Sidlaghatta : ಮಕ್ಕಳ ದಿಸೆಯಿಂದಲೇ ಸದೃಢವಾದ ದೇಹಾರೋಗ್ಯ ಮತ್ತು ಮಾನಸಿಕ ಆರೋಗ್ಯವನ್ನು ಹೊಂದಲು ಸಮತೋಲನ ಆಹಾರ ಸೇವನೆ ಮೂಲಕ ಪೋಷಣೆ ಅಗತ್ಯ. ಆ ಮೂಲಕ ಅಪೌಷ್ಟಿಕತೆಯನ್ನು ಹೋಗಲಾಡಿಸಬೇಕು ಎಂದು ತಾಲ್ಲೂಕು ಪಂಚಾಯಿತಿ ಇಓ ಜಿ.ಮುನಿರಾಜು ತಿಳಿಸಿದರು.
ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲಾಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಮುದ್ದೇನಹಳ್ಳಿ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ ಹಾಗು KMF ವತಿಯಿಂದ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳಿಗೆ ಕ್ಷೀರಭಾಗ್ಯ ಯೋಜನೆಯೊಂದಿಗೆ ಹಾಲು ಮಿಶ್ರಿತ ಸಾಯಿಶ್ಯೂರ್ ರಾಗಿಮಿಕ್ಸ್ ವಿತರಣಾ ಆರಂಭೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ರಾಗಿ ಹೆಲ್ತ್‌ಮಿಕ್ಸ್‌ನಲ್ಲಿ ಬಹುಪೋಷಕಾಂಶಗಳಿದ್ದು, ಗ್ರಾಮೀಣಭಾಗದ ಮಕ್ಕಳಿಗೆ ಉಪಯುಕ್ತವಾದುದು. ಸರ್ಕಾರವು ಮಕ್ಕಳ ಹಾಜರಾತಿ ಹೆಚ್ಚಳಕ್ಕೆ, ಅಪೌಷ್ಟಿಕತೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಜಾರಿಗೊಳಿಸಿರುವ ಕ್ಷೀರಭಾಗ್ಯ, ಬಿಸಿಯೂಟದಂತಹ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಅತಿಯಾದ ಮೊಬೈಲ್ ಬಳಕೆಯಂತಹ ಚಟಗಳಿಗೆ ಬಲಿಯಾಗಬಾರದು. ಪುಸ್ತಕಗಳನ್ನು ಓದುವ ಹವ್ಯಾಸವನ್ನು ಹೆಚ್ಚಿಸಿಕೊಳ್ಳಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎ.ನರೇಂದ್ರಕುಮಾರ್ ಮಾತನಾಡಿ, ವಿದ್ಯಾರ್ಥಿಗಳ ಕಲಿಕೆಯಮೇಲೆ ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯತೆಯು ಹೆಚ್ಚು ಪ್ರಭಾವ ಬೀರುವುದರಿಂದ ಆರೋಗ್ಯದ ಕಡೆಗೆ ಹೆಚ್ಚು ಗಮನವಹಿಸಬೇಕು. ಅನೇಕ ಅತ್ಯಗತ್ಯ ಸೂಕ್ಷ್ಮಪೋಷಕಾಂಶಗಳೂ ಸೇರಿದಂತೆ ಖನಿಜಾಂಶಗಳು, ಸಮತೋಲನ ಆಹಾರಾಂಶಗಳು ರಾಗಿ ಹೆಲ್ತ್‌ಮಿಕ್ಸ್ ಮೂಲಕ ದೊರೆಯಲಿರುವುದರಿಂದ ಮಕ್ಕಳು ಖುಷಿಯಿಂದ ಸೇವಿಸಬೇಕು. ಮಕ್ಕಳ ಸರ್ವತೋಮುಖ ಪ್ರಗತಿಗೆ ಪೂರಕವಾಗಿ ಸರ್ಕಾರವು ಒದಗಿಸುವ ಎಲ್ಲಾ ಸೌಲಭ್ಯಗಳ ಪ್ರಯೋಜನವನ್ನು ಪಡೆಯಬೇಕು ಎಂದರು.
