Sidlaghatta : ಶಾಲಾ ಕಾಲೇಜು ಓದುವ ವಿದ್ಯಾರ್ಥಿಗಳಲ್ಲಿ ವ್ಯಾಪಾರ ವಹಿವಾಟು, ಹಣದ ಲೆಕ್ಕಾಚಾರ, ಮಾರುಕಟ್ಟೆಯಲ್ಲಿ ಆಹಾರ ಪದಾರ್ಥಗಳ ಬೆಲೆ ಇನ್ನಿತರೆ ವಿಚಾರಗಳು ತಿಳಿದುಕೊಳ್ಳುವ ಅಗತ್ಯವಿದೆ ಎಂದು ಶಾರದಾ ವಿದ್ಯಾಸಂಸ್ಥೆಯ ಮುಖ್ಯಸ್ಥ ಸುಮನ್ ಶ್ರೀಕಾಂತ್ ತಿಳಿಸಿದರು.
ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಬಳಿ ಇರುವ ಶ್ರೀಶಾರದಾ ವಿದ್ಯಾ ಸಂಸ್ಥೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಆಹಾರ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಕ್ಕಳು ನಾಲ್ಕು ಗೋಡೆಗಳ ಮದ್ಯೆ ಪಾಠ ಪ್ರವಚನಕ್ಕೆ ಸೀಮಿತವಾಗಬಾರದು. ಪ್ರಾಪಂಚಿಕ ಜ್ಞಾನ ಅತಿ ಅಗತ್ಯ, ಹಾಗಾಗಿ ಪಠ್ಯ ಚಟುವಟಿಕೆಗಳ ಜತೆಗೆ ಆಹಾರ ಮೇಳವನ್ನು ಹಮ್ಮಿಕೊಂಡಿದ್ದು ಇದರಿಂದ ಮಕ್ಕಳಿಗೆ ತರಕಾರಿ ಹಾಗೂ ಆಹಾರದ ಬಗ್ಗೆಯೂ ವಿಶೇಷ ಆಸಕ್ತಿ ಮೂಡಲಿದೆ. ಮಕ್ಕಳಲ್ಲಿ ಲೆಕ್ಕಾಚಾರ ಹಾಗೂ ಸಾಮಾನ್ಯಜ್ಞಾನದ ಬಗ್ಗೆ ಅರಿವುಮೂಡಿಸಲು ಇದು ಸಹಕಾರಿಯಾಗಿದೆ. ಆಹಾರ ಪದಾರ್ಥಗಳ ತಯಾರಿಕೆ, ಮಾರಾಟ, ಲಾಭ, ನಷ್ಟ, ಆಹಾರ ಪದ್ಧತಿ ಹಾಗೂ ಶುಚಿತ್ವದ ಬಗ್ಗೆ ತಿಳಿವಳಿಕೆ ಮೂಡಿಸಲಿದೆ. ಕಲಿಕೆಗೆ ಪೂರಕ ವಾತಾವರಣ ನಿರ್ಮಾಣವಾಗಲಿದೆ ಎಂದು ಆಶಿಸಿದರು.
ಶಾಲಾ ಮಕ್ಕಳು ಶಾಲಾ ಆವರಣದಲ್ಲೆ ಬಿಸಿ ಬಿಸಿ ಬೋಂಡ, ಬಜ್ಜಿ, ಗೋಬಿ ಮಚೂರಿ, ಪಾನಿ ಪೂರಿ, ಮಸಾಲೆ ಪೂರಿ, ಚುರಿಮುರಿ, ಒಬ್ಬಟ್ಟು, ಮಸಾಲೆ ದೋಸೆ, ಚಿತ್ರಾನ್ನ, ಮೊಸರಾನ್ನ…ಬಗೆ ಬಗೆಯ ತಿಂಡಿ ತಿನಿಸುಗಳನ್ನು ತಯಾರು ಮಾಡಿ ಮಾರಾಟ ಮಾಡಿದರು.
ತಾವೇ ತಯಾರಿಸಿದ ತಿಂಡಿ ತಿನಿಸು ಪದಾರ್ಥಗಳಿಂದ ಬಂದ ಲಾಭ ನಷ್ಟದ ಲೆಕ್ಕಾಚಾರ ಮಾಡಿ ಮಕ್ಕಳು ಖುಷಿ ಪಟ್ಟರು.