Sidlaghatta : ಮಹಾತ್ಮಾ ಗಾಂಧೀಜಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅವರ ವ್ಯಕ್ತಿತ್ವಗಳನ್ನು ಅರಿಯಲು ಅವರ ಪುಸ್ತಕಗಳನ್ನು ಓದಬೇಕು. ಅವರ ಬರಹಗಳ ಮೂಲಕ ಅವರ ವ್ಯಕ್ತಿತ್ವವನ್ನು ನಾವು ದಕ್ಕಿಸಿಕೊಳ್ಳಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ನರೇಂದ್ರ ಕುಮಾರ್ ತಿಳಿಸಿದರು.
ನಗರದ ಡಾಲ್ಫಿನ್ ವಿದ್ಯಾಸಂಸ್ಥೆಯಲ್ಲಿ ಭಾನುವಾರ ಶಿಡ್ಲಘಟ್ಟ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸ್ವಾತಂತ್ರ್ಯೋತ್ಸವದ ಅಂಗವಾಗಿ ತಾಲ್ಲೂಕಿನ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನ ಶಿಲ್ಪಿ ಮತ್ತು ದಮನಿತರ ಸಬಲೀಕರಣದ ನೇತಾರ ಅಷ್ಟೇ ಅಲ್ಲ, ಪತ್ರಿಕಾ ವೃತ್ತಿ ಕೂಡ ಅವರ ವ್ಯಕ್ತಿತ್ವದ ಭಾಗವಾಗಿತ್ತು. ತಮ್ಮ ಚಿಂತನೆಗಳನ್ನು ಸಮಾಜಕ್ಕೆ ಮುಟ್ಟಿಸುತ್ತಿದ್ದುದೇ ಅವರು ನಡೆಸುತ್ತಿದ್ದ ಪತ್ರಿಕೆಗಳ ಮೂಲಕ ಎಂದು ಹೇಳಿದರು.
ಗಾಂಧೀಜಿ ಜಗತ್ತು ಕಂಡ ಶ್ರೇಷ್ಠ ಪತ್ರಕರ್ತರಲ್ಲೊಬ್ಬರು. ಅವರು ತಮ್ಮ ಜೀವಿತಾವಧಿಯಲ್ಲಿ ಅತ್ಯಂತ ಹೆಚ್ಚು ಕಾಲ ತೊಡಗಿಸಿಕೊಂಡ ಕೆಲಸವೆಂದರೆ ಅದು ಪತ್ರಿಕಾ ಬರವಣಿಗೆ. ಗಾಂಧೀಜಿ ಅವರ ಸಮಗ್ರ ಬರವಣಿಗೆಯ ನೂರು ಸಂಪುಟಗಳನ್ನು ಕೇಂದ್ರ ಸರ್ಕಾರ ಹೊರತಂದಿದ್ದು, ಯಾವುದೇ ದೇಶದ ಮುದ್ರಣ ಚರಿತ್ರೆಯಲ್ಲಿ ಅದೊಂದು ಮೈಲಿಗಲ್ಲು. ಗಾಂಧೀಜಿ ತಮ್ಮ ಪತ್ರಿಕೆಯ ಮೂಲಕ ನೀಡುತ್ತಿದ್ದ ಕರೆ ಇಡೀ ದೇಶದ ಜನರನ್ನು ಬಡಿದೆಬ್ಬಿಸುತ್ತಿತ್ತು ಎಂದು ವಿವರಿಸಿದರು.
“ನಾನು ಕಂಡಂತೆ ಮಹಾತ್ಮ ಗಾಂಧಿ ಅವರೊಳಗಿನ ಪತ್ರಕರ್ತ” ಮತ್ತು “ನಾನು ಕಂಡಂತೆ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರೊಳಗಿನ ಪತ್ರಕರ್ತ” ಎಂಬ ಎರಡು ವಿಷಯಗಳಲ್ಲಿ ಒಂದನ್ನು ಆಯ್ದುಕೊಂಡು ತಾಲ್ಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳು ಪ್ರಬಂಧ ಬರೆದರು.
ಡಾಲ್ಫಿನ್ ವಿದ್ಯಾಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅಶೋಕ್, ಶಿಡ್ಲಘಟ್ಟ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಮಂಜುನಾಥ್, ಗೌರವಾಧ್ಯಕ್ಷ ಕೆ.ವಿ.ಮುನೇಗೌಡ, ಸದಸ್ಯರಾದ ಎ.ಶಶಿಕುಮಾರ್, ಡಿ.ಜಿ.ಮಲ್ಲಿಕಾರ್ಜುನ, ಮಿಥುನ್ ಕುಮಾರ್, ನಾಗರಾಜ್, ಶಿಕ್ಷಕರಾದ ರುದ್ರೇಶಮೂರ್ತಿ, ಕಲಾಧರ್ ಹಾಜರಿದ್ದರು.