Sidlaghatta : ಪೊಲೀಸ್ ಬಂದೋಬಸ್ತ್ ಇದ್ದರೂ ಸಹ ಭೂ ಮಾಪಕರ ಮೇಲೆ ಚಿಂತಾಮಣಿ ತಾಲ್ಲೂಕಿನಲ್ಲಿ ಹಲ್ಲೆ ಮಾಡಲಾಗಿದೆ. ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಶಿಡ್ಲಘಟ್ಟ ತಾಲ್ಲೂಕಿನ ಭೂ ಮಾಪಕರು ಗುರುವಾರ ತಮ್ಮ ಕೆಲಸವನ್ನು ಸ್ಥಗಿತಗೊಳಿಸಿ ಭೂದಾಖಲೆಗಳ ಸಹಾಯಕ ನಿರ್ದೇಶಕ ಜಯಪ್ಪ ಅವರಿಗೆ ಮನವಿ ಸಲ್ಲಿಸಿದರು.
ಚಿಂತಾಮಣಿ ತಾಲ್ಲೂಕು ಮುರುಗಮಲ್ಲ ಹೋಬಳಿ ಪೆದ್ದೂರು ಗ್ರಾಮದಲ್ಲಿ ಭೂ ಮಾಪಕ ಕೆಲಸ ನಿರ್ವಹಿಸುವಾಗ ಬಾಜುದಾರರುಗಳು ಹಲ್ಲೆ ನಡೆಸಿದ್ದಾರೆ. ಪೊಲೀಸ್ ಬಂದೋಬಸ್ತ್ ಇದ್ದರೂ ಹಲ್ಲೆ ನಡೆದಿರುವುದು ವಿಷಾಧಕರ. ಭೂ ಮಾಪಕರಿಗೆ ಸೂಕ್ತ ರಕ್ಷಣೆ ನೀಡಬೇಕು. ಹಲ್ಲೆ ನಡೆಸಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ, ನ್ಯಾಯ ಸಿಗುವ ತನಕ ಅನಿರ್ದಿಷ್ಟ ಕಾಲ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸಿದ್ದೇವೆ. ಶಿಡ್ಲಘಟ್ಟ ತಾಲ್ಲೂಕಿನ ಎಲ್ಲಾ ಪರವಾನಗಿ ಭೂಮಾಪಕರ ಲಾಗಿನ್ ಅನ್ನು ಸ್ಥಗಿತಗೊಳಿಸಬೇಕೆಂದು ಸಹಾಯಕ ನಿರ್ದೇಶಕರಲ್ಲಿ ಕೋರಿದರು.
ಭೂ ಮಾಪಕರುಗಳ ಸಂಘದ ರಾಜ್ಯ ಸಮಿತಿ ಸದಸ್ಯ ದ್ವಾರಕೀಶ್, ತಾಲ್ಲೂಕು ಅಧ್ಯಕ್ಷ ಬಿ.ಟಿ.ವೆಂಕಟೇಶ್, ಕಾರ್ಯದರ್ಶಿ ಎನ್.ಚಂದ್ರಶೇಖರ್, ಶಿವರಾಮರೆಡ್ಡಿ, ರಾಜೇಂದ್ರರೆಡ್ಡಿ, ನಾರಾಯಣಪ್ಪ, ಹರಿಲಾಲ್ ನಾಯಕ್, ರವಿ. ಮಂಜುಳ, ನಾಗರಾಜ್, ಬಿ.ಆರ್.ವೆಂಕಟೇಶ್, ರಾಜಶೇಖರ್ ಹಾಜರಿದ್ದರು.