ತಾಲ್ಲೂಕು ಅಕ್ಷರದಾಸೋಹ ಬಿಸಿಯೂಟ ಯೋಜನೆಯ ಸಹಾಯಕ ನಿರ್ದೇಶಕ ಆಂಜನೇಯ ಮಾತನಾಡಿ, ಬಿಸಿಯೂಟ, ಕ್ಷೀರಭಾಗ್ಯ ಯೋಜನೆಯ ಜೊತೆಗೆ ನಮ್ಮ ಜಿಲ್ಲೆಯಲ್ಲಿ ಕಳೆದ ಅನೇಕ ವರ್ಷಗಳಿಂದಲೂ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ ಸಹಕಾರದಲ್ಲಿ ಸಾಯಿಶ್ಯೂರ್ ಪ್ರೋಟೀನ್‌ಮಿಕ್ಸ್‌ನ್ನು ಹಾಲಿನೊಂದಿಗೆ ಬೆರೆಸಿ ಕೊಡಲಾಗುತ್ತಿದೆ. ಅದರ ಜೊತೆಗೆ ಇದೀಗ ರಾಗಿ ಹೆಲ್ತ್‌ಮಿಕ್ಸ್ ನೀಡಲಾಗುತ್ತಿದ್ದು ತಪ್ಪದೇ ಮಕ್ಕಳು ಖುಷಿಯಿಂದ ಕುಡಿಯಬೇಕು. ಬಿಸಿಯೂಟ ತಿನ್ನುವ ವೇಳೆ ಬೇಳೆ, ತರಕಾರಿ ಮತ್ತಿತರ ಪೋಷಕಾಂಶವುಳ್ಳ ವಸ್ತುಗಳನ್ನು ತಪ್ಪದೇ ತಿನ್ನಬೇಕು. ಉತ್ತಮ ಆರೋಗ್ಯವನ್ನು ಕಾಯ್ದುಕೊಳ್ಳಬೇಕು ಎಂದರು. ಬಿಸಿಯೂಟ ಅಡುಗೆ ಸಿಬ್ಬಂದಿಗೆ ರಾಗಿ ಹೆಲ್ತ್ ಮಿಕ್ಸ್ ಮಿಶ್ರಿತ ಹಾಲು ತಯಾರಿಸುವ ಬಗ್ಗೆ ವಿವರಿಸಲಾಯಿತು.
ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಎನ್.ಸುಬ್ಬಾರೆಡ್ಡಿ, ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಎಲ್.ವಿ.ವೆಂಕಟರೆಡ್ಡಿ, ಕಾರ್ಯದರ್ಶಿ ಎಚ್.ಎಸ್.ರುದ್ರೇಶಮೂರ್ತಿ, ಶಿಕ್ಷಣ ಸಂಯೋಜಕ ಇ.ಭಾಸ್ಕರಗೌಡ, ಬಿಆರ್‌ಸಿ ಸಮನ್ವಯಾಧಿಕಾರಿ ತ್ಯಾಗರಾಜು, ಬಿ.ಆರ್.ಪಿ ಗಳಾದ ಕೆ.ಮಂಜುನಾಥ್, ಲಕ್ಷ್ಮಿನಾರಾಯಣ್, ಚಂದ್ರಕಲಾ, ವೇಣುಮಾಧವಿ, ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಇಶ್ರತ್, ಜಿಲ್ಲಾ ಪ್ರೌಢಶಾಲಾ ಸಹಶಿಕ್ಷಕರ ಖಜಾಂಚಿ ಗೋಪಾಲಕೃಷ್ಣ, ಶಿಕ್ಷಕಿ ಕಮಲಮ್ಮ, ಅನ್ನಪೂರ್ಣ ಹಿರೇಮಠ್, ಶಿಕ್ಷಕ ಸತೀಶ್, ಮತ್ತಿತರರು ಹಾಜರಿದ್ದರು.