Muttur, Sidlaghatta: ಶಿಡ್ಲಘಟ್ಟ ತಾಲ್ಲೂಕಿನ ಮುತ್ತೂರು ಗ್ರಾಮದ ವೀರಾಂಜನೇಯ ಸಭಾಂಗಣದಲ್ಲಿ ದಿ.ಸಂಜಯ್ ದಾಸ್ ಗುಪ್ತ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ “ಮುತ್ತೂರಿನ ಇತಿಹಾಸ” (Mutturina Itihasa) ಪುಸ್ತಕವನ್ನು ಬಿಡುಗಡೆ ಮಾಡಿ ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ಅವರು ಮಾತನಾಡಿದರು.
ಗ್ರಾಮೀಣಾಭಿವೃದ್ಧಿ ಆಗಬೇಕೆಂದರೆ ಶಿಕ್ಷಣ, ಆರೋಗ್ಯ, ನೈರ್ಮಲ್ಯ, ಸಹಜೀವನ, ಸೌಹಾರ್ಧತೆ ಮತ್ತು ಸಹಭಾಗಿತ್ಯ ಮುಖ್ಯವೇ ಹೊರತು, ಜಾತಿ-ಭೇಧ, ಬಡವ-ಶ್ರೀಮಂತ, ಜಾತಿ, ರಾಜಕೀಯಗಳಲ್ಲ ಎಂದು ತಿಳಿಸಿದರು.
ಮುತ್ತೂರಿನಂತೆಯೇ ಪ್ರತಿಯೊಂದು ಗ್ರಾಮಕ್ಕೂ ಇತಿಹಾಸವಿರುತ್ತದೆ. ಇತಿಹಾಸವನ್ನು ದಾಖಲಿಸಿ ವರ್ತಮಾನವನ್ನು ಉಜ್ವಲಗೊಳಿಸುವ ಕೆಲಸವಾಗಬೇಕು. ಗ್ರಾಮದ ಅಭಿವೃದ್ಧಿಯಲ್ಲಿ ಒಡಕು ಇಲ್ಲದಿದ್ದರೆ ಗ್ರಾಮವು ನಿಜವಾದ ಮುತ್ತಾಗುತ್ತದೆ. ಇಲ್ಲದಿದ್ದರೆ ಒಡೆದ ಮುತ್ತಾಗುತ್ತದೆ. ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡರೆ ನಿಜಕ್ಕೂ ಗ್ರಾಮಗಳನ್ನು ಸುಂದರವಾಗಿಸಲು ಸಾಧ್ಯವಿದೆ. ಜನಸಂಖ್ಯೆ ಹೆಚ್ಚಿದಂತೆ ನಿವೇಶನದ ಸಮಸ್ಯೆಯೂ ಹೆಚ್ಚಿದೆ. ಆದರೂ ಪ್ರತಿಯೊಂದು ಸಮಸ್ಯೆಗೂ ಪರಿಹಾರವಿದೆ ಎಂದರು.
ಪಶ್ಚಿಮ ಬಂಗಾಳ ಮೂಲದ ಐ.ಎ.ಎಸ್ ಅಧಿಕಾರಿ ಸಂಜಯ್ ದಾಸ್ ಗುಪ್ತ ಅವರು ಕೋಲಾರದ ಜಿಲ್ಲಾಧಿಕಾರಿಯಾಗಿದ್ದಾಗ ಮುತ್ತೂರಿನ ಗ್ರಾಮದಲ್ಲಿ ಕೃಷಿ ಮೇಳ ನಡೆಸಿದ್ದಲ್ಲದ ಗ್ರಾಮಸ್ಥರೊಂದಿಗೆ ಅವಿನಾಭಾವ ಸಂಬಂಧವನ್ನಿರಿಸಿಕೊಂಡಿದ್ದರು. ಅವರು ನಮ್ಮನ್ನಗಲಿ 17 ವರ್ಷ ಕಳೆದರೂ ಈಗಲೂ ಗ್ರಾಮಸ್ಥರು ಅವರನ್ನು ನೆನೆಯುತ್ತಿರುವುದು ಹಾಗೂ ಅವರ ಕುಟುಂಬದವರು ಮುತ್ತೂರಿನಲ್ಲಿ ನಡೆಸುವ ಸೇವಾ ಕಾರ್ಯಗಳು ನೋಡಿದಾಗ ರಕ್ತ ಬಂಧುಗಳನ್ನು ಮೀರಿ ಮನುಷ್ಯ ಸಂಬಂಧಗಳು ಹೆಚ್ಚು ಎಂಬುದು ತಿಳಿಯುತ್ತದೆ. ಈ ಮನುಷ್ಯ ಸಂಬಂಧಗಳು ಸಮಾಜವನ್ನು ಕಟ್ಟುವಂತಹವು ಎಂದರು.
ಖಾಸಗಿ ಶಾಲೆಗಳಿಗೆ ಹೆಚ್ಚು ಹಣ ಸುರಿದು ಮಕ್ಕಳನ್ನು ಕಳಿಸುವುದರಿಂದ ಅವರು ಇಂಗ್ಲಷ್ ಭಾಷೆ ಕಲಿತ್ತಾರೆಯಷ್ಟೇ ಹೊರತು ಜ್ಞಾನ ಸಂಪಾದಿಸುವುದಿಲ್ಲ. ಕನ್ನಡ ಮಾಧ್ಯಮದಲ್ಲಿ ಕಲಿತು ಸಾಧನೆ ಮಾಡಲು ಸಾಧ್ಯವಿದೆ. ಹತ್ತನೇ ತರಗತಿಯವರೆಗೂ ಮಕ್ಕಳನ್ನು ಗ್ರಾಮದಲ್ಲಿರುವ ಸರ್ಕಾರಿ ಶಾಲೆಯಲ್ಲಿ ಓದಿಸಿ. ಖಾಸಗಿ ಶಾಲೆಗ ಝರ್ಚು ಮಾಡುವ ಹಣದಲ್ಲಿ ಅಲ್ಪ ಭಾಗವನ್ನು ಸರ್ಕಾರಿ ಶಾಲೆಗೆ ಖರ್ಚು ಮಾಡಿ ಬೆಳೆಸಿ, ಉಳಿಸಿ ಎಂದು ಹೇಳಿದರು.
ಮಳ್ಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಬೈರೇಗೌಡ, ಶಾಂಗೋನ್ ದಾಸ್ ಗುಪ್ತ, ಕೆಂಪೇಗೌಡ, ವೇಣುಗೋಪಾಲ್ ಕೃಷ್ಣಮಾಚಾರ್, ವೆಂಕಟೇಶಮೂರ್ತಿ, ಸಲೀಂ ಅನ್ಸಾರಿ, ಗ್ರಾಮಾಂತರ ಟ್ರಸ್ಟ್ ನ ಉಷಾಶೆಟ್ಟಿ ಹಾಜರಿದ್ದರು.