Sidlaghatta : ಶಿಡ್ಲಘಟ್ಟ ತಾಲ್ಲೂಕು ಪಂಚಾಯಿತಿ ಆಡಳಿತಾಧಿಕಾರಿ ಜಾವೀದಾ ನಸೀಮಾ ಖಾನಂ ಅವರು ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ತಾಲ್ಲೂಕು ಪಂಚಾಯಿತಿಯ ಸಾಮಾನ್ಯ ಸಭೆ ನಡೆಸಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು.
ಶಿಕ್ಷಣ, ಆರೋಗ್ಯ, ಅರಣ್ಯ, ಕೃಷಿ, ರೇಷ್ಮೆ, ತೋಟಗಾರಿಕೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಪಶು ವೈದ್ಯಕೀಯ ಮುಂತಾದ ಇಲಾಖೆಗಳ ಅಧಿಕಾರಿಗಳು ತಮ್ಮ ಇಲಾಖೆಗಳ ಪ್ರಗತಿಯನ್ನು ಮಂಡಿಸಿದರು.
ಈ ವೇಳೆ ಸಭೆಯಲ್ಲಿ ಮಾತನಾಡಿದ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ, ತಾಲ್ಲೂಕಿನ ತಲಕಾಯಲಬೆಟ್ಟದ ಬಳಿ ಕೀಟಶಾಸ್ತ್ರಜ್ಞರು ಪರೀಕ್ಷಿಸಿದ ಸೊಳ್ಳೆಯೊಂದರಲ್ಲಿ ಜಿಕಾ ವೈರಸ್ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ತಲಕಾಯಲಬೆಟ್ಟ, ವೆಂಕಟಾಪುರ, ದಿಬ್ಬೂರಹಳ್ಳಿ, ಬಚ್ಚನಹಳ್ಳಿ, ವಡ್ಡಹಳ್ಳಿ ಮುಂತಾದೆಡೆ ಗರ್ಭಿಣಿಯರು ಸೇರಿದಂತೆ ಹಲವಾರು ಗ್ರಾಮಸ್ಥರ ರಕ್ತ ಪರೀಕ್ಷೆ ಮಾಡಿದ್ದೇವೆ. ಅದೃಷ್ಟವಶಾತ್ ಯಾರಲ್ಲೂ ಜಿಕಾ ವೈರಸ್ ಕಂಡುಬಂದಿಲ್ಲ. ಎಲ್ಲಾ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ವಿವರಿಸಿದರು.
ಡೆಂಗೆ, ಹಳದಿ ಜ್ವರ, ಮೆದುಳು ಜ್ವರ (ಜಪಾನೀಸ್ ಎನ್ಸೆಫಾಲಿಟಿಸ್) ಹಾಗೂ ವೆಸ್ಟ್ ನೈಲ್ ವೈರಸ್ ಹರಡುವ ಈಡಿಸ್ ಜಾತಿಯ ಸೊಳ್ಳೆಗಳ ಕಡಿತದಿಂದ ಜಿಕಾ ವೈರಸ್ ವೈರಸ್ ಹರಡುತ್ತದೆ. ತಲೆನೋವು, ಕಣ್ಣು ಕೆಂಪಗಾಗುವುದು, ಜ್ವರ, ಚರ್ಮದ ಮೇಲೆ ಅಲ್ಲಲ್ಲಿ ದದ್ದುಗಳು, ಮೈಕೈ ನೋವು, ಮಾಂಸಖಂಡಗಳ ಸೆಳೆತ, ಕೀಲು ನೋವು ಲಕ್ಷಣಗಳು ಕಂಡು ಬರುತ್ತವೆ.
ಒಂದು ವೇಳೆ ಈ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣ ಆಸ್ಪತ್ರೆಗೆ ಬಂದು ಸೂಕ್ತ ಚಿಕಿತ್ಸೆ ಪಡೆಯಬೇಕು. ಇದುವರೆಗೆ ಈ ವೈರಸ್ ನಿಂದ ಸಂರಕ್ಷಣೆ ಪಡೆಯಲು ಯಾವುದೇ ಲಸಿಕೆ ಬಂದಿಲ್ಲ. ಸೊಳ್ಳೆಗಳಿಂದ ಈ ವೈರಸ್ ಹರಡದಂತೆ ಮುಂಜಾಗ್ರತೆ ವಹಿಸುವುದೇ ಇದನ್ನು ತಡೆಯುವ ವಿಧಾನವಾಗಿದೆ ಎಂದು ವಿವರಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ನರೇಂದ್ರ ಕುಮಾರ್ ಮಾತನಾಡಿ, ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ ಹೆಚ್ಚಲು ಅಗತ್ಯ ಎಲ್ಲ ಕ್ರಮಗಳನ್ನು ಕೈಗೊಂಡಿದ್ದೇವೆ. ವಿದ್ಯಾರ್ಥಿಗಳನ್ನು ಅವರ ಕಲಿಕೆಯ ಆಧಾರದಲ್ಲಿ ಎ, ಬಿ ಮತ್ತು ಸಿ ವರ್ಗಗಗಳೆಂದು ವಿಂಗಡಿಸಿ ಬಿ ಮತ್ತು ಸಿ ವಿದ್ಯಾರ್ಥಿಗಳ ಕಲಿಕೆಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದರು.
