19.1 C
Sidlaghatta
Tuesday, December 10, 2024

ಶಿಡ್ಲಘಟ್ಟ ತಾಲ್ಲೂಕಿನ ತಮಟೆ ಕಲಾವಿದ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ ಅವರಿಗೆ ಪದ್ಮಶ್ರೀ

- Advertisement -
- Advertisement -

Sidlaghatta : ದೇಸೀಯ ಸೊಗಡು ಮತ್ತು ಸೊಬಗನ್ನು ಆವಾಹಿಸಿಕೊಂಡಿರುವ ಗಂಡುಕಲೆ ತಮಟೆ (Tamate) ವಾದನದ ಕಲೆಗೆ ಪದ್ಮಶ್ರೀ (Padma Shri Award) ಒಲಿದಿದೆ.

 ದೇಶೀಯ ಸೊಗಡು ಮತ್ತು ಸೊಬಗನ್ನು ಯಶಸ್ವಿಯಾಗಿ ಆವಾಹಿಸಿಕೊಂಡಿರುವ ಏಕಮೇವ ಗಂಡುಕಲೆ ತಮಟೆವಾದನ. ತಮಟೆವಾದನ ಬಯಲು ಸೀಮೆಯ ಜನಕ್ಕೆ ಸುಪರಿಚಿತ. ಮಾನವನ ಅಂತಿಮಯಾತ್ರೆಯಲ್ಲಿ ಮಸಣದವರೆಗೂ ಜತೆನೀಡಿ ವಿದಾಯ ಹೇಳುವುದೂ ತಮಟೆಯ ನಾದದಿಂದಲೇ. ಊರಜಾತ್ರೆ, ಮೆರವಣಿಗೆ ಅಥವಾ ಕರಗದಂತಹ ಸಾಂಸ್ಕೃತಿಕ ಉತ್ಸವಗಳಲ್ಲಿ ತಮಟೆ ಸದ್ದು ಕೇಳಿಸಲೇಬೇಕು.

 ಇಂಥ ನೆಲಸಂಸ್ಕೃತಿಯ ಕಲೆಗೆ ಹೊಸ ಭಾಷ್ಯವನ್ನು ಬರೆದ ಅದ್ಭುತ ಕಲಾವಿದ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ (Pindipapanahalli Munivenkatappa). ದೇಶ ವಿದೇಶಗಳಲ್ಲಿ ತಮಟೆ ನಾದವನ್ನು ಮೊಳಗಿಸಿ ಕನ್ನಡನಾಡಿಗೆ ಕೀರ್ತಿ ತಂದಿದ್ದಾರೆ. ಮುನಿವೆಂಕಟಪ್ಪನವರ ಕೈಬೆರಳುಗಳಲ್ಲಿ ಹದವಾದ ಲಯಬದ್ಧವಾದ ನಾದ ಹೊರಹೊಮ್ಮುತ್ತದೆ. ಅವರ ವಾದನದ ವೈವಿಧ್ಯತೆಯು ಕೇಳುಗರನ್ನು ಬೆರಗುಗೊಳಿಸುತ್ತದೆ. ಅವರ ತಮಟೆ ವಾದನದ ಶಬ್ಧ ಗುಂಡಿಗೆಯನ್ನು ತಟ್ಟಿ ಎಬ್ಬಿಸಬಲ್ಲದು.

 ತಾಳ, ನಾದ, ರಾಗ ಬದ್ಧವಾಗಿ ತಮಟೆ ನುಡಿಸುವ ಅವರ ಕೈಬೆರಳುಗಳು ತಮಟೆಯ ಮೇಲೆ ಮೋಡಿ ಮಾಡುತ್ತವೆ. ತಮಟೆ ಹಿಡಿದು ನಿಂತರೆ ಗಂಟೆಗಟ್ಟಲೆ ಕಾರ್ಯಕ್ರಮ ನೀಡಬಲ್ಲ ಅವರಿಗೆ ಈ ಕಲೆಯ ಮುವ್ವತ್ತಕ್ಕೂ ಹೆಚ್ಚು ರೀತಿಯ ವೈವಿಧ್ಯಮಯ ಮಜಲುಗಳು ಕರಗತವಾಗಿವೆ.

