Sidlaghatta : ಚುನಾವಣಾ ದಿನಾಂಕ ಘೋಷಣೆ ಆದಾಗಿನಿಂದಲೂ, ಮತದಾನ ನಡೆದ ಫಲಿತಾಂಶ ಘೋಷಣೆ ಆಗುವವರೆಗೂ ಯಾವುದೆ ಅಡ್ಡಿ ಆತಂಕ ಇಲ್ಲದೆ ಸುಸೂತ್ರವಾಗಿ ಎಲ್ಲ ಪ್ರಕ್ರಿಯೆಗಳು ನಡೆದವು. ರಾಜ್ಯದಲ್ಲಿ ಅತಿ ಹೆಚ್ಚು ಮತದಾನವಾದ ಎರಡನೇ ತಾಲ್ಲೂಕು ಎಂಬ ಕೀರ್ತಿಗೂ ಶಿಡ್ಲಘಟ್ಟ ಕ್ಷೇತ್ರ ಪಾತ್ರವಾಗಿದೆ. ಇದಕ್ಕೆ ಅನೇಕರ ಸಹಭಾಗಿತ್ವವಿದೆ ಎಂದು ಚುನಾವಣಾಕಾರಿ ಆಗಿ ಕಾರ್ಯನಿರ್ವಹಿಸಿದ್ದ ಜಾವಿದಾ ನಾಸೀಮಾ ಖಾನಂ ತಿಳಿಸಿದರು.
ತಾಲ್ಲೂಕು ಪಂಚಾಯಿತಿ ಕಾರ್ಯಾಲಯದ ಸಭಾಂಗಣದಲ್ಲಿ ಚುನಾವಣೆಯಲ್ಲಿ ಕಾರ್ಯನಿರ್ವಹಿಸಿದ ಎಲ್ಲ ಅಧಿಕಾರಿ ಸಿಬ್ಬಂದಿಗೆ ಕೃತಜ್ಞತೆಗಳನ್ನು ಅರ್ಪಿಸಿ ಅವರು ಮಾತನಾಡಿದರು.
ಯಾವುದೆ ಒಂದೆ ಒಂದು ಸಣ್ಣ ವಿವಾದ, ಸಮಸ್ಯೆಯೂ ಇಲ್ಲದಂತೆ ಸುಸೂತ್ರವಾಗಿ ಚುನಾವಣೆಯ ಎಲ್ಲ ಹಂತಗಳು ನಡೆಯಲು ಸಹಕರಿಸಿದ ಎಲ್ಲ ಅಧಿಕಾರಿಗಳು, ಸಿಬ್ಬಂದಿ, ಅಭ್ಯರ್ಥಿಗಳು, ಮತದಾರರು ಹಾಗೂ ಸಾರ್ವಜನಿಕರಿಗೆ ಧನ್ಯವಾದಗಳನ್ನು ಅವರು ತಿಳಿಸಿದರು.
ಈ ಕ್ಷೇತ್ರದಲ್ಲಿ ಸ್ವೀಪ್ ಸಮಿತಿಯಿಂದ ನಡೆದ ಮತದಾನ ಕುರಿತು ಜಾಗೃತಿ ಕಾರ್ಯಕ್ರಮಗಳು, ಸಖೀ, ಪಾರಂಪರಿಕ ಮತಗಟ್ಟೆ ಕೇಂದ್ರ ಸ್ಥಾಪನೆ, ರೈಲಿನಲ್ಲಿ ಪ್ರಯಾಣಿಸುತ್ತಲೆ ಪ್ರಯಾಣಿಕರಿಗೆ ಮತದಾನದ ಜಾಗೃತಿ ಮೂಡಿಸಿದ್ದು, ಸೆಲ್ಫಿ ಪಾಯಿಂಟ್ ನಿರ್ಮಿಸಿದ್ದಾಗಿರಬಹುದು, ರಂಗೋಲೆ ಮುಂತಾದ ಕ್ರಿಯಾಶೀಲವಾದ ಮತದಾರರ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿದ್ದರ ಪರಿಣಾಮ ಇಲ್ಲಿ ಮತದಾನದ ಪ್ರಮಾಣ ಹೆಚ್ಚಾಗಿದ್ದರ ಬಗ್ಗೆ ಡಿಸಿ ಮತ್ತು ಸಿಇಒ ಅವರು ಶ್ಲಾಘಿಸಿದ್ದಾರೆ ಎಂದು ಹೇಳಿದರು.
