Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಸುಗಟೂರು ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಎಚ್.ಎಸ್. ರುದ್ರೇಶಮೂರ್ತಿ ಅವರು ಪ್ರಸಕ್ತ ಸಾಲಿನ ರಾಜೀವ್‌ಗಾಂಧಿ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಸೆಪ್ಟೆಂಬರ್ 5ರಂದು ಬೆಳಿಗ್ಗೆ 10 ಗಂಟೆಗೆ ಬೆಂಗಳೂರಿನ ಕೆಪಿಸಿ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಶಿಕ್ಷಣ ಸಚಿವ ಮಧುಬಂಗಾರಪ್ಪ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಹಲವು ಸಚಿವರು, ಶಾಸಕರು ಹಾಜರಿರಲಿದ್ದಾರೆ.
ಬಹುಮುಖ ಪ್ರತಿಭೆಯ ಅಧ್ಯಾಪಕರಾಗಿರುವ ಎಚ್.ಎಸ್. ರುದ್ರೇಶಮೂರ್ತಿ ಅವರು ಕೃತಕ ಬುದ್ಧಿಮತ್ತೆಯ ಬಳಕೆ, ಇ-ಕಂಟೆಂಟ್ ತಯಾರಿ, ಆಡಿಯೋ-ವೀಡಿಯೋ ಪಾಠ ಸೃಷ್ಟಿ, ಕಲಿಕಾಫಲಾಧಾರಿತ ಪ್ರಶ್ನೆಪತ್ರಿಕೆ ತಯಾರಿ ಮತ್ತು ಮೌಲ್ಯಾಂಕನ ಸಾಮಗ್ರಿಗಳ ರೂಪಿಕರಣದಲ್ಲಿ ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಶಿಕ್ಷಕಪರ್ವ, ನಿಷ್ಟಾ, ದೀಕ್ಷಾ ಮೊದಲಾದ ಕಾರ್ಯಕ್ರಮಗಳಿಗೆ ಸಂಪನ್ಮೂಲ ರಚನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.
ಶಿಕ್ಷಕರ ತರಬೇತಿ ಕಾರ್ಯಾಗಾರಗಳಲ್ಲಿ ಸಾಹಿತ್ಯ ರಚನೆ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ತಮ್ಮ ಕೊಡುಗೆ ನೀಡಿರುವ ಅವರು, ಸಾಹಿತ್ಯ ಹಾಗೂ ಸಾಮಾಜಿಕ ಸೇವಾ ಕ್ಷೇತ್ರಗಳಲ್ಲಿಯೂ ಸಕ್ರಿಯರಾಗಿದ್ದಾರೆ. ಶಾಲೆಯ ಭೌತಿಕ ಮತ್ತು ಶೈಕ್ಷಣಿಕ ವಾತಾವರಣ ಸುಧಾರಿಸಲು ವಿಶೇಷ ಗಮನ ಹರಿಸಿರುವ ಅವರು, ವಿದ್ಯಾರ್ಥಿಗಳನ್ನು ವೈಯಕ್ತಿಕವಾಗಿ ಮಾರ್ಗದರ್ಶನ ನೀಡಿ ರಾಷ್ಟ್ರೀಯ ಮಟ್ಟದ ಪರೀಕ್ಷೆಗಳಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗೂ ಅವಕಾಶ ಕಲ್ಪಿಸಿದ್ದಾರೆ.
“ಏಕ್ ಭಾರತ್ ಶ್ರೇಷ್ಟ ಭಾರತ್”, “ಮಿಷನ್ ಲೈಫ್ ಇಕೋ ಕ್ಲಬ್”, “ಜಲಶಕ್ತಿ ಅಭಿಯಾನ್” ಮೊದಲಾದ ರಾಷ್ಟ್ರೀಯ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿರುವ ರುದ್ರೇಶಮೂರ್ತಿ, ‘ಹಸಿರು ಸುಗಟೂರು’ ಅಭಿಯಾನದಡಿ ಮನೆಮನೆಗೆ ಸಸಿ ವಿತರಿಸಿ ಪರಿಸರ ಜಾಗೃತಿ ಮೂಡಿಸುವ ಕಾರ್ಯಕ್ಕೆ ರಾಜ್ಯಮಟ್ಟದಲ್ಲಿ ಮೆಚ್ಚುಗೆ ಪಡೆದಿದ್ದಾರೆ.