Sidlaghatta : ವಿದ್ಯೆಯೊಂದಿಗೆ ಸಂಸ್ಕಾರ ಕಲಿತಾಗ ಉತ್ತಮ ನಾಗರಿಕರಾಗಲು ಸಾಧ್ಯ. ವಿದ್ಯಾಸಂಸ್ಥೆಗಳು ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣ ಕೇಂದ್ರಗಳಾಗಲಿ ಎಂದು ಪೋಲಿಸ್ ಡಿ.ಎಸ್.ಪಿ ಕೆ.ಎನ್.ರಮೇಶ್ ತಿಳಿಸಿದರು.
ನಗರದ ಶ್ರೀ ಶಾರದಾ ವಿದ್ಯಾಸಂಸ್ಥೆಯಲ್ಲಿ ಭಾನುವಾರ ಹಳೇ ವಿದ್ಯಾರ್ಥಿ ಸಂಘದಿಂದ ಆಯೋಜಿಸಿದ್ದ ನಿವೃತ್ತ ಮುಖ್ಯ ಶಿಕ್ಷಕಿ ಬಿ.ಎಂ.ವಿಜಿಯಮ್ಮರವರಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಇಂದಿನ ಶಿಕ್ಷಣ ವ್ಯವಸ್ಥೆ ಕೇವಲ ಸರ್ಟಿಫಿಕೇಟ್ ಪಡೆಯಲು ಮಾತ್ರ ರೂಪುಗೊಂಡಿದೆ. ಹಿಂದಿನ ಶಿಕ್ಷಣ ವ್ಯವಸ್ಥೆ ನಮ್ಮ ಸಂಸ್ಕೃತಿಯನ್ನು ಕಲಿಸುತ್ತಾ, ಗುರು ಹಿರಿಯರ ಬಗ್ಗೆ ಪೂಜ್ಯ ಭಾವನೆ ಮೂಡಿಸುತ್ತಿತ್ತು. ಸಂಸ್ಕಾರಯುಕ್ತ ವಿದ್ಯೆ ಕಲಿತ ವಿದ್ಯಾರ್ಥಿಗಳು ದೇಶದ ಸತ್ಪ್ರಜೆಗಳಾಗಿ ರೂಪಗೊಳ್ಳಿತ್ತಿದ್ದರು. ಈ ರೀತಿ ಕಲಿತ ವಿದ್ಯಾವಂತರು ಎಂದಿಗೂ ನಿರುದ್ಯೋಗಿಗಳಾಗಲು ಸಾಧ್ಯವಿಲ್ಲ. ಶಿಕ್ಷಕಿ ವಿಜಿಯಮ್ಮ ಮಾತೃಹೃದಯಿಯಾಗಿದ್ದು ನೂರಾರು ವಿದ್ಯಾರ್ಥಿಗಳ ದಾರಿ ದೀಪವಾಗಿದ್ದಾರೆ ಎಂದರು.
ವಾಸವಿ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ರೂಪಸಿ ರಮೇಶ್ ಮಾತನಾಡಿ, ವಿದ್ಯಾರ್ಥಿಗಳು ಕೇವಲ ಪಠ್ಯ ಪುಸ್ತಕಗಳಿಗಷ್ಟೆ ಸೀಮಿತರಾಗದೆ ಜೀವನದ ಪಾಠಗಳನ್ನು ಕಲಿಯಲು ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಅನೇಕ ಅವಕಾಶಗಳಿದ್ದು ಅವುಗಳ ಸದ್ಭಳಿಕೆ ಮಾಡಿಕೊಳ್ಳಿ ಎಂದರು.
ಶಾಲೆಯ ಸಂಸ್ಥಾಪಕ ಅಧ್ಯಕ್ಷ ಎ.ಆರ್. ಮುನಿರತ್ನಂ, ವಕೀಲ ಶ್ರೀನಿವಾಸ್, ಪ್ರಾಂಶುಪಾಲ ಮೂರ್ತಿ ಸಾಮ್ರಾಟ್, ಶ್ರೀಕಾಂತ್, ಹಳೆ ವಿದ್ಯಾರ್ಥಿಗಳು ಹಾಜರಿದ್ದರು.