ನಗರದ ಬಸ್ ನಿಲ್ದಾಣದಿಂದ ಕೋಟೆ ವೃತ್ತದವರೆಗಿನ ರಸ್ತೆ ವಿಪರೀತವಾಗಿ ಹಾಳಾಗಿದೆ. ಸಂಚಾರಕ್ಕೆ ತೊಂದರೆ ಮತ್ತು ಕಿತ್ತುಹೋದ ರಸ್ತೆಯಿಂದ ಬರುವ ಧೂಳಿನಿಂದ ಜನತೆಯ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಕೂಡಲೇ ರಸ್ತೆ ಡಾಂಬರೀಕರಣ ಕಾಮಗಾರಿ ಶುರು ಮಾಡುವಂತೆ ನಗರಸಭೆ ಪೌರಾಯುಕ್ತರಲ್ಲಿ ಸಾರ್ವಜನಿಕರು ಬುಧವಾರ ಮನವಿ ಮಾಡಿದರು.
ನಗರದ ವಾರ್ಡ್ ಸಂಖ್ಯೆ ೦೧ ಮತ್ತು ೦೨ ರ ನಾಗರಿಕರು ನಗರಸಭೆ ಕಾರ್ಯಾಲಯಕ್ಕೆ ಭೇಟಿ ನೀಡಿ ರಸ್ತೆ ಕಾಮಗಾರಿ ನಡೆಸಿ ಹಾಗೂ ವಾರ್ಡುಗಳಲ್ಲಿ ಸಮರ್ಪಕ ನೀರಿನ ಪೂರೈಕೆ ಆಗುತ್ತಿಲ್ಲ ಈ ಬಗ್ಗೆ ಕೂಡಲೇ ಕ್ರಮ ಜರುಗಿಸಿ ಎಂದು ಒತ್ತಾಯಿಸಿದರು.
ತಮ್ಮನ್ನು ಭೇಟಿ ಮಾಡಿದ ವರ್ತಕರನ್ನು ಹಾಗೂ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಪೌರಾಯುಕ್ತ ಜಿ.ಎನ್.ಚಲಪತಿ, “ನಗರೋತ್ಥಾನ-೩ ಯೋಜನೆಯಡಿ ಈಗಾಗಲೇ ರಸ್ತೆ ಡಾಂಬರೀಕರಣಕ್ಕೆ ಚಾಲನೆ ನೀಡಲಾಗಿದೆ. ಡಾಂಬರೀಕರಣ ಕಾಮಗಾರಿ ನಡೆಸುವ ಮುನ್ನ ಪೈಪ್ ಲೈನ್ ಕಾಮಗಾರಿ ಮಾಡಬೇಕಾಗಿದ್ದರಿಂದ ರಸ್ತೆಯ ಡಾಂಬರೀಕರಣ ಕಾಮಗಾರಿ ತಡವಾಗಿದೆ. ಮುಂದಿನ ಭಾನುವಾರದೊಳಗೆ ರಸ್ತೆ ಡಾಂಬರೀಕರಣ ಕಾಮಗಾರಿ ಶುರುಮಾಡಲು ಕ್ರಮ ಜರುಗಿಸಲಾಗುವುದು” ಎಂದು ಭರವಸೆ ನೀಡಿದರು.
ನಾಗರಿಕರಿಗೆ ಅಗತ್ಯವಿರುವ ಕುಡಿಯುವ ನೀರು ಪೂರೈಕೆ, ರಸ್ತೆ, ಸೇರಿದಂತೆ ಎಲ್ಲಾ ಸವಲತ್ತುಗಳನ್ನು ಕಲ್ಪಿಸಲು ನಗರಸಭೆ ಸಿದ್ದವಾಗಿದ್ದು ವರ್ತಕರು ಟ್ರೇಡ್ ಲೈಸೆನ್ಸ್ ಹಾಗೂ ನಾಗರಿಕರು ಸಕಾಲದಲ್ಲಿ ಬಾಕಿಯಿರುವ ಕಂದಾಯ, ನೀರಿನ ಬಿಲ್ಲು ಪಾವತಿಸಿ ನಗರಸಭೆಗೆ ಸಹಕರಿಸಬೇಕು ಎಂದರು.
ಈ ಸಂದರ್ಭದಲ್ಲಿ ವರ್ತಕರಾದ ಮುನಿರಾಜು, ಮಂಜುನಾಥ್, ಶ್ರೀನಿವಾಸ್, ಇಸ್ಮಾಯಿಲ್, ರಮೇಶ್, ನಗರಸಭಾ ಸದಸ್ಯ ಕಿಶನ್ ಹಾಜರಿದ್ದರು.
- Advertisement -
- Advertisement -
- Advertisement -