ಮುಖ್ಯವಾಗಿ ಹಾಸ್ಟೆಲ್‌ಗಳಲ್ಲಿ ಪ್ರತಿ ವಿದ್ಯಾರ್ಥಿಗೂ ಆ ವಿದ್ಯಾರ್ಥಿ ಯಾವ ವಿಷಯದಲ್ಲಿ ಹಿಂದೆ ಬಿದ್ದಿರುತ್ತಾರೋ ಆ ವಿಷಯದ ರಾತ್ರಿ ಪಾಠ ಮಾಡಿಸಲು ವ್ಯವಸ್ಥೆ ಮಾಡಲಾಗುವುದು. ಈ ವರ್ಷ ಇನ್ನಷ್ಟು ಫಲಿತಾಂಶದ ಪ್ರಮಾಣವನ್ನು ಹೆಚ್ಚಿಸಲಾಗುವುದು ಎಂದು ವಿವರಿಸಿದರು.
ತಾಲ್ಲೂಕು ಪಂಚಾಯಿತಿ ಆಡಳಿತಾಧಿಕಾರಿ ಜಾವೀದಾ ನಸೀಮಾ ಖಾನಂ ಮಾತನಾಡಿ, ಕಳೆದ ವಾರ ಶಿಡ್ಲಘಟ್ಟಕ್ಕೆ ಜಿಲ್ಲಾಉಸ್ತುವಾರಿ ಕಾರ್ಯದರ್ಶಿಗಳು ಭೇಟಿ ನೀಡಿದಾಗ ಶಿಡ್ಲಘಟ್ಟದಲ್ಲಿ ಸೂಕ್ತವಾಗಿ ಕಸ ವಿಲೇವಾರಿ ಆಗುತ್ತಿಲ್ಲ. ಸ್ವಚ್ಚತೆ ಇಲ್ಲ ಎಂದು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕ ಆಸ್ಪತ್ರೆ, ಬಿಸಿಎಂ ಹಾಸ್ಟೆಲ್ ಇನ್ನಿತರೆ ಕಡೆ ಭೇಟಿ ನೀಡಿದ್ದಾಗ ಅವರ ಕಣ್ಣಿಗೆ ಸ್ವಚ್ಚ ನೈರ್ಮಲ್ಯದ ಕೊರತೆ ಕಂಡಿದೆಯಲ್ಲದೆ ಸಾರ್ವಜನಿಕರಿಂದಲೂ ಈ ಬಗ್ಗೆ ದೂರುಗಳು ಬಂದಿದ್ದು ಅದನ್ನು ಅವರು ಸರ್ಕಾರದ ಮಟ್ಟದಲ್ಲಿ ಪ್ರಸ್ತಾಪಿಸಿದ್ದಾರೆ.
ಎಲ್ಲರೂ ಸಹ ಸ್ವಚ್ಚತೆ ಬಗ್ಗೆ ಹೆಚ್ಚಿನ ಒತ್ತು ನೀಡಿ ತಮ್ಮ ತಮ್ಮಇಲಾಖೆ ವ್ಯಾಪ್ತಿಯಲ್ಲಿ ಸ್ವಚ್ಚತೆ ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಅಧಿಕಾರಿಗಳಲ್ಲಿ ಮನವಿ ಮಾಡಿದರು.
ತಾಲ್ಲೂಕು ಪಂಚಾಯಿತಿ ಇಒ ಮುನಿರಾಜು, ರೇಷ್ಮೆ ಇಲಾಖೆಯ ಎಂ.ಸಿ.ಚಂದ್ರಪ್ಪ, ಸಮಾಜ ಕಲ್ಯಾಣ ಇಲಾಖೆಯ ಜಗದೀಶ್, ಬಿಸಿಎಂ ಇಲಾಖೆ ಸಂಗಪ್ಪ ಪಾಟೀಲ್, ಸಿಡಿಪಿಒ ಇಲಾಖೆಯ ಮಮತ, ಬಿಸಿಯೂಟದ ಆಂಜನೇಯಲು ಸಭೆಯಲ್ಲಿ ಹಾಜರಿದ್ದರು.