದು ಶಿಡ್ಲಘಟ್ಟ ತಾಲ್ಲೂಕಿನ ವೈ.ಹುಣಸೇನಹಳ್ಳಿ ಪಂಚಾಯ್ತಿಯ ಮಾರಪ್ಪನಹಳ್ಳಿಯಿಂದ ನರಿಡಮ್ಮ ಮತ್ತು ಪಲ್ಲಿಚೇರ್ಲು ಪಂಚಾಯ್ತಿಯ ಬಿನ್ನಮಂಗಲ ಗ್ರಾಮದಿಂದ ಗಂಗಮ್ಮನ ಉತ್ಸವ ಮೂರ್ತಿಯನ್ನು ಗ್ರಾಮಕ್ಕೆ ತರುವುದರೊಂದಿಗೆ. ಸದ್ದಹಳ್ಳಿಯ ಗ್ರಾಮಸ್ಥರು ತವರಿಗೆ ಬರುವ ಹೆಣ್ಣುಮಕ್ಕಳನ್ನು ಸ್ವಾಗತಿಸುವ ರೀತಿಯಲ್ಲಿ ಕುಂಬಳ ಕಾಯಿ ಮತ್ತು ತೆಂಗಿನಕಾಯಿ ನೀವಳಿಸಿ ಒಡೆದು ಹಲಗೆಯ ನಾದದೊಂದಿಗೆ ಸಂಭ್ರಮದಿಂದ ಬರಮಾಡಿಕೊಂಡರು. ರಸ್ತೆಯೆಲ್ಲಾ ನೀರು ಸುರಿಯುತ್ತಾ ಕೆಲವರು ಸಾಗಿದರೆ, ಮನೆಗಳ ಮುಂದೆ ಸಗಣಿಯಿಂದ ಸಾರಿಸಿ ರಂಗೋಲಿಯಿಟ್ಟು, ಆರತಿ ಎತ್ತಿ ಮಹಿಳೆಯರು ಸ್ವಾಗತ ಕೋರಿದರು. ಗ್ರಾಮದಲ್ಲಿನ ಎಲ್ಲಾ ದೇವರುಗಳ ಸನ್ನಿಧಿಯಲ್ಲೂ ಪೂಜೆಯನ್ನು ನೆರವೇರಿಸಿಕೊಂಡು ಗ್ರಾಮದೇವತೆ ಗೊಡ್ಡಮ್ಮನ ಆವರಣದಲ್ಲಿ ನರಿಡಮ್ಮ ಮತ್ತು ಗಂಗಮ್ಮ ದೇವಿಯರ ಸ್ಥಾಪನೆಯಾಯಿತು.
ಪ್ರತಿದಿನವೂ ರಾತ್ರಿಗಳಲ್ಲಿ ಸಲ್ಲಮುದ್ದ ಅಥವಾ ತಣಿಮುದ್ದೆ ಆಚರಣೆಯನ್ನು ನಡೆಸಲಾಯಿತು. ಗ್ರಾಮದ ನಾಲ್ಕು ದಿಕ್ಕುಗಳಲ್ಲಿ ಸಾರಿಸಿ ಗುಡಿಸಿ ರಂಗೋಲಿಯಿಟ್ಟು ಪ್ರಥಮ ಪೂಜೆಯನ್ನು ನಡೆಸುವವರು ದೋಬಿ ಜನಾಂಗದವರು. ಕುಂಬಳಗೂಡು ಎಂದು ಕರೆಯುವ ಅನ್ನ ಹಾಲಿನ ಎಡೆಯನ್ನು ಬೇವಿನ ಸೊಪ್ಪಿನೊಂದಿಗೆ ಆಲದ ಎಲೆಯಲ್ಲಿ ಇಟ್ಟು ಅವರು ಪೂಜಿಸಿದ ನಂತರ, ಗ್ರಾಮದ ಪ್ರತಿಯೊಂದು ಮನೆಯವರೂ ತಮ್ಮ ಮನೆಗಳಲ್ಲಿ ಅನ್ನ, ಗೋದಿಹಿಟ್ಟು, ರಾಗಿಹಿಟ್ಟು ಮತ್ತು ಅಕ್ಕಿಹಿಟ್ಟುಗಳನ್ನು ಬಳಸಿ ತಯಾರಿಸಲಾದ ತಣಿಮುದ್ದೆಗಳನ್ನು ಬೇವಿನ ಸೊಪ್ಪಿನೊಂದಿಗೆ ಆಲದ ಎಲೆಯಲ್ಲಿ ಇಟ್ಟು ನಾಲ್ಕು ದಿಕ್ಕುಗಳಿಗೆ ತಂದು ಪೂಜಿಸಿಟ್ಟರು.