 ಶಿಡ್ಲಘಟ್ಟ ತಾಲ್ಲೂಕಿನ ಪಿಂಡಿಪಾಪನಹಳ್ಳಿಯಲ್ಲಿ ಜನಿಸಿದ ಮುನಿವೆಂಕಟಪ್ಪ ಅವರದ್ದು ತೀರಾ ಬಡ ಕುಟುಂಬ. ತಂದೆ ಪಾಪಣ್ಣ, ತಾಯಿ ಮುನಿಗಂಗಮ್ಮ. ಬದುಕಿನ ಆಸರೆಯಾದದ್ದು ತಂದೆಯಿಂದ ಕಲಿತ ತಮಟೆವಾದನ. ಶ್ರದ್ಧೆ, ಛಲ ಹಾಗೂ ಸಾಧನೆಯಿಂದ ಹತ್ತಾರು ವರ್ಷ ಬಿದಿರ ಕಡ್ಡಿಗಳೊಂದಿಗೆ ಬೆರಳನ್ನು ಬೆರೆಸಿದ್ದು ಸಾರ್ಥಕವಾಯಿತು. ನಾಲ್ಕನೇ ತರಗತಿಯವರೆಗೆ ವಿದ್ಯೆ ಕಲಿತಿದ್ದರೂ, ತಮಟೆ ವಿದ್ಯೆ ಹಂಪಿ ಕನ್ನಡ ವಿಶ್ವವಿದ್ಯಾಲಯದ “ನಾಡೋಜ” ಪ್ರಶಸ್ತಿ ತಂದಿತ್ತಿದೆ.

 ಮೈಸೂರು ದಸರೆ, ಹಂಪೆ ಉತ್ಸವ, ಜಾನಪದ ಜಾತ್ರೆಗಳಂಥ ಸಾಂಸ್ಕೃತಿಕ ಉತ್ಸವಗಳಲ್ಲಿ ಅವರ ತಮಟೆ ಸದ್ದು ಕೇಳುಗರಿಗೆ ಮೋಡಿ ಮಾಡಿದೆ. ತಾನು ಏಕಲವ್ಯನಂತೆ ತಮಟೆ ಕಲೆಯನ್ನು ಕಲಿತರೂ, ದ್ರೋಣಾಚಾರ್ಯರಾಗಿ ಹಲವಾರು ಶಿಷ್ಯರನ್ನು ತಯಾರು ಮಾಡಿದ್ದಾರೆ. ವೇದಿಕೆಯ ಮೇಲೆ ಹತ್ತು ಹನ್ನೆರಡು ಸಹ ಕಲಾವಿದರ ತಂಡದೊಡನೆ ಕಾರ್ಯಕ್ರಮ ನೀಡುತ್ತಾರೆ.

 ಈಗಿರುವ ಸುಧಾರಿತ ರೆಕ್ಸಿನ್ ತಮಟೆಗಿಂತ ಹಿಂದೆ ಬಳಕೆಯಲ್ಲಿದ್ದ ಚರ್ಮದ ತಮಟೆಯೆ ಮುನಿವೆಂಕಟಪ್ಪನವರಿಗೆ ಪ್ರಿಯ. ಚರ್ಮವಾದನದಲ್ಲಿ ಹೊಮ್ಮುವ ನಾದದ ಗಮ್ಮತ್ತೇ ಬೇರೆ ಎಂಬುದು ಅವರ ಸ್ವಾನುಭವ. ಆದರೆ ಚರ್ಮದ ತಮಟೆ ತಯಾರಿಸುವುದು ಮತ್ತು ಅದನ್ನು ಕಾಯಿಸಿ ಹದ ಮಾಡುವ ತಾಳ್ಮೆ ಈಗ ಯಾರಿಗಿದೆ.

