ಶಿಡ್ಲಘಟ್ಟ ನಗರದ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಮಂಗಳವಾರ ವೈದ್ಯರ ನಡೆ ಹಳ್ಳಿಯ ಕಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ತಹಶೀಲ್ದಾರ್ ರಾಜೀವ್ ಮಾತನಾಡಿದರು.
ತಾಲ್ಲೂಕಿನ ಹಾಟ್‌ಸ್ಪಾಟ್ ಹಾಗೂ ಕೆಂಪು ವಲಯದಲ್ಲಿ ಹೊಸದಾಗಿ ಸೋಂಕಿನ ಪ್ರಕರಣಗಳು ಕಂಡುಬಂದ ತಕ್ಷಣ ಅಲ್ಲಿಗೆ ತಾಲ್ಲೂಕು ಆರೋಗ್ಯಾಧಿಕಾರಿ ಸೇರಿದಂತೆ ಆರೋಗ್ಯ ಸಿಬ್ಬಂದಿ ತಂಡ ಭೇಟಿ ನೀಡಿ ಪರೀಕ್ಷೆ ನಡೆಸಲಾಗುತ್ತದೆ. ಸೋಂಕು ದೃಢವಾದಲ್ಲಿ ಅವರ ಪ್ರಾಥಮಿಕ ಸಂಪರ್ಕದಲ್ಲಿ ಇರುವವರನ್ನು ಸಹ ಪರೀಕ್ಷೆ ಮಾಡಿಸಲಾಗುತ್ತದೆ. ತಕ್ಷಣದಿಂದಲೇ ಅವರಿಗೆ ಕೋವಿಡ್ ಕೇರ್ ಸೆಂಟರಿಗೆ ದಾಖಲಿಸಿ ಚಿಕಿತ್ಸೆ ನೀಡಲು ಪ್ರಾರಂಭಿಸಲಾಗುತ್ತದೆ.
ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುತ್ತಿದ್ದು, ವೈದ್ಯರ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ಮೂಲಕ ಸೋಂಕು ಕಡಿಮೆ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಆರೋಗ್ಯ ಸಿಬ್ಬಂದಿಯೊಂದಿಗೆ ಹೊಸಪೇಟೆ ಮತ್ತು ಜಂಗಮಕೋಟೆ ಗ್ರಾಮಗಳಿಗೆ ಭೇಟಿ ನೀಡಿ ಗ್ರಾಮದ ಜನರ ಕೊರೊನಾ ಪರೀಕ್ಷೆ ಹಾಗೂ ಜಾಗ್ರತಿ ಕಾರ್ಯಕ್ರಮಕ್ಕೆ ಸಹ ಅವರು ಚಾಲನೆ ನೀಡಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಮಾತನಾಡಿ, ಈಗ ಸ್ವಲ್ಪ ಪ್ರಮಾಣದಲ್ಲಿ ಸೋಂಕು ಇಳಿಕೆ ಕಾಣುತ್ತಿದೆ. ಆದರೂ ಎಚ್ಚರಿಕೆಯಿಂದ ಇರುವುದು ಅಗತ್ಯ. ಯಾವುದೇ ಗ್ರಾಮದಲ್ಲಿ ಪರೀಕ್ಷೆ ಮಾಡಲು ಸಹ ನಮ್ಮ ತಂಡ ಸಿದ್ಧವಿದೆ. ಕೊರೊನಾ ಲಕ್ಷಣ ಕಂಡುಬಂದಲ್ಲಿ ಕೂಡಲೇ ತಪಾಸಣೆ ಮಾಡಿಸಬೇಕು. ಪಂಚಾಯಿತಿ ವ್ಯಾಪ್ತಿಯಲ್ಲಿ ಸೋಂಕು ಕಾಣಿಸಿಕೊಂಡ ಕೂಡಲೇ ಆ ಗ್ರಾಮದಲ್ಲಿ ಸ್ಯಾನಿಟೈಜ್ ಮಾಡುವ ಜೊತೆಗೆ ಮುಂಜಾಗ್ರತಾ ಕ್ರಮವಹಿಸಲಾಗುತ್ತದೆ. ಸೋಂಕಿತ ವ್ಯಕ್ತಿಗಳನ್ನು ಕೋವಿಡ್ ಆರೈಕೆ ಕೇಂದ್ರಕ್ಕೆ ಕಳಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಸುರೇಶ್ ಅವರು ಪೊಲೀಸ್ ಎಸ್.ಪಿ ಅವರ ಆದೇಶದಂತೆ ಮೂರು ಓಮ್ನಿ ವಾಹನಗಳನ್ನು ಬಾಡಿಗೆಗೆ ಮಾತನಾಡಿ ವೈದ್ಯರ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ಸಲುವಾಗಿ ಹಳ್ಳಿಗಳಿಗೆ ವೈದ್ಯರು ಹೋಗಲು ಅನುಕೂಲವಾಗಲೆಂದು ವ್ಯವಸ್ಥೆ ಮಾಡಿದರು.
ಡಾ.ಸುಂದರ್ ರಾಜ್, ಆಸ್ಪತ್ರೆಯ ಸಿಬ್ಬಂದಿ ಲೋಕೇಶ್, ವಿಜಯಮ್ಮ, ದೇವರಾಜು, ನಂದಿನಿ, ಕೇರ್ತಿ, ಮಂಜುನಾಥ್, ನವೀನ್, ಸುನಿಲ್, ಮಂಗಳಾ, ಮುನಿರತ್ನಮ್ಮ, ಯಶೋದಾ, ಅನೀತಾ, ರಾಧಾ ಹಾಜರಿದ್ದರು.
Follow ನಮ್ಮ ಶಿಡ್ಲಘಟ್ಟ on
Facebook: https://www.facebook.com/sidlaghatta
Twitter: https://twitter.com/hisidlaghatta
Instagram: https://www.instagram.com/sidlaghatta
Telegram: https://t.me/Sidlaghatta
WhatsApp: https://wa.me/917406303366?text=Hi