ಪ್ರತಿಯೊಂದು ಮನೆಯವರೂ ತಣಿಮುದ್ದೆಯನ್ನಿಟ್ಟು ಪೂಜಿಸಿದ ನಂತರ ನರಿಡಮ್ಮ ಮತ್ತು ಗಂಗಮ್ಮ ದೇವಿಯರ ಸವಾರಿ ಹೊರಡುತ್ತದೆ. ನಾಲ್ಕು ದಿಕ್ಕುಗಳಲ್ಲಿ ತಣಿಮುದ್ದೆಗಳಿರುವೆಡೆ ಬಂದು ಪೂಜೆಯನ್ನು ಅವರು ಸ್ವೀಕರಿಸುತ್ತಾರೆ. ನಂತರ ಎಲ್ಲಾ ಎಡೆಗಳನ್ನೂ ಮಕ್ಕರಿಯಲ್ಲಿಟ್ಟುಕೊಂಡು ದೇವಿಯ ಹಿಂದೆ ಸಾಗುತ್ತಾರೆ. ಈ ಸಮಯದಲ್ಲಿ ಹೆಂಗಸರು ಮನೆಗಳನ್ನು ಸೇರಿ ಬಾಗಿಲುಹಾಕಿಕೊಳ್ಳಬೇಕೆಂಬ ನಿಬಂಧನೆಯಿದೆ. ಕೇವಲ ಗಂಡಸರು ಮಾತ್ರ ದೇವಿಯೊಂದಿಗೆ ತೆರಳಿ ಗ್ರಾಮದ ಗಡಿಯಲ್ಲಿ ತಣಿಮುದ್ದೆಯನ್ನಿಟ್ಟು ಪೂಜಿಸಿ ಹಿಂದಿರುಗಿದರು. ಹೋಗುವಾಗ ತಮಟೆ ಸದ್ದಿನೊಂದಿಗೆ ಹೋಗುವ ಇವರು ಬರುವಾಗ ನಿಶ್ಶಬ್ದವಾಗಿ ಹಿಂದಿರುಗುತ್ತಾರೆ. ಈ ಆಚರಣೆ ಐದು ರಾತ್ರಿಗಳೂ ನಡೆಯುತ್ತವೆ.
‘ಶುಕ್ರವಾರ ಮೊದಲ ಪೂಜೆಯು ಪ್ರಾರಂಭವಾಯಿತು. ಮಂಗಳವಾರಕ್ಕೆ ಈ ಆಚರಣೆ ಮುಗಿಯಲಿದೆ. ಐದನೆಯ ರಾತ್ರಿ ತಣಿಮುದ್ದೆಗಳನ್ನಿಟ್ಟು ಬರುವುದರೊಂದಿಗೆ ಗ್ರಾಮದ ನಾಲ್ಕು ದಿಕ್ಕುಗಳಲ್ಲಿ ಶಾಂತಿ ಪೂಜೆ ಹಾಗೂ ಅಷ್ಟಬಂಧನ ಪೂಜೆಯನ್ನು ನೆರವೇರಿಸುತ್ತಾರೆ.
ಐದೂ ರಾತ್ರಿಗಳ ಆಚರಣೆ ಮುಗಿದ ಮರುದಿನ ನರಿಡಮ್ಮ ಮತ್ತು ಗಂಗಮ್ಮ ದೇವಿಯರನ್ನು ಗ್ರಾಮದಲ್ಲಿ ಮೆರವಣಿಗೆ ಮಾಡುತ್ತಾರೆ. ಪ್ರತಿಯೊಂದು ಮನೆಯವರೂ ತವರಿಂದ ಹೊರಡುವ ಮಗಳಿಗೆ ಮಡಿಲು ತುಂಬಿಸುವಂತೆಯೇ ಕುಪ್ಪಸ, ಸೀರೆ, ಅಕ್ಕಿ, ಕೊಬ್ಬರಿ, ಬೆಲ್ಲ, ಕಡಲೆಪೊಪ್ಪು ಮುಂತಾದವನ್ನಿಟ್ಟು, ಆರತಿ ಬೆಳಗಿ, ಪೂಜಿಸಿ ಗ್ರಾಮದ ಗಡಿಯವರೆಗೂ ತೆರಳಿ ಬೀಳ್ಕೊಟ್ಟು ಬರುತ್ತಾರೆ’ ಎಂದು ಸದ್ದಹಳ್ಳಿಯ ಎಸ್.ಎಂ.ಗೋಪಾಲ್ ವಿವರಿಸಿದರು.
- Advertisement -
- Advertisement -
- Advertisement -
- Advertisement -