 ಪಿಂಡಿಪಾಪನಹಳ್ಳಿಯಿಂದ ದಿಲ್ಲಿಯವರೆಗೂ ತಮಟೆ ನಾದದ ಸದ್ದನ್ನು ಹೊಮ್ಮಿಸಿರುವ ಮುನಿವೆಂಕಟಪ್ಪ ಜಪಾನ್‌ನಲ್ಲೂ ತನ್ನ ತಮಟೆಯ ಸದ್ದನ್ನು ಮೊಳಗಿಸಿದ್ದಾರೆ. ಅವರ ಕಲಾ ಪ್ರತಿಭೆಗೆ ಹಲವಾರು ಪ್ರಶಸ್ತಿಗಳು ಸಂದಿವೆ. ಹಂಪಿ ಕನ್ನಡ ವಿಶ್ವವಿದ್ಯಾಲಯದ ‘ನಾಡೋಜ’ ಪ್ರಶಸ್ತಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಮೈಸೂರು ದಸರಾ ಪ್ರಶಸ್ತಿ, ಡಾ.ಎಲ್.ಬಸವರಾಜು ಪ್ರತಿಷ್ಠಾನ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ಅವರಿಗೆ ಸಂದಿವೆ. ಮುನಿವೆಂಕಟಪ್ಪ ಜನಪದ ಅಕಾಡೆಮಿಯ ಸದಸ್ಯರೂ ಆಗಿದ್ದರು.

 1992ರಲ್ಲಿ ಜಪಾನ್ ದೇಶದಲ್ಲಿ ಕನ್ನಡದ ಕೀರ್ತಿಯನ್ನು ಬೆಳಗಿದ ಮುನಿವೆಂಕಟಪ್ಪ, 2014ರಲ್ಲಿ ಅಮೆರಿಕೆಯ ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟದ ಆಶ್ರಯದಲ್ಲಿ ಸ್ಯಾನ್‌ಹೂಸೆ ನಗರದಲ್ಲಿ ನಡೆದ ಎಂಟನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ಭಾಗವಹಿಸಿ ತಮಟೆಯ ಶಬ್ಧದ ಮಾಧುರ್ಯದಿಂದ ಅಲ್ಲಿನವರ ಮನಸೂರೆಗೊಂಡರು. ತಮಟೆ ಬಾರಿಸುತ್ತಲೇ ಕಣ್ಣಿನ ರೆಪ್ಪೆಗಳಿಂದ ನೋಟನ್ನು ಮತ್ತು ಗುಂಡು ಸೂಜಿಯನ್ನು ಮೇಲೆತ್ತುವ ಅವರ ಚಾಕಚಕ್ಯತೆಯನ್ನು ಬೆಕ್ಕಸ ಬೆರಗಾದರು.

 2015ರಲ್ಲಿ ಉತ್ತರ ಅಮೆರಿಕದ ‘ನಾವಿಕ’(ನಾವು ವಿಶ್ವ ಕನ್ನಡಿಗರು) ಸಂಘಟನೆಯ ೩ನೆಯ ದ್ವೈವಾರ್ಷಿಕ ಸಮ್ಮೇಳನ ನಾರ್ತ್ ಕೆರೊಲೈನ ರಾಜ್ಯದ ರಾಜಧಾನಿ “ರಾಲಿ”ಯಲ್ಲಿ ನಡೆದಿತ್ತು. ಅಲ್ಲಿ ಸುಮಾರು 1,500 ರಷ್ಟು ಸಂಖ್ಯೆಯಲ್ಲಿ ಕನ್ನಡಿಗರು ಸೇರಿದ್ದ ಸಮ್ಮೇಳನದಲ್ಲಿ ಮುನಿವೆಂಕಟಪ್ಪ ಮತ್ತು ತಂಡದವರ ತಮಟೆ ವಾದನ ವಿಶೇಷ ಆಕರ್ಷಣೆಯಾಗಿತ್ತು. ಅಲ್ಲಿನ ಸಮ್ಮೇಳನದಲ್ಲಿ ನಮ್ಮ ದೇಸೀಯ ಸೊಗಡು ಮತ್ತು ಸೊಬಗನ್ನು ಆವಾಹಿಸಿಕೊಂಡಿರುವ ಗಂಡುಕಲೆ ತಮಟೆ ವಾದನವನ್ನು ಪ್ರತಿಧ್ವನಿಸಿ ಅನಿವಾಸಿ ಕನ್ನಡಿಗರನ್ನು ಕುಣಿಸಿದ್ದಾರೆ.

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!