Ramalingapura, Sidlaghatta, chikkaballapur District : ಶಿಡ್ಲಘಟ್ಟ ತಾಲ್ಲೂಕಿನ ರಾಮಲಿಂಗಾಪುರ ಗ್ರಾಮದಲ್ಲಿ ವರದಕ್ಷಿಣೆ ಕಿರುಕುಳದಿಂದ ಬೇಸತ್ತು ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆಯಿದ್ದು, ಪೊಲೀಸರು ಪತಿಯನ್ನು ಬಂಧಿಸಿದ್ದಾರೆ.
ಪೊಲೀಸ್ ಮಾಹಿತಿಯ ಪ್ರಕಾರ, ಮೃತಳು ಶಿರಿಷ (19) ರಾಮಲಿಂಗಾಪುರ ಗ್ರಾಮದ ನಿವಾಸಿ. ಶಿರಿಷ ಒಂದು ವರ್ಷಗಳ ಹಿಂದೆ ಅದೇ ಗ್ರಾಮದ ಶ್ರೀನಾಥ್ ಎಂಬವರನ್ನು ಪ್ರೀತಿಸಿ ಮದುವೆಯಾಗಿದ್ದಳು. ಮದುವೆಯ ನಂತರವೂ ನರ್ಸಿಂಗ್ ಕೋರ್ಸ್ ಓದನ್ನು ಮುಂದುವರಿಸುತ್ತಿದ್ದಳು.
ಆದರೆ ಮದುವೆಯ ಕೆಲವು ತಿಂಗಳ ಬಳಿಕ ಪತಿ ಹಾಗೂ ಅವರ ಕುಟುಂಬದವರು ಹಣ ತರಬೇಕೆಂದು ಶಿರಿಷಳನ್ನು ಪೀಡನೆಗೆ ಒಳಪಡಿಸಿದ್ದು, ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಿದ್ದರೆಂದು ಶಿರಿಷಳ ತಂದೆ ಮಂಜುನಾಥ್ ದಿಬ್ಬೂರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
“ಮಗಳು ಫೋನ್ ಮೂಲಕ ಕಿರುಕುಳದ ಬಗ್ಗೆ ತಿಳಿಸಿದಾಗ ನಾವು ಓದಿಗೆಂದು ₹40,000 ನೀಡಿ ಸಹಾಯ ಮಾಡಿದ್ದೆವು. ಆದರೂ ಮತ್ತಷ್ಟು ಹಣ ತರಬೇಕೆಂದು ಒತ್ತಾಯಿಸಿ, ವಿಚ್ಛೇದನದ ಬೆದರಿಕೆ ಹಾಕುತ್ತಿದ್ದರೆಂದು” ದೂರು ಹೇಳಿದೆ.
ಈ ಹಿನ್ನಲೆಯಲ್ಲಿ ಶಿರಿಷ ಶನಿವಾರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು. ತಕ್ಷಣವೇ ಜಿಲ್ಲಾಸ್ಪತ್ರೆಗೆ ಹಾಗೂ ನಂತರ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾದರೂ ಭಾನುವಾರ ರಾತ್ರಿ ಸಾವನ್ನಪ್ಪಿದ್ದಾಳೆ.
ಘಟನೆಯ ನಂತರ ಮೃತಳ ಕುಟುಂಬ ಹಾಗೂ ಬಂಧು ಬಳಗದವರು ಶಿರಿಷಳ ಶವವನ್ನು ಪತಿಯ ಮನೆ ಮುಂದೆ ಇಟ್ಟು ಪ್ರತಿಭಟನೆ ನಡೆಸಿದರು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಗ್ರಾಮಸ್ಥರು ಹಾಗೂ ಪೊಲೀಸರು ಮಧ್ಯಪ್ರವೇಶಿಸಿ ಮನವೊಲಿಸಿದ ನಂತರ ಶವ ಸಂಸ್ಕಾರ ನಡೆಸಲಾಯಿತು.
ಪೊಲೀಸರು ಶ್ರೀನಾಥ್, ಲಕ್ಷ್ಮೀದೇವಮ್ಮ, ಭಾರತಿ, ರಾಮಮೂರ್ತಿ ಮತ್ತು ಕಲಾವತಿ ವಿರುದ್ಧ ಪ್ರಕರಣ ದಾಖಲಿಸಿದ್ದು, ಪತಿ ಶ್ರೀನಾಥ್ ಅವರನ್ನು ಬಂಧಿಸಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದೆ.
ಸರ್ಕಲ್ ಇನ್ಸ್‌ಪೆಕ್ಟರ್ ಎಂ. ಶ್ರೀನಿವಾಸ್ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರ ಮನವೊಲಿಸಿ, ನ್ಯಾಯ ದೊರಕುವಂತೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
For Daily Updates WhatsApp ‘HI’ to 7406303366