ಚುನಾವಣೆ ಕಾರ್ಯಕ್ಕೆ ನಿಯೋಜನಗೊಂಡ ಎಲ್ಲ ಅಧಿಕಾರಿಗಳು, ಸಿಬ್ಬಂದಿಯು ಒಟ್ಟಾರೆಯಾಗಿ ಕಾರ್ಯನಿರ್ವಹಿಸಿದ ಕಾರಣಕ್ಕಾಗಿ ಈ ಯಶಸ್ಸು ಸಿಕ್ಕಿದೆ, ಮುಂಬರುವ ಎಲ್ಲ ಚುನಾವಣೆಗಳಲ್ಲೂ ಇಂತದ್ದೇ ಪ್ರಯತ್ನಗಳು ನಡೆಯಲಿ ಎಂದು ಹೇಳಿದರು.
ಸ್ವೀಪ್ ಸಮಿತಿ ಆಧ್ಯಕ್ಷರೂ ಆಗಿದ್ದ ತಾಲ್ಲೂಕು ಪಂಚಾಯಿತಿ ಇಒ ಮುನಿರಾಜು ಮಾತನಾಡಿ, ಜಿಲ್ಲೆಯಲ್ಲಿ ಅತಿ ಹೆಚ್ಚು ಹಾಗೂ ಮಾದರಿಯೂ ಆದ ರೀತಿಯಲ್ಲಿ ಮತದಾರರ ಜಾಗೃತಿ ಕಾರ್ಯಕ್ರಮಗಳನ್ನು ಇಲ್ಲಿ ನಡೆಸಿದ್ದು ಎಲ್ಲರ ಪ್ರಯತ್ನದಿಂದ ಇದು ಸಾಧ್ಯವಾಗಿದೆ.ಜತೆಗೆ ಮಾಧ್ಯಮ ಮಿತ್ರರು ಹೆಚ್ಚಿನ ಪ್ರಚಾರ ಕೊಟ್ಟಿದ್ದರಿಂದ ಅದು ಕ್ಷೇತ್ರದ ಎಲ್ಲ ಜನರನ್ನೂ ಮುಟ್ಟಲು ಸಾಧ್ಯವಾಯಿತು ಎಂದು ಮಾಧ್ಯಮಗಳ ಕಾರ್ಯವನ್ನು ಶ್ಲಾಘಿಸಿದರು.
ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡಿದ್ದ ಅಧಿಕಾರಿಗಳು ಚುನಾವಣಾ ಕಾರ್ಯ ನಿರ್ವಹಿಸುವಾಗ ತಮಗೆ ಆದ ಸಿಹಿ ಅನುಭವಗಳನ್ನು, ಹಿರಿಯ ಅಧಿಕಾರಿಗಳ ಸಹಕಾರವನ್ನು ಸ್ಮರಿಸಿ ತಮ್ಮ ಅನುಭವಗಳನ್ನು ಹಂಚಿಕೊಂಡರು.
ತಹಶೀಲ್ದಾರ್ ಬಿ.ಎನ್.ಸ್ವಾಮಿ, ಪೌರಾಯುಕ್ತ ಆರ್.ಶ್ರೀಕಾಂತ್, ಬಿಸಿಎಂ ಅಧಿಕಾರಿ ನಾರಾಯಣಪ್ಪ, ಸಿಡಿಪಿಒ ನವತಾಜ್, ಸಮಾಜ ಕಲ್ಯಾಣ ಇಲಾಖೆಯ ಜಗದೀಶ್, ರೇಷ್ಮೆ ಇಲಾಖೆಯ ಕೆ.ತಿಮ್ಮರಾಜು, ಕೃಷಿ ಇಲಾಖೆಯ ವೀಣಾ, ಅಕ್ಷರ ದಾಸೋಹ ವಿಭಾಗದ ಆಂಜನೇಯಲು, ಪಶು ವೈದ್ಯಕೀಯ ಇಲಾಖೆಯ ಡಾ.ರಮೇಶ್ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.