Nadipinayakanahalli, sidlaghatta : ಶಿಡ್ಲಘಟ್ಟ ತಾಲ್ಲೂಕಿನ ನಡಿಪಿನಾಯಕನಹಳ್ಳಿ ನವೋದಯ ಪ್ರೌಢಶಾಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ಮತ್ತು ವಿಶ್ವೇಶ್ವರಯ್ಯ ವಸ್ತುಸಂಗ್ರಹಾಲಯದ ಆಶ್ರಯದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ತಾಲ್ಲೂಕುಮಟ್ಟದ ವಿಜ್ಞಾನ ನಾಟಕ ಹಾಗೂ ವಿಜ್ಞಾನ ವಿಚಾರಗೋಷ್ಠಿ ಸ್ಪರ್ಧೆಗಳು ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಕಾರ್ಯದರ್ಶಿ ಎಚ್.ಎಸ್. ರುದ್ರೇಶಮೂರ್ತಿ, ಇತ್ತೀಚಿನ ದಿನಗಳಲ್ಲಿ ಪೋಷಕರು ಮಕ್ಕಳನ್ನು ವೈದ್ಯ, ಎಂಜಿನಿಯರ್ ಮಾಡಲು ಹೆಚ್ಚು ಒತ್ತು ನೀಡುತ್ತಿದ್ದರೆ, ಮೂಲವಿಜ್ಞಾನ ಕಲಿಕೆಗೆ ಆಸಕ್ತಿ ಕಡಿಮೆಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ವಿಜ್ಞಾನ ಮನೋಭಾವನೆ ರೂಢಿಸಿಕೊಂಡರೆ ಅನೇಕ ಮೂಢನಂಬಿಕೆಗಳನ್ನು ತೊಡೆದುಹಾಕಬಹುದು, ಜೀವನದಲ್ಲಿ ವೈಜ್ಞಾನಿಕ ಚಿಂತನೆ ಬೆಳೆಸುವುದು ಅತ್ಯವಶ್ಯಕ ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಶಿಕ್ಷಣ ಸಂಯೋಜಕ ಯು.ವೈ. ಮಂಜುನಾಥ್ ಅವರು, ವಿಜ್ಞಾನವು ಜೀವನದ ಅವಿಭಾಜ್ಯ ಅಂಗವಾಗಿದ್ದು, ಅದನ್ನು ಉತ್ತಮ ದಿಸೆಯಲ್ಲಿ ಬಳಸಿದರೆ ದೇಶದ ಪ್ರಗತಿಗೆ ಬುನಾದಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು. ನವೋದಯ ಪ್ರೌಢಶಾಲೆಯ ಮುಖ್ಯಶಿಕ್ಷಕ ಎನ್.ಕೆ. ಸತ್ಯನಾರಾಯಣ್, ಭಾರತೀಯ ಋಷಿಗಳಿಂದ ವಿಜ್ಞಾನಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿ, ಭಾರತೀಯ ವಿಜ್ಞಾನಿಗಳ ಸಾಧನೆಗಳು ವಿಶ್ವದ ಮಾದರಿಯಾಗಿವೆ ಎಂದು ಹೇಳಿದರು.
ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ತುಮ್ಮನಹಳ್ಳಿ ಸರ್ಕಾರಿ ಪ್ರೌಢಶಾಲೆ, ದ್ವಿತೀಯ ಸ್ಥಾನವನ್ನು ನವೋದಯ ಪ್ರೌಢಶಾಲೆ ನಡಿಪಿನಾಯಕನಹಳ್ಳಿ ಹಾಗೂ ತೃತೀಯ ಸ್ಥಾನವನ್ನು ಜ್ಞಾನಜ್ಯೋತಿ ಪ್ರೌಢಶಾಲೆ, ಜಂಗಮಕೋಟೆ ಕ್ರಾಸ್ ಪಡೆದವು. ವಿಚಾರಗೋಷ್ಠಿ ಸ್ಪರ್ಧೆಯಲ್ಲಿ ಜ್ಞಾನಜ್ಯೋತಿ ಪ್ರೌಢಶಾಲೆ ಪ್ರಥಮ, ಬಿಜಿಎಸ್ ಪ್ರೌಢಶಾಲೆ ಹನುಮಂತಪುರ ದ್ವಿತೀಯ ಹಾಗೂ ಕುಂಭಿಗಾನಹಳ್ಳಿಯ ಕ್ಲಿಫರ್ಡ್ ಇನ್ನೋವೇಟೀವ್ ಶಾಲೆಯವರು ತೃತೀಯ ಸ್ಥಾನ ಗಳಿಸಿದರು.
ತೀರ್ಪುಗಾರರಾಗಿ ವಿಶ್ವನಾಥ್, ಅಮರನಾಥ್, ಕೆ. ಬೃಂದಾ ಮತ್ತು ಶ್ರೀನಿವಾಸ್ ಪಾಲ್ಗೊಂಡಿದ್ದರು. ತುಮ್ಮನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಎಂ. ನಾರಾಯಣಸ್ವಾಮಿ, ಶಿಕ್ಷಕರು ಉಮಾಶಂಕರ್, ದ್ಯಾವಪ್ಪ, ಚೌಡರೆಡ್ಡಿ, ಹೇಮಾವತಿ, ಮಾಲತಿ ಸೇರಿದಂತೆ ಹಲವು ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.