ನಗರದ ತಾಲ್ಲೂಕು ಕಚೇರಿಯ ಮುಂಭಾಗದಲ್ಲಿ ದಲಿತ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳೊಂದಿಗೆ ಕೆಲ ಕಾಲ ಪ್ರತಿಭಟನೆ ನಡೆಸಿ ತ್ವರಿತವಾಗಿ ಅಂಬೇಡ್ಕರ್ ಭವನಕ್ಕೆ ಸ್ಥಳ ಗುರುತಿಸುವುದು ಸೇರಿದಂತೆ ಅಂಬೇಡ್ಕರ್ ಜಯಂತಿಗೆ ಮೊದಲು ಭವನ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸುವಂತೆ ಒತ್ತಾಯಿಸಿ ತಹಶೀಲ್ದಾರ್‌ರಿಗೆ ಮನವಿ ಪತ್ರ ಸಲ್ಲಿಸಿ ದಲಿತ ಸಂಘಟನೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಈಧರೆ ಪ್ರಕಾಶ್ ಮಾತನಾಡಿದರು.
ದಲಿತ ಸಂಘಟನೆಗಳ ಒಕ್ಕೂಟ ವತಿಯಿಂದ ನಿರಂತರವಾಗಿ ಹೋರಾಟಗಳು ಹಮ್ಮಿಕೊಳ್ಳುವ ಮೂಲಕ ಡಾ.ಬಿ.ಆರ್ ಅಂಬೇಡ್ಕರ್ ಭವನಕ್ಕೆ ನಗರದ ಹೃದಯಭಾಗದಲ್ಲಿ ಸ್ಥಳ ಗುರ್ತಿಸಿ ಕೊಡುವಂತೆ ತಾಲ್ಲೂಕು ಆಡಳಿತಕ್ಕೆ ಹಲವಾರು ಮನವಿಗಳನ್ನು ಸಲ್ಲಿಸಲಾಗಿದೆ. ಕಳೆದ ಮೂವತ್ತು ವರ್ಷಗಳಿಂದ ನಿರಂತರವಾಗಿ ಹೋರಾಟಗಳನ್ನು ಮಾಡುತ್ತಾ ಬಂದಿದ್ದರೂ ತಾಲ್ಲೂಕು ಕೇಂದ್ರ ಸ್ಥಾನದಲ್ಲಿ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಭವನ ನಿರ್ಮಿಸದೇ ಇರುವುದು ಕ್ಷೇತ್ರದ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯವನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿದರು.
ಶಾಸಕರು ಸೇರಿದಂತೆ ಸಂಸದರ ಬಳಿ ಹಲವಾರು ಬಾರಿ ಈ ಬಗ್ಗೆ ಚರ್ಚೆ ಮಾಡಿದಾಗ ಅಧಿಕಾರಿಗಳಿಗೆ ಆ ತಕ್ಷಣಕ್ಕೆ ಸ್ಥಳ ಗುರುತಿಸುವಂತೆ ಸೂಚನೆ ನೀಡುತ್ತಾರಾದರೂ ಯಾವುದೇ ಪ್ರಯೋಜನವಾಗಿಲ್ಲ. ನಗರದ ತೋಟಗಾರಿಕೆ ಇಲಾಖೆ ಆವರಣದಲ್ಲಿನ ಖಾಲಿ ಜಾಗದಲ್ಲಿ ಅಂಬೇಡ್ಕರ್ ಭವನ ನಿರ್ಮಿಸಲು ಸ್ಥಳ ಗುರುತಿಸಲು ಈ ಹಿಂದೆ ಸಂಸದರು ಅಧಿಕಾರಿಗಳಿಗೆ ಸೂಚಿಸಿದ್ದರು. ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಅಧಿಕಾರಿಗಳು ತೋರುತ್ತಿರುವ ನಿರ್ಲಕ್ಷ್ಯವನ್ನು ಖಂಡಿಸಿ ಇದೇ ಏಪ್ರಿಲ್ 8 ರ ಗುರುವಾರದಿಂದ ದಲಿತ ಸಂಘಟನೆಗಳ ಒಕ್ಕೂಟದಿಂದ ಅನಿರ್ಧಿಷ್ಟಕಾಲ ಉಪವಾಸ ಸತ್ಯಾಗ್ರಹವನ್ನು ಮಾಡಲು ತೀರ್ಮಾನಿಸಲಾಗಿದೆ. ಮುಂಬರುವ ಅಂಬೇಡ್ಕರ್ ಜಯಂತಿಗೆ ಮೊದಲು ಅಂಬೇಡ್ಕರ್ ಭವನಕ್ಕೆ ಸ್ಥಳ ಮಂಜೂರು ಮಾಡುವುದು ಸೇರಿದಂತೆ ನಿರ್ಮಾಣ ಕಾರ್ಯಕ್ಕೆ ಗುದ್ದಲಿಪೂಜೆ ನೆರವೇರಿಸಬೇಕು. ಇಲ್ಲವಾದಲ್ಲಿ ಈ ಭಾರಿಯ ಅಂಬೇಡ್ಕರ್ ಜಯಂತಿ ಆಚರಿಸುವ ಅಗತ್ಯವಿಲ್ಲ, ಅಂಬೇಡ್ಕರ್ ಭವನ ನಿರ್ಮಾನಕ್ಕೆ ಮುಂದಾಗುವವರೆಗೂ ಉಪವಾಸ ಸತ್ಯಾಗ್ರಹ ಮುಂದುವರೆಯಲಿದೆ ಎಂದು ಎಚ್ಚರಿಸಿ ತಹಶೀಲ್ದಾರ್ ಬಿ.ಎಸ್.ರಾಜೀವ್ ರಿಗೆ ಮನವಿ ಪತ್ರ ಸಲ್ಲಿಸಿದರು.
ಮನವಿ ಪತ್ರವನ್ನು ಸ್ವೀಕರಿಸಿದ ತಹಶೀಲ್ದಾರ್ ಬಿ.ಎಸ್.ರಾಜೀವ್ ಮಾತನಾಡಿ ಈಗಾಗಲೇ ಉಪವಿಭಾಗಾಧಿಕಾರಿಗಳು ಸೇರಿದಂತೆ ಸಂಬಂದಪಟ್ಟ ಇಲಾಖೆಯವರಿಗೆ ಸ್ಥಳ ಮಂಜೂರು ಮಾಡಲು ಪ್ರಸ್ತಾವನೆ ಕಳುಹಿಸಲಾಗಿದೆ. ಮತ್ತೊಮ್ಮೆ ತಾವು ನೀಡಿರುವ ಮನವಿಯನ್ನು ಮೇಲಾಧಿಕಾರಿಗಳಿಗೆ ಕಳುಹಿಸಿ ಅಗತ್ಯ ಕ್ರಮ ಜರುಗಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ದಲಿತ ಸಂಘಟನೆಗಳ ಒಕ್ಕೂಟದ ಮುಖಂಡರಾದ ಕೆ.ಎಸ್ ದ್ಯಾವಕೃಷ್ಣಪ್ಪ, ಎನ್.ಎಸ್.ಯು.ಐ ರಾಜ್ಯ ಸಂಚಾಲಕ ಕೆ.ಎನ್.ಮುನೀಂದ್ರ, ತಾತಹಳ್ಳಿ ಚಲಪತಿ, ದೇವರಮಳ್ಳೂರು ಕೃಷ್ಣಪ್ಪ, ಜೆ.ವೆಂಕಟಾಪುರ ವಿಜಯಕುಮಾರ, ಭಕ್ತರಹಳ್ಳಿ ಪ್ರತೀಶ್, ಬೈಯಪ್ಪನಹಳ್ಳಿ ಗುರುಮೂರ್ತಿ, ಡಿ.ಸಿ.ನರಸಿಂಹಮೂರ್ತಿ, ಮುನಿಕೃಷ್ಣ, ಶಂಕರ, ಮೂರ್ತಿ, ಕನ್ನಪನಹಳ್ಳಿ ರಾಮಾಂಜಿನಪ್ಪ ಹಾಜರಿದ್ದರು.