Sidlaghatta : ಮಕ್ಕಳಿಗೆ ಪ್ರಾಚೀನ ಭಾರತದ ಇತಿಹಾಸವನ್ನು ವಸ್ತುನಿಷ್ಠವಾಗಿ ಅರಿಯುವಂತೆ ಮಾಡಬೇಕು. ಭವ್ಯಭಾರತದ ಸಂಸ್ಕೃತಿ, ಕಲೆ, ಸಾಹಿತ್ಯ, ಮತ್ತು ಪರಂಪರೆಯ ಅರಿವಿನಿಂದ ಮಕ್ಕಳಲ್ಲಿ ದೇಶಾಭಿಮಾನ ಬೆಳೆಸಲು ಪ್ರಯತ್ನಿಸಬೇಕು ಎಂದು ಕ್ಷೇತ್ರಶಿಕ್ಷಣಾಧಿಕಾರಿ ಸಿ.ಎ. ನರೇಂದ್ರಕುಮಾರ್ ಹೇಳಿದರು.
ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಗುರುವಾರ ನಡೆದ ಪ್ರಾಚ್ಯಪ್ರಜ್ಞೆ ಕುರಿತ ವಿವಿಧ ಸ್ಪರ್ಧೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ರಾಜ್ಯದಲ್ಲಿ ಹಲವು ರಾಜಮನೆತನಗಳ ಪಳೆಯುಳಿಕೆಗಳು ಮತ್ತು ಸ್ಮಾರಕಗಳು ಇಂದಿಗೂ ಅಸ್ತಿತ್ವದಲ್ಲಿವೆ. ಇವುಗಳನ್ನು ಬಳಸಿ ಸಮಾಜ ವಿಜ್ಞಾನ ಹಾಗೂ ಭಾಷಾ ಅಧ್ಯಯನದಲ್ಲಿ ಮಕ್ಕಳ ಜ್ಞಾನವನ್ನು ಹೆಚ್ಚಿಸಲು ಸಾಧ್ಯ. ಪ್ರಾಚ್ಯಪ್ರಜ್ಞೆ ಕುರಿತ ಪ್ರಬಂಧ, ರಸಪ್ರಶ್ನೆ, ಭಾಷಣ, ಚಿತ್ರಕಲಾ ಸ್ಪರ್ಧೆಗಳ ಮೂಲಕ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಲಾಗುತ್ತಿದೆ,” ಎಂದು ಅವರು ವಿವರಿಸಿದರು.
ಬಿಆರ್‌ಪಿ ಲಕ್ಷ್ಮೀನಾರಾಯಣ್ ಮಾತನಾಡಿ, “ಪ್ರಾಚ್ಯ ಸ್ಮಾರಕಗಳು ನಮ್ಮ ದೇಶದ ಅತ್ಯಮೂಲ್ಯ ಆಸ್ತಿಗಳು. ಇವುಗಳನ್ನು ಸಂರಕ್ಷಿಸುವುದು ಮತ್ತು ಇವುಗಳ ಮೂಲಕ ರಾಜಕೀಯ, ಸಾಂಸ್ಕೃತಿಕ, ಆರ್ಥಿಕ ಬೆಳವಣಿಗೆಯನ್ನು ಅಧ್ಯಯನ ಮಾಡಲು ಅವಕಾಶ ಒದಗಿಸಬೇಕು,” ಎಂದರು.
ಶಿಕ್ಷಣ ಸಂಯೋಜಕ ಯು.ವೈ. ಮಂಜುನಾಥ್ ಮಾತನಾಡಿ, “ಪ್ರಾಚ್ಯ ಸ್ಮಾರಕಗಳು ನಮ್ಮ ನಾಗರಿಕತೆಯ ಹೆಮ್ಮೆಯನ್ನು ಪ್ರತಿಬಿಂಬಿಸುತ್ತವೆ. ಇವು ಮಕ್ಕಳಲ್ಲಿ ಅರಿವಿನ ಜೊತೆಗೆ ಆಲೋಚನೆ, ಜ್ಞಾನ, ಮತ್ತು ಹೆಮ್ಮೆಯ ಗುಣಗಳನ್ನು ಬೆಳೆಸಲು ಸಹಾಯವಾಗುತ್ತದೆ,” ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಾಚ್ಯಪ್ರಜ್ಞೆ ಕುರಿತಂತೆ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು ನಡೆಯಿತು. ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯಶಿಕ್ಷಕರಾದ ಕೆ.ಎಚ್. ಪ್ರಸನ್ನಕುಮಾರ್, ಮೊಬಿನಾ ಬೇಗಂ, ಶಿಕ್ಷಕರಾದ ಸುರೇಶ್, ಇಷ್ರತ್, ಕಮಲಮ್ಮ ಸೇರಿದಂತೆ ವಿವಿಧ ಶಾಲೆಗಳ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.