Appegowdanahalli, Sidlaghatta : ಗಿಡ ಮರಗಳ ಸಂರಕ್ಷಣೆಯು ಪ್ರತಿಯೊಬ್ಬರ ಆದ್ಯ ಜವಾಬ್ದಾರಿಯಾಗಬೇಕು. ಶಾಲೆಗಳಲ್ಲಿ ಪರಿಸರ ಸ್ನೇಹಿ ವಾತಾವರಣ ನಿರ್ಮಾಣವಾಗಬೇಕು. ಸಸ್ಯಸಂಪತ್ತು ಹೆಚ್ಚುವುದರಿಂದ ಪ್ರಾಣಿ, ಪಕ್ಷಿಸಂಕುಲ ಸುಸ್ಥಿತಿಯ ಜೀವನ ನಡೆಸಲು ಸಾಧ್ಯವಾಗುವುದು ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಪ್ರಶಾಂತ್ ಹೇಳಿದರು.
ತಾಲ್ಲೂಕಿನ ಅಪ್ಪೇಗೌಡನಹಳ್ಳಿಯಲ್ಲಿರುವ ಇಂದಿರಾಗಾಂಧಿ ವಸತಿ ಶಾಲೆ ಆವರಣದಲ್ಲಿ ಬುಧವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆ, ಅರಣ್ಯ ಇಲಾಖೆ, ಇಂದಿರಾಗಾಂಧಿ ವಸತಿ ಶಾಲೆಯ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆಯ ಗಿಡನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪ್ರಕೃತಿಯಲ್ಲಿ ಹೆಚ್ಚುತ್ತಿರುವ ಅಸಮತೋಲನ ಮತ್ತು ಅಕಾಲಿಕ ಘಟನೆಗಳ ನಿವಾರಣೆಗೆ ಕಡ್ಡಾಯವಾಗಿ ಮರಗಿಡಗಳನ್ನು ಬೆಳೆಸಿ ಪರಿಸರ ಉಳಿಸುವುದೊಂದೇ ಅನಿವಾರ್ಯ ಮಾರ್ಗವಾಗಿದೆ. ದಿನೇ ದಿನೇ ಹೆಚ್ಚುತ್ತಿರುವ ಅರಣ್ಯನಾಶದಿಂದಾಗಿ ವಾತಾವರಣದಲ್ಲಿ ತಾಪಮಾನ ಹೆಚ್ಚುತ್ತಿದೆ. ಪ್ರಕೃತಿಯ ವೈಪರಿತ್ಯದಿಂದಾಗಿ ಆಗುತ್ತಿರುವ ವಿಕೋಪಗಳಿಗೆ ಮುಗ್ದ ಜನರು ಸೇರಿದಂತೆ ಅನೇಕ ಪ್ರಾಣಿಗಳು ಬಲಿಯಾಗುತ್ತಿವೆ ಎಂದರು.
ಪರಿಸರ ದಿನಾಚರಣೆಯು ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗದೇ ನಿತ್ಯ ನಿರಂತರ ಜವಾಬ್ದಾರಿಯಾಗಬೇಕು. ಶಾಲಾ ವಿದ್ಯಾರ್ಥಿಗಳು ತಮ್ಮ ಜನ್ಮದಿನವನ್ನು ಗಿಡ ನೆಡುವ ಮೂಲಕ ಆಚರಣೆ ಮಾಡುವುದರಿಂದ ಪರಿಸರ ರಕ್ಷಣೆಗೆ ಮುಂದಾಗಬೇಕು ಎಂದರು.
ತಾಲ್ಲೂಕು ಅರಣ್ಯಾಧಿಕಾರಿ ಸುಧಾಕರ್‌ಯಾದವ್ ಮಾತನಾಡಿ ಗಿಡ ನೆಡುವುದು ಎಷ್ಟು ಮುಖ್ಯವೋ ಅದನ್ನು ಪೋಷಣೆ ಮಾಡೋದು ಅಷ್ಟೇ ಮುಖ್ಯ, ಪರಿಸರ ಸಂರಕ್ಷಣೆಯು ದಿನನಿತ್ಯದ ಚಟುವಟಿಕೆಯಂತಾಗಿ ಎಲ್ಲರಲ್ಲಿಯೂ ಪರಿಸರದ ಕಾಳಜಿ ಪ್ರತಿ ಮನೆಯಿಂದಲೂ ಆರಂಭವಾಗಬೇಕು ಎಂದರು.
ಜಿಲ್ಲಾ ಜನಜಾಗೃತಿ ಸದಸ್ಯ ಎ.ಎಂ.ತ್ಯಾಗರಾಜ್, ಶಾಲೆಯ ಪ್ರಭಾರ ಪ್ರಾಂಶುಪಾಲ ಪ್ರಸಾದ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಸುರೇಶ್‌ಗೌಡ, ವಲಯ ಅರಣ್ಯಾಧಿಕಾರಿ ಜಯಚಂದ್ರ, ವಲಯದ ಮೇಲ್ವಿಚಾರಕ ಧನಂಜಯ್, ಒಕ್ಕೂಟ ಉಪಾಧ್ಯಕ್ಷರಾದ ದೇವರಾಜ್, ಸೇವಾ ಪ್ರತಿನಿಧಿಗಳಾದ ಅನಿತಾ, ಮುನಿರತ್ನ, ಸ್ವ ಸಹಾಯ ಪ್ರಗತಿ ಬಂದು ಸಂಘದ ಸದಸ್ಯರು, ಅರಣ್ಯ ಇಲಾಖೆ ಹಾಗು ಶಾಲೆಯ ಸಿಬ್ಬಂದಿ, ಮಕ್ಕಳು ಹಾಜರಿದ್ದರು.