
Sidlaghatta : ಶಿಡ್ಲಘಟ್ಟ ನಗರದಾಧ್ಯಂತ ರಸ್ತೆ, ಚರಂಡಿ, ಕುಡಿಯುವ ನೀರು ಸೇರಿದಂತೆ ಇರುವ ವಿವಿಧ ಸಮಸ್ಯೆಗಳನ್ನು ಬಗೆಹರಿಸಿ ಜನತೆಗೆ ಅಗತ್ಯ ಮೂಲಭೂತ ಸವಲತ್ತುಗಳನ್ನು ಹಂತ ಹಂತವಾಗಿ ಕಲ್ಪಿಸಲು ಶ್ರಮಿಸಲಾಗುವುದು ಎಂದು ಶಾಸಕ ಬಿ.ಎನ್.ರವಿಕುಮಾರ್ ಹೇಳಿದರು.
ನಗರದ 1 ನೇ ವಾರ್ಡಿನ ಸಿ.ಆರ್ ಲೇ ಔಟ್ ನಲ್ಲಿ ಸೋಮವಾರ 2022-23 ನೇ ಸಾಲಿನ ನಗರೋತ್ಥಾನ 4 ನೇ ಹಂತದ ಅನುಧಾನದಡಿ ನಿರ್ಮಾಣ ಮಾಡಲಿರುವ ರಸ್ತೆ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.
ಶಿಡ್ಲಘಟ್ಟ ನಗರಸಭೆಗೆ 2022-23 ನೇ ಸಾಲಿನ ನಗರೋತ್ಥಾನ ೪ ನೇ ಹಂತದಲ್ಲಿ ಸುಮಾರು ೩೦ ಕೋಟಿ ರೂ ಬಿಡುಗಡೆಯಾಗಿದ್ದು ಇಂದು ಸುಮಾರು 11 ಕೋಟಿ 50 ಲಕ್ಷ ರೂ ವೆಚ್ಚದ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಲಾಗಿದೆ.
ನಗರದ ವಿವಿಧ ವಾರ್ಡುಗಳಲ್ಲಿ ರಸ್ತೆ, ಚರಂಡಿ ಸೇರಿದಂತೆ ಕುಡಿಯುವ ನೀರಿನ ಸಮಸ್ಯೆ ಬಹಳಷ್ಟಿದ್ದು ಹಂತ ಹಂತವಾಗಿ ಎಲ್ಲಾ ಸಮಸ್ಯೆ ಬಗೆಹರಿಸುವ ಜೊತೆಗೆ ಜನತೆಗೆ ಅಗತ್ಯ ಮೂಲಭೂತ ಸವಲತ್ತು ಕಲ್ಪಿಸಲಾಗುವುದು ಎಂದರು.
ಈ ಸಂದರ್ಬದಲ್ಲಿ ನಗರಸಭೆ ಅಧ್ಯಕ್ಷೆ ಸುಮಿತ್ರರಮೇಶ್, ಸದಸ್ಯರಾದ ಎಸ್.ಚಿತ್ರಾಮನೋಹರ್, ಎಸ್.ರಾಘವೇಂದ್ರ, ಎಸ್.ಎಂ.ಮಂಜುನಾಥ್, ಎಲ್.ಅನಿಲ್‌ಕುಮಾರ್, ಸುರೇಶ್, ಮುಖಂಡರಾದ ಪಿ.ಕೆ.ಕಿಷನ್ (ನಂದು), ಡಿ. ಎಂ. ಜಗದೀಶ್ವರ್, ಲಕ್ಷ್ಮಿನಾರಾಯಣ (ಲಚ್ಚಿ), ಎಸ್.ಎಂ.ರಮೇಶ್, ಗುತ್ತಿಗೆದಾರರಾದ ಕೆ.ಬಿ.ಮಂಜುನಾಥ, ಮುರಳಿ ಮತ್ತಿತರರು ಹಾಜರಿದ್ದರು.