ನಗರದ ತಾಲ್ಲೂಕು ಕಚೇರಿಯಲ್ಲಿ ಮಂಗಳವಾರ ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ಕದಸಂಸ ಪದಾಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಕದಸಂಸ ಜಿಲ್ಲಾ ಸಂಘಟನಾ ಸಂಚಾಲಕ ದಡಂಘಟ್ಟ ತಿರುಮಲೇಶ್ ಮಾತನಾಡಿದರು.
ತಾಲ್ಲೂಕು ಕೇಂದ್ರ ಸ್ಥಾನದಲ್ಲಿ ಅಂಬೇಡ್ಕರ್ ಭವನ ನಿರ್ಮಿಸಲು ಈಗಾಗಲೇ ಗುರುತಿಸಲಾಗಿರುವ ನಾಲ್ಕು ಸ್ಥಳಗಳ ಪೈಕಿ ಒಂದನ್ನು ಆಯ್ಕೆ ಮಾಡಿ, ಕೂಡಲೇ ಸರ್ಕಾರಕ್ಕೆ ಕಳುಹಿಸುವಂತೆ ಅವರು ಒತ್ತಾಯಿಸಿದರು.
ಕಳೆದ ಕೆಲ ವರ್ಷಗಳಿಂದ ದಲಿತರ ಏಳಿಗೆಗಾಗಿ ಸ್ವಾತಂತ್ರ್ಯ ದಿನಾಚರಣೆ ವಿರೋಧಿಸಿ ಸಂಘಟನೆಯಿಂದ ನಡೆಸುತ್ತಾ ಬಂದಿದ್ದ ಪ್ರತಿಭಟನೆಯನ್ನು ಈ ಬಾರಿ ನಡೆಸಲಿಲ್ಲ. ನಮ್ಮ ಬೇಡಿಕೆಗಳನ್ನು ತಾಲ್ಲೂಕು ಆಡಳಿತಕ್ಕೆ ನೀಡಿದಲ್ಲಿ ಬಗೆಹರಿಸಲಾಗುವುದು ಎಂಬ ಜಿಲ್ಲಾಧಿಕಾರಿಗಳ ಸೂಚನೆಯ ಮೇರೆಗೆ ತಹಶೀಲ್ದಾರ್‌ರನ್ನು ಭೇಟಿ ಮಾಡಿ ಈಗಾಗಲೇ ಕೇಂದ್ರ ಸ್ಥಾನದಲ್ಲಿ ಅಂಬೇಡ್ಕರ್ ಭವನ ನಿರ್ಮಿಸಲು ನಾಲ್ಕು ಸ್ಥಳಗಳನ್ನು ಗುರುತಿಸಲಾಗಿದ್ದು ಸೂಕ್ತ ಸ್ಥಳವನ್ನು ಆಯ್ಕೆ ಮಾಡಿ ತಾಲ್ಲೂಕು ಆಡಳಿತ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕೆಂದರು.
ತಾಲ್ಲೂಕಿನ ಬಶೆಟ್ಟಹಳ್ಳಿ ಹೋಬಳಿಯ ಸೀತಹಳ್ಳಿ ಗ್ರಾಮದ ಸರ್ವೇ ನಂ 29 ರಲ್ಲಿರುವ 23 ಗುಂಟೆ ಸರ್ಕಾರಿ ಗೋಮಾಳ ಜಮೀನಿನಲ್ಲಿ ಮೂರು ವರ್ಷಗಳಿಮದ ಗುಡಿಸಲು ಹಾಕಿಕೊಂಡು ಜೀವನ ನಡೆಸುತ್ತಿರುವವರಿಗೆ ಕೂಡಲೇ ಮನೆ ನಿರ್ಮಾಣ ಮಾಡಿಕೊಡಬೇಕು. ತಾಲ್ಲೂಕಿನಾದ್ಯಂತ ಒತ್ತುವರಿಯಾಗಿರುವ ಪರಿಶಿಷ್ಠ ಜಾತಿ ಹಾಗೂ ಪಂಗಡದ ಸ್ಮಶಾನಗಳನ್ನು ಕೂಡಲೇ ತೆರವುಗೊಳಿಸಬೇಕು. ದಲಿತ ಕೇರಿಗಳಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟವನ್ನು ಕೂಡಲೇ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ತಹಶೀಲ್ದಾರ್ ಕೆ.ಅರುಂಧತಿ ಮಾತನಾಡಿ, ಅಂಬೇಡ್ಕರ್ ಭವನ ನಿರ್ಮಾಣ ಹಾಗೂ ಗುಡಿಸಲು ವಾಸಿಗಳಿಗೆ ಸೂರು ಕಲ್ಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕದಸಂಸ ಜಿಲ್ಲಾ ಸಂಚಾಲಕ ಮೇಲೂರು ಮಂಜುನಾಥ್, ತಾಲ್ಲೂಕು ಸಂಘಟನಾ ಸಂಚಾಲಕ ಯಣ್ಣಂಗೂರು ಸುಬ್ರಮಣಿ, ಪದಾಧಿಕಾರಿಗಳಾದ ದಿಬ್ಬೂರಹಳ್ಳಿ ಗೊರ‍್ಲಪ್ಪ, ಲೋಕೆಶ್, ಚಂದಗಾನಹಳ್ಳಿ ವೆಂಕಟೇಶ್, ದಬರಗಾನಹಳ್ಳಿ ರಾಜಪ್ಪ ಹಾಜರಿದ್ದರು.